ಬೆಂಗಳೂರು: ವಿಲಾಸಿ ಜೀವನಕ್ಕೆ ಮನೆಗಳವು ಮಾಡುತ್ತಿದ್ದ ಕಳ್ಳ ಜೈಲು ಪಾಲು

By Kannadaprabha News  |  First Published Nov 7, 2023, 7:47 AM IST

ಶಿವಮೊಗ್ಗ ಮೂಲದ ಮಂಜ ಅಲಿಯಾಸ್‌ ಲೊಡ್ಡೆ ಮಂಜ ಬಂಧಿತ. ಆರೋಪಿಯಿಂದ ₹9.10 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ, 50 ಗ್ರಾಂ ಬೆಳ್ಳಿ ವಸ್ತುಗಳು, ಮೂರು ಮೊಬೈಲ್‌ ಹಾಗೂ ಒಂದು ಲ್ಯಾಪ್‌ಟಾಪ್‌ ಜಪ್ತಿ 


ಬೆಂಗಳೂರು(ನ.07):  ವಿಲಾಸಿ ಜೀವನಕ್ಕಾಗಿ ಸುಲಭವಾಗಿ ಹಣ ಗಳಿಸಲು ರಾತ್ರಿ ವೇಳೆ ಬಾಗಿಲು-ಕಿಟಕಿ ತೆರೆದಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ ಮಂಜ ಅಲಿಯಾಸ್‌ ಲೊಡ್ಡೆ ಮಂಜ(40) ಬಂಧಿತ. ಆರೋಪಿಯಿಂದ ₹9.10 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ, 50 ಗ್ರಾಂ ಬೆಳ್ಳಿ ವಸ್ತುಗಳು, ಮೂರು ಮೊಬೈಲ್‌ ಹಾಗೂ ಒಂದು ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಗ್ಯಾಸ್ ಕಟಿಂಗ್‌ನಿಂದ ಎಟಿಎಂ ಮಷಿನ್ ಕತ್ತರಿಸಿ ಲಕ್ಷಾಂತರ ರೂ ನಗದು ದೋಚಿದ ಖದೀಮರು!

ಆರೋಪಿ ಮಂಜ ವೃತ್ತಿಪರ ಕಳ್ಳನಾಗಿದ್ದು, ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಶಿವಮೊಗ್ಗ, ದಾಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮನೆಗಳವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ನಗರದ ಬನಶಂಕರಿ, ಉಪ್ಪಾರಪೇಟೆ, ಶೇಷಾದ್ರಿಪುರ, ರಾಜಾಜಿನಗರ, ಗಿರಿನಗರ ಸೇರಿದಂತೆ ದಾವಣಗೆರೆ, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 40ಕ್ಕೂ ಅಧಿಕ ಮನೆಗಳವು ಪ್ರಕರಣಗಳು ದಾಖಲಾಗಿವೆ.

ಆರೋಪಿಯು ರಾತ್ರಿ ವೇಳೆ ನಗರದ ವಿವಿಧೆಡೆ ಸುತ್ತಾಡಿ ಬಾಗಿಲು, ಕಿಟಕಿ ತೆರೆದಿರುವ ಮನೆಗಳನ್ನು ಗುರುತಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಕದ್ದ ಮಾಲುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ. ಹಣ ಖಾಲಿಯಾದ ಬಳಿಕ ಮತ್ತೆ ಮನೆಗಳ್ಳತನಕ್ಕೆ ಇಳಿಯುತ್ತಿದ್ದ. ಈತನ ಬಂಧನದಿಂದ ಬನಶಂಕರಿ, ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು, ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!