
ಬೆಂಗಳೂರು(ಡಿ.22): ಕಾರ್ಮಿಕರಿಂದ ಕಡಿತಗೊಳಿಸಿದ್ದ ಭವಿಷ್ಯ ನಿಧಿ (ಪಿಎಫ್) ಹಣವನ್ನು ಸರ್ಕಾರಕ್ಕೆ ಜಮೆ ಮಾಡದೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಬಂಧನಕ್ಕೆ ಪಿಎಫ್‌ಒ ಪ್ರಾದೇಶಿಕ ಭವಿಷ್ಯ ನಿಧಿ-2 ಆಯುಕ್ತರು ವಾರಂಟ್ ಹೊರಡಿಸಿದ್ದಾರೆ.
ರಾಬಿನ್ ಉತ್ತಪ್ಪ ಅವರು ಸೆಂಚುರೀಸ್ ಲೈಫ್‌ಸ್ಟೈಲ್ ಬ್ರಾಂಡ್ ಕಂಪನಿಯ ನಿರ್ದೇಶಕರಾಗಿದ್ದಾರೆ. ಕಾರ್ಮಿಕರ ಸಂಬಳದಲ್ಲಿ ₹23.36 ಲಕ್ಷವನ್ನು ಉದ್ಯೋಗಿಗಳ ಭವಿಷ್ಯ ನಿಧಿಗೆ ಕಡಿತ ಮಾಡಿ ಸಂಗ್ರಹಿಸಲಾಗಿದೆ. ಆದರೆ ಇದನ್ನು ಸರ್ಕಾರಕ್ಕೆ ಪಾವತಿಸದೆ ವಂಚಿಸಿದ್ದಾರೆ ಎಂದು ಪಿಎಫ್‌ಓ ಪ್ರಾದೇಶಿಕ ಭವಿಷ್ಯ ನಿಧಿ-2ರ ಆಯುಕ್ತ ಷಡಾಕ್ಷರ ಗೋಪಾಲರೆಡ್ಡಿ ವರದಿ ಮಾಡಿದ್ದಾರೆ. ಅಲ್ಲದೆ ರಾಬಿನ್ ಉತ್ತಪ್ಪರನ್ನು ಬಂಧಿಸುವಂತೆ ಅವರು ವಾರಂಟ್ ಹೊರಡಿಸಿದ್ದಾರೆ.
ಬಸವಕಲ್ಯಾಣ: ಮನೆಗಳವು ಮಾಡಿ ಹೊಸ ಬೀಗ ಜಡಿದ ಕಳ್ಳರು!
ಪ್ರಸ್ತುತ ವಿಳಾಸದಲ್ಲಿಲ್ಲ:
ರಾಬಿನ್ ಉತ್ತಪ್ಪ ಅವರು ಆ ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಆಗಿರುವುದರಿಂದ ಅವರನ್ನು ಬಂಧಿಸುವಂತೆ ಗೋಪಾಲರೆಡ್ಡಿ ಅವರು ಡಿ.4ರಂದು ವಾರಂಟ್ ಹೊರಡಿಸಿ ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಆದರೆ 'ಉತ್ತಪ್ಪ ಅವರು ಪ್ರಸ್ತುತ ಈ ವಿಳಾಸದಲ್ಲಿ ವಾಸವಾಗಿಲ್ಲ ಎಂದು ಪುಲಕೇಶಿನಗರ ಪೊಲೀಸರು ಹೇಳಿದ್ದಾರೆ. ಮನೆ ಖಾಲಿ ಮಾಡಿ ಒಂದು ವರ್ಷವಾಗಿದೆ. ಆದ್ದರಿಂದ ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದು ಅವರು ಕ್ರಮ ಕೈಗೊಳ್ಳಲಿದ್ದಾರೆ' ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ನನಗೂ ಕಂಪನಿಗಳಿಗೂ ಸಂಬಂಧವಿಲ್ಲ: ಉತ್ತಪ್ಪ
ಬಂಧನ ವಾರೆಂಟ್ ಜಾರಿ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆ ನೀಡಿರುವ ಉತ್ತಪ್ಪ ಅವರು, ತಮಗೆ ಕಂಪನಿಗಳ ಜೊತೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. 'ಹಣಕಾಸಿನ ನೆರವಿನ ಕಾರಣಕ್ಕೆ ಸ್ಟ್ರಾಬೆರ್ರಿ ಲೆನ್ನೆರಿಯಾ ಪ್ರೈವೇಟ್ ಲಿ., ಸೆಂಟಾರಸ್ ಲೈಫ್‌ಸ್ಟೈಲ್ ಬ್ರಾಂಡ್ಸ್ ಪ್ರೈವೇಟ್ ಲಿ., ಬೆರ್ರಿಜ್ ಫ್ಯಾಶನ್ ಹೌಸ್ ಕಂಪನಿಗಳಿಗೆ ನಾನು 2018- 19ರಲ್ಲಿ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಆದರೆ, ಕಾರ್ಯನಿರ್ವಾಹಕನಾಗಿ ಇರಲಿಲ್ಲ ಮತ್ತು ಕಂಪನಿಯ ದೈನಂದಿನ ವ್ಯವಹಾರದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಈ ಕಂಪನಿಗಳು ನಾನು ಸಾಲದ ರೂಪದಲ್ಲಿ ನೀಡಿದ ಹಣವನ್ನು ಮರುಪಾವತಿಸಲು ವಿಫಲವಾಗಿವೆ. ಈಗ ಅದು ನ್ಯಾಯಾಲಯದಲ್ಲಿದೆ. ಅಲ್ಲದೆ ಕಂಪನಿಯ ನಿರ್ದೇಶಕ ಹುದ್ದೆಗೆ ಕೆಲ ವರ್ಷಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೇನೆ' ಎಂದು ತಿಳಿಸಿದ್ದಾರೆ.
Belagavi: ಇನ್ನೊಂದು ವಾರದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಗರ್ಭಿಣಿಯ ದಾರುಣ ಹತ್ಯೆ!
'ಕಂಪನಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದಕ್ಕೆ ನನ್ನ ಕಾನೂನು ತಂಡ ಈಗಾಗಲೇ ಉತ್ತರ ನೀಡಿದೆ. ಕಂಪನಿ ಜೊತೆ ನನಗೆ ಸಂಬಂಧವಿಲ್ಲ ಎಂಬುದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ನನ್ನ ವಿಚಾರದಲ್ಲಿ ಸರಿಯಾದ ಮಾಹಿತಿ ಇಲ್ಲದೆ ಸುದ್ದಿ ಹರಡದಿರಿ' ಎಂದು ಉತ್ತಪ್ಪ ವಿನಂತಿಸಿದ್ದಾರೆ.
• ಕಾರ್ಮಿಕರಿಂದ ₹23 ಲಕ್ಷ ರುಪಾಯಿ ಪಿಎಫ್ ಹಣ ಸಂಗ್ರಹ ಮಾಡಿದ್ದ ಸೆಂಚುರೀಸ್ ಕಂಪನಿ
• ಆದರೆ ಸರ್ಕಾರಕ್ಕೆ ಹಣ ಕಟ್ಟಲು ನಿರ್ಲಕ್ಷ್ಯ
• ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಭವಿಷ್ಯ ನಿಧಿ -2ರ ಆಯುಕ್ತರಿಂದ ವರದಿ
• ಬಂಧನಕ್ಕೆ ಪುಲಕೇಶಿನಗರ ಠಾಣೆಗೆ ಪತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ