Belagavi ಪೊಲೀಸ್ ವಶದಲ್ಲಿದ್ದ ಆರೋಪಿ ಸಾವು, ಮಗಳಿಂದ ಲಾಕಪ್ ಡೆತ್ ಆರೋಪ, ಪ್ರಕರಣ ಸಿಐಡಿಗೆ ವರ್ಗ

By Suvarna News  |  First Published Nov 12, 2022, 6:23 PM IST

ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರ ವಶದಲ್ಲಿದ್ದ ಆರೋಪಿ ಅನುಮಾನಸ್ಪದ ಸಾವು. ತನ್ನ ತಂದೆಗೆ ಟಾರ್ಚರ್ ಮಾಡಿದ್ದು ಇದು ಲಾಕಪ್ ಡೆತ್ ಎಂದ ಪುತ್ರಿ. ಕಸ್ಟೋಡಿಯಲ್ ಡೆತ್ ಕೇಸ್ ದಾಖಲಿಸಿ ಸಿಐಡಿಗೆ ವರ್ಗಾವಣೆ ಎಂದ್ರು ಪೊಲೀಸ್ ಕಮಿಷನರ್.


ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಳಗಾವಿ (ನ.12): ಮಾದಕ ದ್ರವ್ಯ ಮತ್ತು ಉದ್ದೀಪನ ವಸ್ತುಗಳ ಸೇವನೆ ತಡೆ ಕಾಯ್ದೆಯಲ್ಲಿ ವಶಕ್ಕೆ ಪಡೆದ ಆರೋಪಿ ಪೊಲೀಸರ ವಶದಲ್ಲಿದ್ದಾಗಲೇ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ‌. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ನಿವಾಸಿ 45 ವರ್ಷದ ಬಸನಗೌಡ ಪಾಟೀಲ್ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಲಾಕಪ್ ಡೆತ್ ಆರೋಪ ಕೇಳಿ ಬಂದಿದೆ. ಮೃತ ಆರೋಪಿ ಬಸನಗೌಡ ಪಾಟೀಲ್ ಪತ್ನಿ ನೀಡಿದ ದೂರಿನ ಮೇರೆಗೆ ಕಸ್ಟೋಡಿಯಲ್ ಡೆತ್ ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಸಿಐಡಿಗೆ ಪ್ರಕರಣ ವರ್ಗಾಯಿಸಿದ್ದಾರೆ.ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ ದೌಡಾಯಿಸಿದ್ದರು.‌ ಕುಟುಂಬಸ್ಥರ ಬಳಿ ಮಾಹಿತಿ ಪಡೆದರು‌. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, 'ಹಳೆಯ NDPS ಪ್ರಕರಣವೊಂದರ ಸಂಬಂಧ ಬಸನಗೌಡ ಪಾಟೀಲ್ ಎಂಬಾತನನ್ನು ವಿಚಾರಣೆಗಾಗಿ ನಮ್ಮ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಬೆಲ್ಲದ ಬಾಗೇವಾಡಿಯಿಂದ ಬೆಳಗಾವಿಗೆ ಕರೆ ತರುವ ಸಂದರ್ಭದಲ್ಲಿ ಕಾಕತಿ ಬಳಿ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ, ಬೆವರು ಬಂದಿದೆ. ತಕ್ಷಣ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. 

Tap to resize

Latest Videos

ನಂತರ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡ ಬಂದ ಮೇಲೆ ವಾಂತಿ, ಬೆವರು ಜಾಸ್ತಿ ಆಗಿದೆ. ಬಳಿಕ ತಕ್ಷಣ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆಗ ಹೃದಯಾಘಾತ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ತಕ್ಷಣ ಇಸಿಜಿ ಸೇರಿ ಚಿಕಿತ್ಸೆ ಕೊಡಿಸಿದ್ರು ಪ್ರಯೋಜನ ಆಗಿಲ್ಲ.‌ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಸನಗೌಡ ಪಾಟೀಲ್ ಮೃತಪಟ್ಟಿದ್ದಾರೆ. ತಾಂತ್ರಿಕವಾಗಿ ಇದು ಪೊಲೀಸ್ ಕಸ್ಟೊಡಿಯಲ್ ಡೆತ್ ಎಂದು ಪ್ರಕರಣ ದಾಖಲಾಗಿದ್ದು ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಲಿದೆ. ಯಾವುದೇ ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಸ್ಟೊಡಿಯಲ್ ಡೆತ್ ಬಗ್ಗೆ ಸಿಐಡಿಯಿಂದ ಪ್ರಕರಣ ತನಿಖೆ ನಡೆಯಲಿದೆ' ಎಂದು ತಿಳಿಸಿದ್ದಾರೆ.

ನನ್ನ ತಂದೆಯದ್ದು ಲಾಕಪ್ ಡೆತ್ ಎಂದು ಕಣ್ಣೀರಿಟ್ಟ ಮಗಳು:
ಇನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರ ಎದುರು ಬಸನಗೌಡ ಪಾಟೀಲ್ ಪತ್ನಿ, ಪುತ್ರಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತನ್ನ ತಂದೆಯದ್ದು ಲಾಕಪ್ ಡೆತ್ ಆಗಿದೆ. ನನ್ನ ತಂದೆಯ ಕೈ ಮೇಲೆ ಹಗ್ಗದಿಂದ ಕಟ್ಟಿದ ಮಾರ್ಕ್ ಇತ್ತು. ನನ್ನ ತಂದೆಯ ಸಾವಿಗೆ ನ್ಯಾಯ ಬೇಕು. ನಾನು ಕಾನೂನು ಹೋರಾಟ ಮುಂದುವರಿಸುವೆ ಅಂತಾ ಮೃತ ಬಸನಗೌಡ ಪಾಟೀಲ್ ಪುತ್ರಿ ರೋಹಿಣಿ ಪಾಟೀಲ್ ತಿಳಿಸಿದ್ದಾಳೆ. 

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೃತ ಬಸನಗೌಡ ಪುತ್ರಿ ರೋಹಿಣಿ ಪಾಟೀಲ್, 'ನನ್ನ ತಂದೆಯದ್ದು ಲಾಕಪ್ ಡೆತ್ ಆಗಿದೆ ನನಗೆ ನ್ಯಾಯ ಬೇಕು ಅಂತಾ ಕಣ್ಣೀರಿಟ್ಟಿದ್ದಾರೆ. ಪೊಲೀಸರು ಸುಳ್ಳು ಕೇಸ್ ಹಾಕಿ ಯಾವುದೇ ಮಾಹಿತಿ ನೀಡದೇ ಕರೆದುಕೊಂಡು ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಮೃತ ಬಸನಗೌಡ ಪುತ್ರಿ ರೋಹಿಣಿ, 'ನಿನ್ನೆ ರಾತ್ರಿ ಮತ್ತೆ ಪೋನ್ ಮಾಡಿ ನಿಮ್ಮ ತಂದೆಯನ್ನ ಕರೆದುಕೊಂಡು ಹೋಗು ಅಂತಾ ಹೇಳಿದ್ದಾರೆ. ನಾನು ಆಸ್ಪತ್ರೆಗೆ ಬಂದು ನೋಡಿದಾಗ ಜೀವಂತ ಇದ್ದಾರೆ ಅಂತಾ ಹೇಳಿದ್ರು. ನಾನು ಪ್ಯಾರಾ ಮೆಡಿಕಲ್ ಸ್ಟೂಡೆಂಟ್ ಆಗಿದ್ದು ತಂದೆಯ ಪಲ್ಸ್  ಚೆಕ್ ಮಾಡಿದಾಗ ಪಲ್ಸ್ ಸೆನ್ಸೆಷನ್ ಆಗಿರಲಿಲ್ಲ. ನನಗೆ ಡೌಟ್ ಬಂದು ಸ್ಟೇಥೆಸ್ಕೋಪ್ ಕೊಡಿ ಅಂತಾ ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಬಳಿ ಕೇಳಿದೆ. ಆಗ ಹೀ ಇಸ್ ನೋ ಮೋರ್ ಅಂತಾ ಹೇಳಿದರು. 

ಗಾಂಜಾ ಮಾಫಿಯಾ ದಾಳಿಯಿಂದ ಆಸ್ಪತ್ರೆ ದಾಖಲಾಗಿದ್ದ ಇನ್ಸ್‌ಪೆಕ್ಟರ್ ಇಲ್ಲಾಳ ಆರೋಗ್ಯದಲ್ಲಿ ಚೇತರಿಕೆ!

ತಂದೆಯ ಎರಡೂ ಕೈಗೆ ಹಗ್ಗದಿಂದ ಕಟ್ಟಿದ ಮಾರ್ಕ್ ಇದೆ. ನನ್ನ ತಂದೆಯದ್ದು ಲಾಕಪ್ ಡೆತ್ ಆಗಿದೆ. ನಾನು ಡಿಗ್ರಿ ಮಾಡಬೇಕು, ನಮ್ಮ ಅಣ್ಣ ಈಗಷ್ಟೇ ಕೆಲಸಕ್ಕೆ ಸೇರಿದ್ದಾನೆ. ನಮ್ಮ ಮನೆಯ ನಂದಾದೀಪ ಆರಿ ಹೋಗಿದೆ. ಮರಣೋತ್ತರ ಪರೀಕ್ಷೆಗೆ ನ್ಯಾಯಾಧೀಶರು ಬಂದಾಗ ಎಲ್ಲ ವಿಷಯ ಹೇಳಿದ್ದೇನೆ. ಈ ವೇಳೆ ಪೊಲೀಸರಿಗೆ ನ್ಯಾಯಾಧೀಶರು ತರಾಟೆಗೆ ತಗೆದುಕೊಂಡಿದ್ದಾರೆ. ತಂದೆ ಸಾವಿನ ನ್ಯಾಯಕ್ಕೆ ಆಗ್ರಹಿಸಿ ಕಾನೂನು ಹೋರಾಟ ಮುಂದುವರೆಸುತ್ತೇನೆ' ಎಂದು ತಿಳಿಸಿದ್ದಾರೆ.

ಲಾಕಪ್‌ ಡೆತ್‌ ಪ್ರಕರಣ: ಪತ್ನಿಗೆ 4.15 ಲಕ್ಷ ರು. ಪರಿಹಾರ

ಒಟ್ಟಾರೆ ಪೊಲೀಸರ ವಶದಲ್ಲಿದ್ದ ಆರೋಪಿ ಬಸನಗೌಡ ಪಾಟೀಲ್ ಸಾವಿನ ಬಗ್ಗೆ ನೂರೆಂಟು ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ್ ಟೋಪಣ್ಣವರ್ ಆಗ್ರಹಿಸಿದ್ದಾರೆ. ಸದ್ಯ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿದ್ದು ಬಸನಗೌಡ ಪಾಟೀಲ್ ಸಾವಿಗೆ ನೈಜ ಕಾರಣ ಏನು ಎಂಬುದು ನಿಷ್ಪಕ್ಷಪಾತ ತನಿಖೆಯಾಗಿ ಮೃತನ ಕುಟುಂಬಕ್ಕೆ ನ್ಯಾಯ ಸಿಗಲಿ ಎಂಬುದು ಸಾರ್ವಜನಿಕರ ಆಗ್ರಹ.

click me!