
ಆಂಟಿಯರು ಬೇಕಾ, ಹುಡುಗಿಯರು ಬೇಕಾ? ಎಂದು ಜಾಹೀರಾತು ನೀಡಿ ವಿವಿಧ ಜಿಲ್ಲೆಗಳ ಹಲವಾರು ಮಂದಿಗೆ ಟೋಪಿ ಹಾಕಿದ ಖದೀಮ ಕೊನೆಗೂ ಮಡಿಕೇರಿ ಹೆಸರು ಹೇಳಿ ಅರೆಸ್ಟ್ ಆಗಿದ್ದಾನೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಇದೇ ಜಾಹೀರಾತು ನೀಡಿ, ಅದಾಗಲೇ ಹಲವರನ್ನು ಬಲೆಗೆ ಬೀಳಿಸಿಕೊಂಡು ಕೈತುಂಬಾ ಸಂಪಾದಿಸಿದ್ದ ಈ ಭೂಪ, ಮಡಿಕೇರಿಯ ಆಂಟಿಯರ ಸುದ್ದಿಗೆ ಹೋಗಿ ತಗ್ಲಾಕ್ಕೊಂಡಿದ್ದಾನೆ. ಪತ್ನಿ ಜೊತೆ ಮಡಿಕೇರಿಯ ಸವಿಯನ್ನು ಸವಿಯಲು ಹೋದಾತ ಈಗ ಜೈಲು ಪಾಲಾಗಿದ್ದಾನೆ.
ಈ ಭೂಪನ ಹೆಸರು ನಾಗಪ್ಪ ಹನುಮಂತ ಲಮಾಣಿ. ವಯಸ್ಸು 26. ಇವನು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದವ. ಇವನ ಒಂದು ರೋಚಕ ಸ್ಟೋರಿ ಕೂಡ ಇದೆ. ಈ ಮೊದಲು ಇದೇ ರೀತಿಯ ಜಾಹೀರಾತು ನೋಡಿ, ಅಲ್ಲಿದ್ದ ನಂಬರ್ಗೆ ನಾಲ್ಕು ಸಾವಿರ ರೂಪಾಯಿ ದುಡ್ಡು ಹಾಕಿದವ ಈತ. ಆಂಟಿಯ ಆಸೆಗೆ ಹೋಗಿ ನಾಲ್ಕು ಸಾವಿರ ರೂಪಾಯಿ ಟೋಪಿ ಹಾಕಿಸಿಕೊಂಡಿದ್ದ. ಕೊನೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿ ಬಾಯಿ ಬಾಯಿ ಬಡಕೊಂಡ. ಆದರೆ, ಆಗಲೇ ಇವನಿಗೆ ಐಡಿಯಾ ಹೊಳೆದೇ ಬಿಟ್ಟಿತು. ಇಷ್ಟೊಂದು ಸುಲಭದಲ್ಲಿ ಹಣ ಮಾಡಬಹುದಲ್ಲಾ ಎನ್ನುವ ಐಡಿಯಾ ಅದು.
ಅಲ್ಲಿಂದ ಆತನ ದಂಧೆ ಶುರುವಾಯಿತು. ಹಲವಾರು ಊರುಗಳಿಗೆ ಸುತ್ತಿ ಇದೇ ಜಾಹೀರಾತನ್ನು ನೀಡಿದ. ಆಂಟಿಯರೋ, ಹುಡುಗಿಯರೋ ಯಾರೋ ಒಬ್ಬರು ಸಿಗುತ್ತಾರೆ ಎಂದು ಬಾಯಿ ಚಪ್ಪರಿಸಿಕೊಂಡ ಹಲವರು ಈತನಿಗೆ ದುಡ್ಡು ಹಾಕಿದ್ದೇ ಹಾಕಿದ್ದು. ಇದಕ್ಕಾಗಿ ಐದಾರು ಸಿಮ್ ಪಡೆದಿದ್ದ. ಕೊನೆಗೆ ವಾಪಸ್ ಫೋನ್ ಮಾಡಿದಾಗ ಅದು ಸ್ವಿಚ್ ಆಫ್ ಆಗಿರುತ್ತಿತ್ತು. ಆದರೆ, ಹಣ ಕೊಟ್ಟವರು ಹೇಗೆ ತಾನೆ ಕಂಪ್ಲೇಂಟ್ ಕೊಟ್ಟಾರು? ಹುಡುಗಿ, ಆಂಟಿ ಆಸೆಗೆ ದುಡ್ಡು ಕೊಟ್ಟೆ ಎಂದು ಹೇಳಲು ಆದೀತಾ, ಇಲ್ಲವೇ ಇಲ್ಲ. ಇದರಿಂದ ಬಾಯಿ ಮುಚ್ಚಿಕೊಂಡು ಅವರೆಲ್ಲಾ ಸುಮ್ಮನಾಗುತ್ತಿದ್ದರು. ಇದರಿಂದ ಈ ಆಸಾಮಿ ಭಾರಿ ಶ್ರೀಮಂತ ಆಗತೊಡಗಿದ.
ಇದನ್ನೂ ಓದಿ: Onlineನಲ್ಲಿ ವಸ್ತು ಸೇಲ್ ಮಾಡ್ತಿದ್ದೀರಾ? ಯಾಮಾರಿದ್ರೆ ಬ್ಯಾಂಕ್ ಖಾತೆ ಗೋವಿಂದ! ಈ ಅನುಭವ ಕೇಳಿ...
ಹನಿಮೂನಿಗೆ ಹೋದವ ಸಿಕ್ಕಿಬಿದ್ದ
ಕೊನೆಗೆ ಈತ ಹೋದದ್ದು ಮಡಿಕೇರಿಗೆ. ಈತ ಮಡಿಕೇರಿಗೆ ಪತ್ನಿಯೊಂದಿಗೆ ತಿರುಗಾಡಲು ಹೋಗಿದ್ದ. ಅಲ್ಲಿಯ ಬಸ್ ಸ್ಟ್ಯಾಂಡ್ನ ಫೋಟೋ ಕ್ಲಿಕ್ಕಿಸಿ, ಅದರ ಜೊತೆ ಒಂದು ಜಾಹೀರಾತು ನೀಡಿದ್ದ. ಕೊಡಗು ಜಿಲ್ಲೆಯಲ್ಲಿ ಡೇಟಿಂಗ್ ಮಾಡಲು ಯುವತಿಯರು, ಆಂಟಿಯರು ಸಿಗುತ್ತಾರೆ. ಸರ್ವಿಸ್ ಬೇಕಾದರೆ ಕರೆ ಮಾಡಿ ಎಂದು ಅದರಲ್ಲಿ ಹಾಕಿದ್ದ. ಅದಾಗಲೇ ಕೊಡಗು ಜಿಲ್ಲೆಯ ಇಬ್ಬರು ಈತನಿಗೆ ದುಡ್ಡು ಕೂಡ ಹಾಕಿಯಾಗಿತ್ತು! ಆದರೆ ಹೇಳಿಕೇಳಿ ಮಡಿಕೇರಿಯವರು ಅವರು. ಸುಮ್ಮನೇ ಇರ್ತಾರಾ? ಬೇರೆ ಊರಿನವರ ರೀತಿ ಇಲ್ಲಿಯವರು ಜಾಹೀರಾತು ನೋಡಿ ಸುಮ್ಮನೇ ಇರಲಿಲ್ಲ. ಸಿಕ್ಕಾಪಟ್ಟೆ ಗರಂ ಆಗಿಬಿಟ್ಟರು. ಕೊನೆಗೆ ಪೊಲೀಸರಿಗೆ ದೂರು ನೀಡಿದರು.
ತನಿಖೆ ನಡೆಸಿದ ಪೊಲೀಸರು, ಆತ ಕೊಟ್ಟ ಮೊಬೈಲ್ ನಂಬರ್ ಸುಳಿವು ಹಿಡಿದು ಅವನ ಜನ್ಮ ಜಾಲಾಡಿದರು. ಬಾಗಲಕೋಟೆ ಜಿಲ್ಲೆಯವ ಎಂದು ತಿಳಿದು ಅವನ ಮನೆಗೆ ಹೋಗಿ ಅರೆಸ್ಟ್ ಮಾಡಿದ್ದಾರೆ. ಅವನ ಅರೆಸ್ಟ್ ಆಗುತ್ತಿದ್ದಂತೆಯೇ ಈ ಭೂಪ ಇದಾಗಲೇ ವಿವಿಧ ಊರುಗಳಲ್ಲಿ ಇದೇ ರೀತಿ ಮೋಸ ಮಾಡಿರುವುದು ತಿಳಿದುಬಂದಿದೆ. ಸಾಲದು ಎನ್ನುವುದಕ್ಕೆ ಕೊಡಗಿನ ಇಬ್ಬರು ಕೂಡ ಹಣ ಹಾಕಿರುವುದಾಗಿ ಹೇಳಲಾಗುತ್ತಿದೆ. ಇದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ