ತಂಗಿಯ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಅಕ್ಕನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡತೋಗೂರು ನಿವಾಸಿ ಶಶಿಕಲಾ(30) ಬಂಧಿತೆ. ಆರೋಪಿಯಿಂದ 5.50 ಲಕ್ಷ ರು. ಮೌಲ್ಯದ 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು (ಆ.31): ತಂಗಿಯ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಅಕ್ಕನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡತೋಗೂರು ನಿವಾಸಿ ಶಶಿಕಲಾ(30) ಬಂಧಿತೆ. ಆರೋಪಿಯಿಂದ 5.50 ಲಕ್ಷ ರು. ಮೌಲ್ಯದ 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಆಡುಗೋಡಿಯ ವಿಎಸ್‌ಆರ್ ಲೇಔಟ್ ನಿವಾಸಿ ಚಂದ್ರಿಕಾ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ: ದೂರುದಾರೆ ಚಂದ್ರಿಕಾ ಆಡುಗೋಡಿಯ ವಿಎಸ್‌ಆರ್ ಲೇಔಟ್ ನಿವಾಸಿಯಾಗಿದ್ದಾರೆ. ಪೇಯಿಂಗ್ ಗೆಸ್ಟ್‌ವೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಾರೆ. ಇವರ ಪತಿ ಶರವಣ ಸರಕು ಸಾಗಣೆ ವಾಹನದ ಚಾಲಕನಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯಲು ಆ.15ರಂದು ಅತ್ತಿಗೆ ಶಶಿಕಲಾ ಅವರ ದೊಡ್ಡತೋಗೂರು ನಿವಾಸಕ್ಕೆ ತೆರಳಿದ್ದರು. ಈ ವೇಳೆ ಚಂದ್ರಿಕಾ ಸಹ ಅಕ್ಕ ಶಶಿಕಲಾ ಮನೆಗೆ ಬಂದಿದ್ದು, ಪತಿಗೆ ಫಾರ್ಮಾಸಿಯಲ್ಲಿ ಔಷಧಿ ತರುವಂತೆ ತನ್ನ ಬೈಕ್ ಕೀ ನೀಡಿದ್ದರು.
ಔಷಧಿ ತರಲು ಹೋಗಿ ತಂಗಿ ಮನೆಯಲ್ಲೇ ಕಳ್ಳತನ: ಈ ವೇಳೆ ಶಶಿಕಲಾ, ಬೈಕ್‌ನಲ್ಲಿ ಬೊಮ್ಮನಹಳ್ಳಿಯ ಹೊಸೂರು ರಸ್ತೆಯಲ್ಲಿ ವಾಸವಿರುವ ದೊಡ್ಡಮ್ಮನ ಮನೆಗೆ ಬಂದಿದ್ದಾಳೆ. ಈ ವೇಳೆ ದ್ವಿಚಕ್ರ ವಾಹನದ ಕೀ ಬಂಚ್‌ನಲ್ಲಿ ತಂಗಿ ಚಂದ್ರಿಕಾಳ ಮನೆಯ ಕೀ ಇರುವುದನ್ನು ಗಮನಿಸಿದ್ದಾಳೆ. ಬಳಿಕ ಜತೆಯಲ್ಲಿ ದೊಡ್ಡಮ್ಮನ ಕರೆದುಕೊಂಡು ಆಡುಗೋಡಿಯ ವಿಎಸ್‌ಆರ್ ಲೇಔಟ್‌ಗೆ ಬಂದಿದ್ದು, ತಂಗಿ ಮನೆಯ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿದ್ದಾಳೆ. ನೀನು ಇಲ್ಲೇ ಇರು. ನಾನು ಔಷಧಿ ತರುತ್ತೇನೆ ಎಂದು ಹೇಳಿ ಚಂದ್ರಿಕಾಳ ಮನೆಯತ್ತ ತೆರಳಿದ್ದಾಳೆ. ಬಳಿಕ ಕೀನಿಂದ ಮನೆ ಬಾಗಿಲು ತೆರೆದು ಮನೆ ಪ್ರವೇಶಿಸಿ ಬೀರುವಿನಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣ ಕಳವು ಮಾಡಿದ್ದಾಳೆ. ಬಳಿಕ ದೊಡ್ಡಮ್ಮನ ಜತೆಗೆ ಔಷಧಿ ತೆಗೆದುಕೊಂಡು ಮನೆಗೆ ಬಂದು ಚಂದ್ರಿಕಾಗೆ ಬೈಕ್ ಕೀ ನೀಡಿದ್ದಾಳೆ.
ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಹಾಡಹಗಲೇ ವಿವಿಧ ರಾಜ್ಯಗಳಲ್ಲಿ ಮನೆಗಳವು ಮಾಡುತ್ತಿದ್ದ ಮೂವರ ಸೆರೆ
ಸಿಸಿಟಿವಿ ಸುಳಿವು ಆಧರಿಸಿ ಬಂಧನ: ಪತಿ ಶರವಣನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಆ.20ರಂದು ಮನೆಗೆ ತೆರಳಿರುವ ಚಂದ್ರಿಕಾ, ಬೀರು ನೋಡಿದಾಗ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಕಳುವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ತನಿಖೆಗೆ ಇಳಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಮಾಡಿದಾಗ, ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ, ಶಶಿಕಲಾಳ ಚಲನವಲನ ಸೆರೆಯಾಗಿರುವುದು ಕಂಡು ಬಂದಿದೆ. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಂಗಿಯ ಮನ್ನೆಯಲ್ಲಿ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿ ಕದ್ದ ಚಿನ್ನಾಭರಣಗಳ ಪೈಕಿ ಕೆಲವನ್ನು ಮನೆಯಲ್ಲೇ ಇರಿಸಿದ್ದಳು. ಕೆಲವು ಆಭರಣಗಳನ್ನು ಶಿಕಾರಪಾಳ್ಯದ ಜ್ಯುವೆಲರಿ ಅಂಗಡಿಯಲ್ಲಿ ಅಡಮಾನ ಇರಿಸಿದ್ದಳು. ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಆ ಆರಭರಣಗಳನ್ನು ಜಪ್ತಿ ಮಾಡಲಾಗಿದೆ.