ಇಬ್ಬರ ಮೇಲೆ ಗುಂಡು ಹಾರಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಆತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕದಲ್ಲಿ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜೂ.06): ಜಮೀನು ಮಾರಾಟ ವಿಚಾರಕ್ಕೆ ಇಬ್ಬರ ಮೇಲೆ ಗುಂಡು ಹಾರಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಆರೋಪಿ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಯಲಹಂಕ ಉಪನಗರದಲ್ಲಿ ನಡೆದಿದೆ.
ಕಾರ್ತಿಕ್ ಅಲಿಯಾಸ್ ಗಂಗಾಧರ್ ಆತ್ಮಹತ್ಯೆಗೆ ಯತ್ನಿಸಿದವನು. ಕಾರ್ತಿಕ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಾರ್ತಿಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ.
ಜಮೀನು ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮೇ 27ರಂದು ಕಡೂರು ಮೂಲದ ಉಪನ್ಯಾಸಕ ಸುಮಂತ್ ಕುಮಾರ್ ಮತ್ತು ಈತನ ಸ್ನೇಹಿತ, ಕಾರ್ತಿಕ್‌ನನ್ನು ಕಡೂರು ತಾಲೂಕಿನ ಬಾಣೂರಿನಲ್ಲಿ ಭೇಟಿಯಾಗಿ ಮಾತನಾಡಿದ್ದರು. ಜಮೀನು ವ್ಯವಹಾರ ಕುದುರಿರಲಿಲ್ಲ. ಕಾರ್ತಿಕ್ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ, ‘ಹಣ ಕೊಡುವುದಾಗಿ ಕರೆಸಿಕೊಂಡು ಸತಾಯಿಸುತ್ತೀರಾ’ ಎಂದು ಅವಾಚ್ಯವಾಗಿ ನಿಂದಿಸಿದ್ದ. ಇದೇ ವಿಚಾರಕ್ಕೆ ಸುಮಂತ್‌ಕುಮಾರ್ ಮತ್ತು ಕಾರ್ತಿಕ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಕಾರ್ತಿಕ್ ತನ್ನ ಬಳಿಯಿದ್ದ ಗನ್ ತೆಗೆದು ಸುಮಂತ್ ಮೇಲೆ ಗುಂಡು ಹಾರಿಸಿದ್ದ. ಇದನ್ನು ತಡೆಯಲು ಮುಂದಾದ ಕಲ್ಯಾಣ್ ಕುಮಾರ್ ಮೇಲೂ ಗುಂಡಿನ ದಾಳಿ ನಡೆಸಿದ್ದ.
ಸ್ನೇಹಿತರ ಬಳಿ ಹೆಂಡತಿ ಕರೆದೊಯ್ದ ಗಂಡ, ಮಗುವಿನ ಎದುರೇ ತಾಯಿ ಮೇಲೆ ಅತ್ಯಾಚಾರ
ಇದರಿಂದ ಸುಮಂತ್‌ನ ಭುಜಕ್ಕೆ ಹಾಗೂ ಪಕ್ಕೆಗೆ ಗುಂಡು ತಗುಲಿತ್ತು. ಈತನ ಸ್ನೇಹಿತ ಕಲ್ಯಾಣ್ ಕುಮಾರ್‌ಗೆ ಎದೆಯ ಬಲಭಾಗ, ಎಡಗಲ್ಲ, ಎಡಭುಜ ಹಾಗೂ ಎಡಗೈ ಹೆಬ್ಬರಳಿಗೆ ಗುಂಡು ತಾಗಿತ್ತು. ಇಬ್ಬರು ಗಾಯಾಳುಗಳ ಮೊಬೈಲ್ ಕಿತ್ತುಕೊಂಡು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ಎಂದು ಕಾರ್ತಿಕ್ ಬೆದರಿಕೆ ಹಾಕಿದ್ದ. ಸ್ನೇಹಿತರ ನೆರವಿನಿಂದ ಗಾಯಗೊಂಡಿದ್ದ ಇಬ್ಬರನ್ನು ಕೆ.ಆರ್.ಎಸ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ಕಡೂರಿನ ಸಖರಾಯಪಟ್ಟಣ ಪೊಲೀಸರು, ಕೊಲೆಯತ್ನ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಆರೋಪಿ ಕಾರ್ತಿಕ್ ಅಲಿಯಾಸ್ ಗಂಗಾಧರ್ ಯಲಹಂಕದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಖರಾಯಪಟ್ಟಣ ಪೊಲೀಸರಿಗೆ ಸಿಕ್ಕಿತ್ತು. ಆರೋಪಿಯ ಬಂಧನಕ್ಕೆ ನೆರವು ಕೋರಿದ ಹಿನ್ನೆಲೆಯಲ್ಲಿ ಜೂ.1ರಂದು ರಾತ್ರಿ 11 ಗಂಟೆಯಲ್ಲಿ ಮಾತೃ ಲೇಔಟ್‌ನ ಮನೆಯಲ್ಲಿದ್ದ ಆರೋಪಿ ಕಾರ್ತಿಕ್‌ನನ್ನು ಬಂಧಿಸಲು ತೆರಳಲಾಗಿತ್ತು. ಆತನನನ್ನು ವಶಕ್ಕೆ ಪಡೆಯಲು ಕುಟುಂಬಸ್ಥರಾದ ಗಂಗರತ್ನಮ್ಮ, ನಟರಾಜ್, ರೇವಣಸಿದ್ದಪ್ಪ ಮತ್ತು ನಾಗರಾಜು ಸಿಬ್ಬಂದಿಗೆ ಅಡ್ಡಿಪಡಿಸಿದ್ದಾರೆ. ಈ ವೇಳೆ ಕಾರ್ತಿಕ್ ಚೂರಿಯಿಂದ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.