
ಕಾರವಾರ (ಜ.12): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ 'ಬ್ಯಾಂಕ್ ಆಫ್ ಬರೋಡಾ' (Bank of Baroda) ಶಾಖೆಯಲ್ಲಿ ತಡರಾತ್ರಿ ಆಘಾತಕಾರಿ ದರೋಡೆಗೆ ಯತ್ನ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ಇರುವ ಈ ಬ್ಯಾಂಕ್ ಅನ್ನು ಗುರಿಯಾಗಿಸಿಕೊಂಡಿದ್ದ ದುಷ್ಕರ್ಮಿಗಳ ಪ್ಲಾನ್ ಕೊನೆಗೂ ವಿಫಲವಾಗಿದೆ.
ಖದೀಮರು ಅತ್ಯಂತ ವ್ಯವಸ್ಥಿತವಾಗಿ ದರೋಡೆಗೆ ಸ್ಕೆಚ್ ಹಾಕಿದ್ದರು. ಬ್ಯಾಂಕ್‌ನ ಹಿಂಭಾಗಕ್ಕೆ ತೆರಳಿದ ದರೋಡೆಕೋರರು, ಅಲ್ಲಿನ ಶೌಚಾಲಯದ ಗೋಡೆಯನ್ನು ಕೊರೆದು ಬ್ಯಾಂಕ್ ಒಳಪ್ರವೇಶಿಸಿದ್ದಾರೆ. ಜನನಿಬಿಡ ಹೆದ್ದಾರಿಯ ಪಕ್ಕದಲ್ಲೇ ಇದ್ದರೂ ಯಾರಿಗೂ ಸಂಶಯ ಬರದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಒಳ ನುಗ್ಗಿದ ದುಷ್ಕರ್ಮಿಗಳು ನೇರವಾಗಿ ಬ್ಯಾಂಕ್‌ನ ಸ್ಟ್ರಾಂಗ್ ರೂಮ್‌ಗೆ (Strong Room) ಲಗ್ಗೆ ಇಟ್ಟಿದ್ದಾರೆ. ಹಣ ಹಾಗೂ ಚಿನ್ನಾಭರಣವಿದ್ದ ಸ್ಟ್ರಾಂಗ್ ರೂಮ್‌ನ ಗೋಡೆಯನ್ನು ಒಡೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಗೋಡೆ ಭದ್ರವಾಗಿದ್ದ ಕಾರಣ ಮತ್ತು ಸಮಯದ ಅಭಾವದಿಂದಾಗಿ ಸ್ಟ್ರಾಂಗ್ ರೂಮ್ ಓಪನ್ ಮಾಡಲು ಸಾಧ್ಯವಾಗದೆ ದರೋಡೆಕೋರರು ಬರಿಗೈಲಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಂಕೋಲಾ ಪೊಲೀಸರು
ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಸಿಬ್ಬಂದಿ ಗೋಡೆ ಕೊರೆದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬ್ಯಾಂಕ್ ಆವರಣದಲ್ಲಿ 15ಕ್ಕೂ ಹೆಚ್ಚು ಪೊಲೀಸರು ಠಿಕಾಣಿ ಹೂಡಿದ್ದು, ತೀವ್ರವಾಗಿ ತನಿಖೆಗಿಳಿದಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ
ಪೊಲೀಸರು ಬ್ಯಾಂಕ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ದರೋಡೆಕೋರರ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆಯಿಂದಾಗಿ ಬ್ಯಾಂಕ್ ಭದ್ರತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ