ವೃದ್ಧ ದಂಪತಿಗಳಿಬ್ಬರು ಸಜೀವವಾಗಿ ದಹನಗೊಂಡ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದ ತೋಟದ ವಸ್ತಿಯಲ್ಲಿ ಸಂಭವಿಸಿದೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಫೆ.26) : ವೃದ್ಧ ದಂಪತಿಗಳಿಬ್ಬರು ಸಜೀವವಾಗಿ ದಹನಗೊಂಡ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದ ತೋಟದ ವಸ್ತಿಯಲ್ಲಿ ಸಂಭವಿಸಿದೆ.
ಕರೀಂಸಾಬ್ ಇಮಾಮ್‌ಸಾಬ್ ಟಪಾಲ್(Karimsaab Imamsaab Tapal) (82) ಹಾಗೂ ಪತ್ನಿ ಸಾಜನಬಿ ಟಪಾಲ್(Sajanabi Tapal) (72) ಸಾವನ್ನಪ್ಪಿದ ವೃದ್ಧ ದಂಪತಿಗಳು..
ರಾತ್ರಿ ಗುಡಿಸಲಿಗೆ ಬಿತ್ತು ಬೆಂಕಿ..!
ಇಬ್ಬರು ವೃದ್ಧ ದಂಪತಿಗಳು ಊಟ ಮುಗಿಸಿ ರಾತ್ರಿ ಗುಡಿಸಲಿನಲ್ಲೇ ಮಲಗಿದ್ದಾರೆ. ಆದ್ರೆ ತಡರಾತ್ರಿ ಬೆಂಕಿ ರೂಪದಲ್ಲಿ ಬಂದ ಜವರಾಯ ಇಬ್ಬರನ್ನು ಬಲಿ ಪಡೆದಿದ್ದಾನೆ. ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದಿದೆ. ವೃದ್ಧ ದಂಪತಿಗಳು ಗಾಢವಾದ ನಿದ್ರೆಯಲ್ಲಿದ್ದರು. ಅಷ್ಟೊತ್ತಿಗೆ ಬೆಂಕಿಯ ಕೆನ್ನಾಲಿಗೆ ಇಡೀ ಗುಡಿಸಲಿಗೆ ಪಸರಿಸಿತ್ತು. ಹೊಗೆ, ಬೆಂಕಿ ಝಳದಿಂದ ವೃದ್ಧ ದಂಪತಿಗಳು ಒದ್ದಾಡಿ ಸಜೀವ ದಹನವಾಗಿದ್ದಾರೆ.
Mandya: ಪ್ರಾಣವನ್ನೇ ತೆಗೆದ ತುಂಡು ಬೀಡಿ: ಸೇದಿ ಎಸೆದ ಬೀಡಿಯ ಕಿಡಿಯಿಂದ ವೃದ್ಧ ಸಾವು
ಇಬ್ಬರು ಮಕ್ಕಳಿದ್ದೂ ಇಲ್ಲದಂತೆ:
ಈ ವೃದ್ಧ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಚಡಚಣ ಪಟ್ಟಣ(Chadachana town)ದಲ್ಲಿ ವಾಸವಿದ್ದಾನೆ. ಇನ್ನೋರ್ವ ಮಹಾರಾಷ್ಟ್ರದ ಮಂದ್ರೂಪದಲ್ಲಿ ವಾಸವಿದ್ದಾನೆ. ವೃದ್ದ ದಂಪತಿಗಳಬ್ಬರೆ ತೋಟದ ವಸ್ತಿಯ ಗುಡಿಸಲಿನಲ್ಲಿ ವಾಸವಿದ್ದರು ಎನ್ನಲಾಗಿದೆ. ಮಕ್ಕಳ ಜೊತೆಗೆ ವಾಸವಿದ್ದಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ.
ಅನುಮಾನ ಹುಟ್ಟಿಸಿದ ಸಾವು:
ವೃದ್ಧ ದಂಪತಿಗಳು ಸಜೀವವಾಗಿ ದಹನ ಬಳಿಕ ಈಗ ಸಾವಿನ ಬಗ್ಗೆ ಸ್ಥಳೀಯ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಾತ್ರೋ ರಾತ್ರಿ ಗುಡಿಸಲಿಗೆ ಬೆಂಕಿ ಬಿದ್ದದ್ದು ಹೇಗೆ? ಆಕಸ್ಮಾತ್ತಾಗಿ ತಡರಾತ್ರಿಯೆ ಬೆಂಕಿ ಬೀಳಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳನ್ನ ಜನರು ಮುಂದಿಡ್ತಿದ್ದಾರೆ. ಅಷ್ಟಕ್ಕೂ ಇಳಿ ವಯಸ್ಸಿನಲ್ಲಿ ವೃದ್ಧ ದಂಪತಿಗಳು ಸ್ವತಂತ್ರವಾಗಿ ಯಾಕೆ ನಿರ್ಜನ ತೋಟದ ವಸ್ತಿಯಲ್ಲಿ ವಾಸವಾಗಿರಲು ಮಕ್ಕಳು ಬಿಟ್ಟಿದ್ರು ಎನ್ನುವ ಅನುಮಾನಗಳನ್ನ ಚಡಚಣ ಪಟ್ಟಣದ ಜನರು ಹೊರಹಾಕ್ತಿದ್ದಾರೆ. ಈ ಬಗ್ಗೆ ಚಡಚಣ ಪೊಲೀಸರು(Chadachana police) ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
Kudremukh National Park: ಕುದುರೆಮುಖ ಉದ್ಯಾನವನ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: ಬೆಂಕಿ ನಿಯಂತ್ರಣ ಕಾರ್ಯಾಚರಣೆ
ಸ್ಥಳಕ್ಕೆ ಚಡಚಣ ಪೊಲೀಸರ ಭೇಟಿ:
ಇನ್ನು ವೃದ್ಧ ದಂಪತಿಗಳು ಸಜೀವ ದಹನವಾದ ಸ್ಥಳಕ್ಕೆ ಚಡಚಣ ಸಿಪಿಐ ಹಾಗೂ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಟ್ಟು ಕರಕಲಾಗಿದ್ದ ಶವಗಳನ್ನ ಚಡಚಣ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವೃದ್ಧ ದಂಪತಿ ಮಕ್ಕಳಿಂದ ಮಾಹಿತಿ ಪಡೆದುಕೊಳ್ತಿದ್ದಾರೆ.