ಬೆಂಗಳೂರು: ಜೂಜಲ್ಲಿ ಹಣ ಕಳಕೊಂಡು ಕಾರಿನಲ್ಲಿ ಹೋಗಿ ಎಳನೀರು ಕದಿಯುತ್ತಿದ್ದವ ಅರೆಸ್ಟ್‌

By Kannadaprabha NewsFirst Published Nov 23, 2023, 7:17 AM IST
Highlights

ವೈಟ್‌ಫೀಲ್ಡ್ ಸಮೀಪದ ನಿವಾಸಿ ಮೋಹನ್ ಬಂಧಿತನಾಗಿದ್ದು, ಆರೋಪಿಯಿಂದ ಎಳನೀರು ಹಾಗೂ ಕಾರು ಸೇರಿದಂತೆ 8 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 

ಬೆಂಗಳೂರು(ನ.23):  ಆನ್‌ಲೈನ್ ಜೂಜಾಟದಲ್ಲಿ ಹಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಕ್ಯಾಬ್ ಚಾಲಕನೊಬ್ಬ, ರಾತ್ರಿ ವೇಳೆ ಎಳನೀರು ಕದ್ದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ವೈಟ್‌ಫೀಲ್ಡ್ ಸಮೀಪದ ನಿವಾಸಿ ಮೋಹನ್ ಬಂಧಿತನಾಗಿದ್ದು, ಆರೋಪಿಯಿಂದ ಎಳನೀರು ಹಾಗೂ ಕಾರು ಸೇರಿದಂತೆ 8 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಹೊಸಕೆರೆಹಳ್ಳಿಯ ಮಂಕುತಿಮ್ಮನ ಉದ್ಯಾನ ಸಮೀಪ ಎಳನೀರು ವ್ಯಾಪಾರಿ ರಾಜಣ್ಣ ಅವರಿಗೆ ಸೇರಿದ 1,150 ಎಳನೀರು ರಾತ್ರೋರಾತ್ರಿ ಕಳ್ಳತನವಾಗಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್‌ ಸಂದೀಪ್ ಕುಮಾರ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಎಳನೀರು ಕಳ್ಳನನ್ನು ಸೆರೆ ಹಿಡಿದಿದ್ದಾರೆ.

ಕದಿಯಲು ಬಂದು ಗಡದ್ ನಿದ್ದೆಗೆ ಜಾರಿದ ಕಳ್ಳ, 2ನೇ ಎಡವಟ್ಟು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ!

ತಮಿಳುನಾಡು ಮೂಲದ ಮೋಹನ್‌, ಏಳೆಂಟು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ತನ್ನ ಕುಟುಂಬದ ಜತೆ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದ ಆತ, ಮೊದಲು ಎಳ ನೀರು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆನಂತರ ಖಾಸಗಿ ಕಂಪನಿಯೊಂದರ ಕಾರು ಪಡೆದು ಆತ, ಓಲಾ ಹಾಗೂ ಉಬರ್‌ಗಳಿಗೆ ಸಾರಿಗೆ ಸೇವೆ ಕಲ್ಪಿಸಿದ್ದ. ಹೀಗಿರುವಾಗ ಆನ್‌ಲೈನ್‌ ಜೂಜಾಟದ ಚಟಕ್ಕೆ ಮೋಹನ್‌ ಬಿದ್ದಿದ್ದ. ಇದರಿಂದ ಹಣ ಕಳೆದುಕೊಂಡು ಆತ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ಈ ಹಣಕಾಸು ಸಮಸ್ಯೆಯಿಂದ ಹೊರಬರಲು ಆತ ಎಳನೀರು ಕಳ್ಳತನಕ್ಕಿಳಿದಿದ್ದ ಮೋಹನ್‌, ಕಳೆದ ಐದಾರು ತಿಂಗಳಿಂದ ರಾತ್ರಿ ವೇಳೆ ನಗರ ವ್ಯಾಪ್ತಿಯಲ್ಲಿ ಎಳನೀರು ಕಳವು ಮಾಡುತ್ತಿದ್ದ.

ಹೀಗೆ ಕದ್ದ ಎಳನೀರನ್ನು ತನಗೆ ಪರಿಚಿತರಿದ್ದ ಎಳನೀರು ವ್ಯಾಪಾರಿಗಳಿಗೆ ಮದ್ದೂರು ಮಾರುಕಟ್ಟೆಯಲ್ಲಿ ಖರೀದಿಸಿದ್ದಾಗಿ ಹೇಳಿ ಕಡಿಮೆ ಬೆಲೆ ಮಾರಾಟ ಮಾಡಿ ಆತ ಹಣ ಸಂಪಾದಿಸುತ್ತಿದ್ದ. ಅದೇ ರೀತಿ ನ.6 ರಂದು ರಾತ್ರಿ ಎಳನೀರು ವ್ಯಾಪಾರಿ ರಾಜಣ್ಣ ಅವರಿಗೆ ಸೇರಿದ 1150 ಎಳನೀರು ಕದ್ದು, ತನಿಖೆ ಬೆನ್ನಲ್ಲೇ ಸಿಕ್ಕಿಬಿದ್ದಿದ್ದಾನೆ.

click me!