ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!

Kannadaprabha News   | Kannada Prabha
Published : Dec 20, 2025, 05:29 AM IST
Bengaluru

ಸಾರಾಂಶ

ಮನೆ ಮುಂದೆ ಆಟವಾಡುತ್ತಿದ್ದ ನೆರೆಹೊರೆಯ ಮಕ್ಕಳಿಗೆ ಕಾಲಿನಿಂದ ಒದ್ದು ಕ್ರೌರ್ಯ ಮೆರೆದು ಭೀತಿ ಸೃಷ್ಟಿಸಿದ್ದ ಯುವಕನೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದ್ದಾರೆ.

ಬೆಂಗಳೂರು : ಮನೆ ಮುಂದೆ ಆಟವಾಡುತ್ತಿದ್ದ ನೆರೆಹೊರೆಯ ಮಕ್ಕಳಿಗೆ ಕಾಲಿನಿಂದ ಒದ್ದು ಕ್ರೌರ್ಯ ಮೆರೆದು ಭೀತಿ ಸೃಷ್ಟಿಸಿದ್ದ ಯುವಕನೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದ್ದಾರೆ.

ತ್ಯಾಗರಾಜನಗರದ ಹಳೇ ಅಂಚೆ ಕಚೇರಿ ರಸ್ತೆ ನಿವಾಸಿ ಎಂ.ರಂಜನ್‌ ಬಂಧಿತನಾಗಿದ್ದು, ವೈದ್ಯಕೀಯ ಕಾರಣಕ್ಕೆ ಆತನಿಗೆ ಠಾಣಾ ಮಂಜೂರು ಮಾಡಿ ಬಿಡುಗಡೆಗೊಳಿಸಲಾಗಿದೆ. ಮನೆ ಮುಂದಿನ ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ರಂಜನ್ ಹೊಡೆದು ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಬನಶಂಕರಿ ಠಾಣೆಗೆ ಭಾನುವಾರ ಸ್ಥಳೀಯ ನಿವಾಸಿ ದೀಪಿಕಾ ಜೈನ್‌ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾನಸಿಕ ಕಾಯಿಲೆ?:

ತ್ಯಾಗರಾಜನಗರದಲ್ಲಿ ಕುಟುಂಬ ಸಮೇತ ನೆಲೆಸಿರುವ ತಮಿಳುನಾಡು ಮೂಲದ ಗುತ್ತಿಗೆದಾರ ಮನೋಹರ್ ಅವರ ಪುತ್ರ ರಂಜನ್‌, ಬಿಕಾಂ ಓದಿದ್ದರೂ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ. ಮೊದಲು ಯಾರ ತಂಟೆ ತಕರಾರಿಗೂ ಹೋಗದೆ ತಾನಾಯಿತು, ತನ್ನ ಕೆಲಸವಾಯಿತು ಎನ್ನುವಂತಿದ್ದ ಆತನ ವರ್ತನೆ ಕೆಲ ದಿನಗಳಿಂದ ದಿಢೀರ್‌ ಬದಲಾಗಿತ್ತು ಎನ್ನಲಾಗಿದೆ.

ನೆರೆಹೊರೆ ಮಕ್ಕಳ ಮೇಲೆ ರಂಜನ್‌ ಕ್ರೌರ್ಯ ಮೆರೆಯುತ್ತಿದ್ದ. ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಏಕಾಏಕಿ ಹಿಂದಿನಿಂದ ಬಂದು ಒದೆಯುವುದು, ಬೈಕ್‌ ಗುದ್ದಿಸುವುದು, ತಲೆಗೆ ಹೊಡೆಯುವುದು ಹಾಗೂ ಗುದ್ದುವುದು... ಹೀಗೆ ದೌರ್ಜನ್ಯ ಮಾಡುತ್ತಿದ್ದ. ಈ ಕಿರುಕುಳ ಸಹಿಸಲಾರದೆ ಸ್ಥಳೀಯರು ರಂಜನ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಆತನಿಗೆ ಪೋಷಕರೂ ಬುದ್ಧಿಮಾತು ಹೇಳಿದ್ದರು.

ಈ ನಡುವೆ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ದೀಪಿಕಾ ಜೈನ್ ಅವರ ಪುತ್ರ ಆಟವಾಡುವಾಗ ಹಿಂದಿನಿಂದ ಒದ್ದು ರಂಜನ್‌ ಅಮಾನವೀಯವಾಗಿ ನಡೆದುಕೊಂಡಿದ್ದ. ಈ ವೇಳೆ ಕೆಳಗೆ ಬಿದ್ದ ಬಾಲಕನಿಗೆ ಪೆಟ್ಟಾಗಿತ್ತು. ಘಟನೆಯಿಂದ ಕೆರಳಿದ ದೀಪಿಕಾ, ಬನಶಂಕರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಮಾನಸಿಕ ಕಾಯಿಲೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ತಲೆಗೆ ಪೆಟ್ಟಾಗಿ ವರ್ತನೆ ಬದಲಾವಣೆ

ಮೂರು ತಿಂಗಳ ಹಿಂದೆ ಬೈಕ್‌ನಿಂದ ಬಿದ್ದು ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಮಕ್ಕಳ ಚೀರಾಟದ ಶಬ್ದ ಕೇಳಿದರೆ ಕಿರಿಕಿರಿ ಉಂಟಾಗುತ್ತಿತ್ತು. ಇದರಿಂದ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾಗಿ ವಿಚಾರಣೆ ವೇಳೆ ರಂಜನ್ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.

ಚಿಕಿತ್ಸೆಗಾಗಿ ಮಧುರೈಗೆ ರಂಜನ್ ಶಿಫ್ಟ್

ಈ ರಗಳೆ ಬಳಿಕ ವೈದ್ಯಕೀಯ ಚಿಕಿತ್ಸೆ ಸಲುವಾಗಿ ತಮಿಳುನಾಡಿನಲ್ಲಿರುವ ಸೋದರ ಸಂಬಂಧಿ ಮನೆಗೆ ರಂಜನ್‌ನನ್ನು ಪೋಷಕರು ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನ ಮಧುರೈಗೆ ರಂಜನ್‌ನನ್ನು ಕರೆದುಕೊಂಡು ಹೋಗಿ ಕುಟುಂಬದವರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈತನ ವರ್ತನೆ ದಿಢೀರ್ ಬದಲಾವಣೆ ಬಗ್ಗೆ ಪೋಷಕರಿಗೆ ಸಹ ಆತಂಕವಾಗಿದೆ. ಮೊದಲು ಸ್ಥಳೀಯವಾಗಿ ಒಳ್ಳೆಯ ಅಭಿಪ್ರಾಯ ಹೊಂದಿದ್ದ ರಂಜನ್ ಈಗ ವಿರೋಧ ಕಟ್ಟಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರನ ₹8 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ!
ದರ್ಶನ್ ಭೇಟಿಗೆ, ಪವಿತ್ರಾ ಗೌಡ ಪರಿಪರಿಯಾಗಿ ಬೇಡಿಕೊಂಡರೂ ಡಿಜಿಪಿ ಅಲೋಕ್ ಕುಮಾರ್ ನಿರಾಕರಿಸಿದ್ದೇಕೆ!