
ಮದ್ದೂರು (ಜೂ.29) : ದಲಿತ ವಿಧವೆ ಹೆಸರಿನಲ್ಲಿ ಬ್ಯಾಂಕ್‌ನಿಂದ ಕೃಷಿ ಸಾಲ ಮಂಜೂರು ಮಾಡಿಸಿಕೊಂಡು ಆಕೆಗೆ ಲಕ್ಷಾಂತರ ರು. ಪಂಗನಾಮ ಹಾಕಿದ್ದ ವ್ಯಕ್ತಿಯನ್ನು ತಾಲೂಕಿನ ಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ತಾಲೂಕು ಕೀಲಾರ ಗ್ರಾಮದ ವೀರಪ್ಪ ಬಂಧಿತ ಆರೋಪಿ. ತನಗಾದ ಹಣ ವಂಚನೆ ಬಗ್ಗೆ ಪ್ರಶ್ನಿಸಲು ಹೋದ ತಾಲೂಕಿನ ಬೆಕ್ಕಳಲೆ ಗ್ರಾಮದ ಲೇ.ರಾಮಯ್ಯ ಪತ್ನಿ ದಲಿತ ವಿಧವೆ ಸುಧಾ ವಿರುದ್ಧ ಆರೋಪಿ ವೀರಪ್ಪ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರಕರಣ ಸಂಬಂಧ ಕೊಪ್ಪ ಠಾಣೆ ಪೊಲೀಸರು ಆರೋಪಿ ವಿರುದ್ಧ ಬಿಎನ್ಎಸ್ ಕಾಯ್ದೆ 318, 352 ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಆರೋಪಿ ವೀರಪ್ಪ ಈ ಹಿಂದೆ ಕಾವೇರಿ ನೀರಾವರಿ ನಿಗಮದಲ್ಲಿ ಸರ್ವೇ ಕೆಲಸ ಮಾಡುತ್ತಿದ್ದನು. ಕಳೆದ ನಾಲ್ಕು ತಿಂಗಳ ಹಿಂದೆ ಈತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕಳೆದ ಜೂನ್ 20ರಂದು ಪಟ್ಟಣದ ಸಂಜಯ ಚಿತ್ರಮಂದಿರದ ಮುಂಭಾಗದಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ಕೃಷಿ ಸಾಲ ಮಂಜೂರು ಮಾಡಿಸಿ ಕೊಡುವುದಾಗಿ ಹೇಳಿ ಸುಧಾಳಿಗೆ ಸಂಬಂಧಿಸಿದ ಜಮೀನು ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ನಂತರ ಆಕೆಯ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಸಾಲ ಮಂಜೂರಾದ ತಕ್ಷಣ ಆಕೆಯಿಂದ ಎರಡು ಖಾಲಿ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡು 4.30 ಲಕ್ಷ ರು. ಗಳನ್ನು ವೀರಪ್ಪ ಡ್ರಾ ಮಾಡಿಕೊಂಡಿದ್ದಾನೆ. ನಂತರ ಸುಧಾಳಿಗೆ ಹಣ ನೀಡಿದೆ ತಲೆಮೆರೆಸಿಕೊಂಡಿದ್ದನು. ಈ ಬಗ್ಗೆ ವಂಚನೆಗೊಳಗಾದ ಸುಧಾ ಆರೋಪಿಯನ್ನು ಪತ್ತೆ ಮಾಡಿ ಹಣ ವಂಚನೆ ಬಗ್ಗೆ ಪ್ರಶ್ನೆ ಮಾಡಿದ್ದಾಗ ಆತ ಸುಧಾಳನ್ನು ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದನು.
ನಂತರ ಸುಧಾ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದಳು. ಈ ಸಂಬಂಧ ಪಿಎಸ್ಐ ಭೀಮಪ್ಪ ಬಾಣಸಿ ಪ್ರಕರಣ ದಾಖಲು ಮಾಡಿಕೊಂಡ ನಂತರ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಗ್ರಾಮಾಂತರ ಠಾಣೆ ವೃತ ನಿರೀಕ್ಷಕ ವೆಂಕಟೇಗೌಡ ತನಿಖೆ ಕೈಗೊಂಡಿದ್ದರು.
ಬಳಿಕ ತಲೆಮರಸಿಕೊಂಡಿದ್ದ ಆರೋಪಿ ವೀರಪ್ಪನನ್ನು ವಶಕ್ಕೆ ತೆಗೆದುಕೊಂಡು ಮಹಜರು ನಡೆಸಿದ ನಂತರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿ ವೀರಪ್ಪ ಇನ್ನು ಹಲವಾರು ವಂಚನೆ ಹಾಗೂ ಜಾನುವಾರುಗಳ ಕಳ್ಳತನ ಪ್ರಕರಣದಲ್ಲಿ ಸಹ ಭಾಗಿಯಾಗಿರುವುದು ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ