60 ರ ಅರುಳು ಮರಳು: ಮಾನದ ಜೊತೆ ಹೋದ ಕಾಸೆಷ್ಟು?

By Anusha Kb  |  First Published Dec 1, 2023, 12:46 PM IST

ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಮಾಡಿದ ಚಾಟ್‌ನಿಂದ 69 ವರ್ಷದ ವೃದ್ಧರೊಬ್ಬರು ಬರೋಬ್ಬರಿ 1.7 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. 


ಬೆಂಗಳೂರು: ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಮಾಡಿದ ಚಾಟ್‌ನಿಂದ 69 ವರ್ಷದ ವೃದ್ಧರೊಬ್ಬರು ಬರೋಬ್ಬರಿ 1.7 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಈ ಹಿರಿಯ ನಾಗರಿಕರಿಗೆ ಅಪರಿಚಿತ ಯುವತಿಯೊಬ್ಬಳು ಪರಿಚಯವಾಗಿದ್ದಾಳೆ. ಒಂದು ದಿನ ಯುವತಿ ಈ ವೃದ್ಧನಿಗೆ ಬೆತ್ತಲೆ ವೀಡಿಯೋ ಕರೆ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ನಂತರ ಆಕೆಯ ಸಹಚರರು ವೃದ್ಧನಿಂದ ವಸೂಲಿಗಿಳಿದಿದ್ದಾರೆ. ಕೊಡುವಷ್ಟು ಕೊಟ್ಟರೂ ಈ ಕಿರಾತಕರು ಬೆದರಿಕೆ ಮುಂದುವರಿಸಿದಾಗ ವೃದ್ಧ ಪೊಲೀಸರ ಮೊರೆ ಹೋಗಿದ್ದಾರೆ.  

ವೈಟ್‌ಫೀಲ್ಡ್ ಸಮೀಪದ ಗುಂಜೂರು ಎಂಬಲ್ಲಿ ವಾಸ ಮಾಡುತ್ತಿದ್ದ, ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದ ಸಾಜನ್(69) (ಹೆಸರು ಬದಲಾಯಿಸಲಾಗಿದೆ.)  ಎಂಬುವರು ಈ ಮೋಸದ ಬಗ್ಗೆ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ನೀಡಿದ ದೂರಿನಲ್ಲಿ ಫೇಸ್‌ಬುಕ್‌ನಲ್ಲಿ ಕೋಮಲ್ ಶರ್ಮಾ ಎಂಬಾಕೆಯೊಂದಿಗೆ ಇವರು ಚಾಟ್ ಮಾಡಿದ್ದಾರೆ.

Latest Videos

undefined

ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ... ನಗ್ನ ಲೇಡಿಯ ಖೆಡ್ಡಾಗೆ ಬಿದ್ದು ಲಕ್ಷ ಲಕ್ಷ ಕಳಕೊಂಡ!

ನವಂಬರ್ 21 ರಂದು ಈ ಕೋಮಲ್ ಶರ್ಮಾ ವೀಡಿಯೋ ಕರೆ ಮಾಡಲು ಶುರು ಮಾಡಿದ್ದಾರೆ. ಮೊದಲಿಗೆ ಬಂದ ವೀಡಿಯೋ ಕರೆಯನ್ನು ಇವರು ಕಟ್ ಮಾಡಿದ್ದಾರೆ. ಆದರೆ ನಿರಂತರವಾಗಿ ಕೋಮಲ್ ಕರೆ ಮಾಡುತ್ತಲೇ ಇದ್ದು ಕೊನೆಗೂ ಇವರು ಕರೆ ಸ್ವೀಕರಿಸಿದ್ದಾರೆ.  ಈ ವೇಳೆ ವಿವಸ್ತ್ರವಾಗಿದ್ದ ಮಹಿಳೆಯೊಬ್ಬಳು ಇವರೊಂದಿಗೆ ಅಸಭ್ಯವಾಗಿ ಮಾತನಾಡಲು ಶುರು ಮಾಡಿದ್ದಾರೆ.  ಈ ವೇಳೆ ಸಾಜನ್ ಅವರು ಕರೆ ಕಟ್ ಮಾಡಿ ಮತ್ತೆ ಕರೆ ಮಾಡದಂತೆ ಸೂಚಿಸಿದರಂತೆ ಆದರೆ ಸ್ವಲ್ಪ ಹೊತ್ತಿನಲ್ಲಿ ಆಕೆ ಇವರಿಗೆ ವೀಡಿಯೋವೊಂದನ್ನು ಕಳುಹಿಸಿದ್ದು, ಅದರಲ್ಲಿ ಮಹಿಳೆ ಹಾಗೂ ಈ ವ್ಯಕ್ತಿ ಇಬ್ಬರೂ ಇರುವ ದೃಶ್ಯವಿತ್ತಂತೆ ಇದನ್ನು ತೋರಿಸಿದ ಆಕೆ ತನಗೆ ಹಣ ಪಾವತಿ ಮಾಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವುದಾಗಿ ಆಕೆ ಬೆದರಿಕೆ ಹಾಕಲು ಶುರು ಮಾಡಿದ್ದಾಳೆ. 

ಬೆತ್ತಲೆ ವಿಡಿಯೋ ಇಡ್ಕೊಂಡು ಬೆಂಗ್ಳೂರಿನ ಉದ್ಯೋಗಿಗೆ ಆನ್‌ಲೈನ್ ‘ಗೆಳತಿ’ ಬ್ಲ್ಯಾಕ್‌ಮೇಲ್‌: 23 ಲಕ್ಷ ಹರೋಹರ!

ಇದಾದ ನಂತರ ಸಾಜನ್ ಆಕೆಯ ಕರೆ ಕಟ್ ಮಾಡಿದ್ದಲ್ಲದೇ ಆಕೆಯನ್ನು ಮ್ಯಾಸೇಂಜರ್‌ನಲ್ಲಿ ಬ್ಲಾಕ್ ಮಾಡಿದ್ದಾರೆ.  ಇದಾದ ಮಾರನೇ ದಿನ ಸಾಜನ್ ಅವರಿಗೆ ಇಬ್ಬರು ಅಪರಿಚಿತರು ಕರೆ ಮಾಡಿ ತಮ್ಮ ವೀಡಿಯೋವನ್ನು ಯೂಟ್ಯೂಬ್‌ಬಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಸುಮ್ಮನಿರಬೇಕಾದರೆ 76, 500 ರೂ ನೀಡುವಂತೆ ಒತ್ತಾಯಿಸಿದ್ದಾರೆ.  ಇದಾದ ನಂತರ ಹೆದರಿದ ಸಾಜನ್ ಅಪರಿಚಿತ ಖದೀಮರು ನೀಡಿದ ಖಾತೆ ಸಂಖ್ಯೆಗೆ ಇಷ್ಟು ಹಣವನ್ನು ಪಾವತಿ ಮಾಡಿದ್ದಾರೆ. ಇದಾದ ಬಳಿಕ ಮತ್ತೊರ್ವ ಕರೆ ಮಾಡಿದ್ದು, 94 ಸಾವಿರ ನೀಡುವಂತೆ ಒತ್ತಾಯಿಸಿ ಇದೇ ರೀತಿ ಬೆದರಿಕೆಯೊಡ್ಡಿದ್ದಾನೆ. ಮಾನಕ್ಕೆ ಅಂಜಿದ್ದ ಅವರು ಮತ್ತೆ 94 ಸಾವಿರ ಹಣವನ್ನು ಡಿಜಿಟಲ್ ಪೇಮೆಂಟ್ ಮೂಲಕ ಟ್ರಾನ್ಸ್ಫರ್ ಮಾಡಿದ್ದಾರೆ. 

ಆದರೆ ಈ ಖದೀಮರು ಮತ್ತೆ ಮತ್ತೆ ಬೆತ್ತಲೆ ವೀಡಿಯೋ ನೆಪ ಹೇಳಿ ವಸೂಲಿಗಿಳಿದಿದ್ದರಿಂದ ಬೆದರಿದ ಸಾಜನ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಹೀಗಾಗಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಭಾರತೀಯ ದಂಡ ಸಂಹಿತೆ ಹಾಗೂ ಸೈಬರ್ ಅಪರಾಧ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪರಿಚಿತ ಯುವತಿಯೊಂದಿಗೆ ಚಾಟ್ ಮಾಡಿದ್ದಾಗಿ ಸಾಜನ್ ಹೇಳಿದ್ದಾರೆ. ಆದರೆ ವೀಡಿಯೋ ಕರೆ ವೇಳೆ ಅವರು ಬೆತ್ತಲಾಗಿದ್ದಾರೋ ಇಲ್ಲವೋ ತಿಳಿದು ಬಂದಿಲ್ಲ, ಅವರು ತನ್ನ ಫೋಟೋವನ್ನು ಅಶ್ಲೀಲವಾಗಿ ತಿದ್ದಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

click me!