ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣ: ಬಳ್ಳಾರಿ ಚಿನ್ನದ ವ್ಯಾಪಾರಿ ಬಂಧನ

ಡಿಜಿಪಿ ಮಲಮಗಳು ಹಾಗೂ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಬಳ್ಳಾರಿ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿಯೊಬ್ಬನನ್ನು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ. 

Actress Ranya Rao gold smuggling case Ballari gold dealer arrested gvd

ಬೆಂಗಳೂರು (ಮಾ.27): ಡಿಜಿಪಿ ಮಲಮಗಳು ಹಾಗೂ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಬಳ್ಳಾರಿ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿಯೊಬ್ಬನನ್ನು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಮೂರನೇ ಆರೋಪಿ ಬಂಧನ ಇದಾಗಿದೆ. ಬಳ್ಳಾರಿ ನಗರದ ಬ್ರಾಹ್ಮಿನ್‌ ರಸ್ತೆಯ ಮಹೇಂದ್ರ ಕುಮಾರ್ ಜೈನ್‌ ಪುತ್ರ ಸಾಹಿಲ್ ಸಕಾರಿಯಾ ಜೈನ್‌ ಬಂಧಿತನಾಗಿದ್ದು, ವಿದೇಶದಿಂದ ಕಳ್ಳ ಸಾಗಣೆ ಮೂಲಕ ಚಿನ್ನ ಮಾರಾಟದಲ್ಲಿ ರನ್ಯಾರವರಿಗೆ ಆತ ನೆರವು ನೀಡಿದ್ದ. ಈ ಹಿನ್ನೆಲೆಯಲ್ಲಿ ಸಾಹಿಲ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ಸಲುವಾಗಿ ನಾಲ್ಕು ದಿನಗಳು ಡಿಆರ್‌ಐ ಕಸ್ಟಡಿಗೆ ಪಡೆದಿದೆ ಎಂದು ತಿಳಿದು ಬಂದಿದೆ.

ಹಲವು ವರ್ಷಗಳಿಂದ ಬಳ್ಳಾರಿ ನಗರದಲ್ಲಿ ಚಿನ್ನಾಭರಣ ಮಾರಾಟ ಮಳಿಗೆಯನ್ನು ಸಾಹಿಲ್ ಕುಟುಂಬ ನಡೆಸುತ್ತಿದೆ. ತನ್ನ ಸ್ನೇಹಿತರ ಮೂಲಕ ಆತನಿಗೆ ರನ್ಯಾ ಪರಿಚಯವಾಗಿದೆ. ಹಣದಾಸೆಗೆ ಚಿನ್ನ ಕಳ್ಳ ಸಾಗಣೆ ಕೃತ್ಯಕ್ಕೆ ಆತ ಸಹಕರಿಸಿದ್ದಾನೆ. ಅಂತೆಯೇ ದುಬೈನಿಂದ ಕಳ್ಳ ಮಾರ್ಗದಲ್ಲಿ ಬೆಂಗಳೂರಿಗೆ ಚಿನ್ನ ತರುತ್ತಿದ್ದ ರನ್ಯಾ, ನಂತರ ಸಾಹಿಲ್ ಮೂಲಕ ಆ ಚಿನ್ನವನ್ನು ವಿಲೇವಾರಿ ಮಾಡಿ ಹಣ ಸಂಪಾದಿಸಿದ್ದರು. ಹೀಗೆ ಸಂಪಾದಿಸಿದ ಹಣದಲ್ಲಿ ಸಾಹಿಲ್‌ಗೆ ಕೂಡ ಪಾಲು ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

Latest Videos

ಚಿನ್ನ ಖರೀದಿಗೆ ನಟಿ ರನ್ಯಾ ರಾವ್‌ರಿಂದ ಹವಾಲಾ ಹಣ ಬಳಕೆ

ಮಾ.3 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ 14.2 ಕೆಜಿ ಚಿನ್ನ ಕಳ್ಳ ಸಾಗಣೆ ಮಾಡುವಾಗ ರನ್ಯಾರವನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಆಕೆಯ ವಿಚಾರಣೆ ವೇಳೆ ದುಬೈನಲ್ಲಿ ಚಿನ್ನ ಖರೀದಿಗೆ ಸಹಕರಿಸಿದ್ದ ಅವರ ಗೆಳೆಯ ಹಾಗೂ ಏಟ್ರಿಯಾ ಹೋಟೆಲ್‌ ಸಮೂಹದ ಮಾಲಿಕರ ಮೊಮ್ಮಗ ತರುಣ್ ರಾಜ್‌ನನ್ನು ಡಿಆರ್‌ಐ ಬಂಧಿಸಿತು. ಹೀಗೆ ರನ್ಯಾರವರ ಚಿನ್ನ ಕಳ್ಳ ಸಾಗಣೆ ಜಾಲವನ್ನು ಶೋಧಿಸಿದಾಗ ಸಾಹಿಲ್ ಸಹ ಡಿಆರ್‌ಐ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

ಸಹಜ ನ್ಯಾಯ ಉಲ್ಲಂಘನೆ: ದುಬೈನಿಂದ ನಗರಕ್ಕೆ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರನ್ಯಾ ರಾವ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ. ರನ್ಯಾ ರಾವ್‌ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಗರದ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಲಯ ವಿಚಾರಣೆ ನಡೆಸಿತು. ರನ್ಯಾ ಪರ ವಕೀಲರು ತಮ್ಮ ವಾದ ಮುಕ್ತಾಯಗೊಳಿಸಿದರು. ನಂತರ ಪ್ರಕರಣ ತನಿಖಾಧಿಕಾರಿಗಳಾದ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ ಪರ ವಕೀಲರು ವಾದ ಮಂಡಿಸಬೇಕಿತ್ತು. 

ನಟಿ ರನ್ಯಾ ರಾವ್‌ ಕೇಸಲ್ಲಿರುವ ಇಬ್ಬರು ಸಚಿವರ ಹೆಸರು ಸದನದಲ್ಲಿ ಹೇಳುವೆ: ಶಾಸಕ ಯತ್ನಾಳ್‌

ಆದರೆ, ಕಾಲಾವಕಾಶದ ಕೊರತೆಯಿಂದ ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶ ಐ.ಪಿ.ನಾಯಿಕ್ ಅವರು ಮಂಗಳವಾರಕ್ಕೆ ಮುಂದೂಡಿದರು. ವಿಚಾರಣೆ ವೇಳೆ ರನ್ಯಾ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಅರ್ಜಿದಾರರನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳನ್ನೇ ಸಾಕ್ಷಿಗಳನ್ನಾಗಿ ಮಾಡಲಾಗಿದೆ. ಆರೋಪಿಯ ಅರೆಸ್ಟ್‌ ಮೆಮೊದಲ್ಲಿ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಬಂಧನ ಪ್ರಕ್ರಿಯೆಯಲ್ಲಿ ಸುಪ್ರಿಂ ಕೋರ್ಟ್‌ ನೀಡಿರುವ ಮಾರ್ಗಸೂಚಿ ಪಾಲಿಸಿಲ್ಲ. ಅಧಿಕಾರಿಗಳು ಸಹಜ ನ್ಯಾಯವನ್ನು ಉಲ್ಲಂಘಿಸಿದ್ದಾರೆ. ಸತ್ಯಾಂಶಗಳನ್ನು ಮುಚ್ಚಿಡುವ ಪ್ರಯತ್ನವನ್ನು ತನಿಖಾಧಿಕಾರಿಗಳು ನಡೆಸಿದ್ದಾರೆ ಎಂದು ಆಕ್ಷೇಪಿಸಿದರು.

vuukle one pixel image
click me!