Udupi: ಉದ್ಯಮಿ ಆತ್ಮಹತ್ಯೆಗೆ ಪ್ರಚೋದನೆ ಕೇಸ್‌ನಲ್ಲಿ ಲೆಕ್ಕಪರಿಶೋಧಕ ಅರೆಸ್ಟ್

By Suvarna News  |  First Published May 28, 2022, 9:03 PM IST

* ಕುಂದಾಪುರದ ಖಾಸಗಿ ಆಸ್ಪತ್ರೆ ಮಾಲಕ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ
* ಉದ್ಯಮಿ ಆತ್ಮಹತ್ಯೆಗೆ ಪ್ರಚೋದನೆ ಕೇಸ್‌ನಲ್ಲಿ ಲೆಕ್ಕಪರಿಶೋಧಕ ಅರೆಸ್ಟ್
* ಆತ್ಮಹತ್ಯೆಯ ಹಿಂದೆ ಗೋಲ್ಡ್ ಜ್ಯುವೆಲ್ಲರಿ ಹಗರಣದ ಕರಿಛಾಯೆ


ಉಡುಪಿ, (ಮೇ.28): ಕುಂದಾಪುರದ ಖಾಸಗಿ ಆಸ್ಪತ್ರೆ ಮಾಲಕ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಚೋದನೆ ನೀಡಿದ ಆರೋಪದ ಮೇಲೆ ಲೆಕ್ಕಪರಿಶೋಧಕ ಮೊಳಹಳ್ಳಿ ಗಣೇಶ ಶೆಟ್ಟಿ ಬಂಧನವಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.‌ ಈ ಆತ್ಮಹತ್ಯೆಯ ಹಿಂದೆ ಗೋಲ್ಡ್ ಜ್ಯುವೆಲ್ಲರಿ ಹಗರಣದ ಕರಿಛಾಯೆ ಮೂಡಿದೆ.

ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಆತ್ಮಹತ್ಯೆ ಪ್ರಕರಣ, ಕುತೂಹಲಕಾರಿ ಘಟ್ಟ ತಲುಪಿದೆ. ಗೆಳೆಯನಿಂದ ಮೋಸಕ್ಕೊಳಗಾದ ಉದ್ಯಮಿ ಕಟ್ಟೆ ಭೋಜಣ್ಣ, ಆತನ ಮನೆಯ ಮುಂದೆ ಹೋಗಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ, ಇದೀಗ ಗೆಳೆಯ ಮೊಳಹಳ್ಳಿ ಗಣೇಶ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. 

Latest Videos

undefined

ಗೆಳೆಯನ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಉದ್ಯಮಿ

ಮೊಳಹಳ್ಳಿ ಗಣೇಶ ಶೆಟ್ಟಿ ಕುಂದಾಪುರದ ಓರ್ವ ಪ್ರತಿಷ್ಠಿತ ಲೆಕ್ಕಪರಿಶೋಧಕ ರಾಗಿದ್ದಾರೆ.‌ ರೋಟರಿ ಸೇರಿದಂತೆ ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. 2012ರ ಮಾರ್ಚ್ 31ರಂದು ಕಟ್ಟೆ ಭೋಜಣ್ಣನವರಿಂದ 3.34 ಕೋಟಿ ರೂಪಾಯಿ ಹಣ ಹಾಗೂ 5 ಕೆಜಿ ಚಿನ್ನ ಪಡೆದುಕೊಂಡಿದ್ದರು. ಗೋಲ್ಡ್ ಸ್ಕೀಂ ನಲ್ಲಿ ಹಣ ಹೂಡಿಕೆ ಮಾಡಿ ಲಾಭಾಂಶ ಕೊಡುವುದಾಗಿ ಹೇಳಿದ್ದರು. ಅಸಲು ಬಡ್ಡಿ ಎಲ್ಲವೂ ಸೇರಿ 9 ಕೋಟಿ ರೂಪಾಯಿ ಸಂದಾಯವಾಗಬೇಕಿತ್ತು. ಈ ಹಣ ಸಿಗದ ಕಾರಣ ತನ್ನ ಸ್ವಂತ ರಿವಾಲ್ವರ್ ತೆಗೆದುಕೊಂಡು ಹೋಗಿ ಗೆಳೆಯನ ಮನೆ ಮುಂದೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಬ್ಬರು ಪ್ರತಿಷ್ಠಿತರ ನಡುವಿನ ಕಲಹ ಎಂಬತ್ತರ ಇಳಿವಯಸ್ಸಿನ ಉದ್ಯಮಿಯೊಬ್ಬರ ಸಾವಿನಲ್ಲಿ ಅಂತ್ಯವಾಗಿತ್ತು. ಇದೀಗ ಮೊಳಹಳ್ಳಿ ಗಣೇಶ್ ಬಂಧನವಾಗಿದೆ, ಮತ್ತೋರ್ವ ಆರೋಪಿ ಇಸ್ಮಾಯಿಲ್ ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಂದಿತ ಗಣೇಶ್ ಶೆಟ್ಟಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದ್ದ ಗೋಲ್ಡ್ ಜ್ಯುವೆಲ್ಲರಿ ಹಗರಣ, ಈ ನಿಗೂಢ ಆತ್ಮಹತ್ಯೆಗೆ ಕಾರಣ ಅನ್ನೋದು ಬಯಲಾಗಿದೆ. ಮೊಳಹಳ್ಳಿ ಗಣೇಶ ಶೆಟ್ಟಿ ಸ್ಲೀಪಿಂಗ್ ಪಾರ್ಟ್ನರ್ ಆಗಿ ಕೆಲವು ಮುಸಲ್ಮಾನ ಚಿನ್ನದ ವ್ಯಾಪಾರಿಗಳ ಜೊತೆಗೆ ವ್ಯವಹಾರ ನಡೆಸುತ್ತಿದ್ದರು. ಆಫ್ರಿಕಾದ ಚಿನ್ನದ ಗಣಿಯಲ್ಲಿ ಈ ಹಣವನ್ನು ವಿನಿಯೋಗಿಸಿ ಲಾಭಾಂಶ ಪಡೆಯುವ ಸ್ಕೀಂ ಇದಾಗಿತ್ತು. ಆರಂಭದಲ್ಲಿ ಉತ್ತಮ ಲಾಭ ತಂದುಕೊಟ್ಟರೂ,  ಬಳಿಕ ವ್ಯವಹಾರ ಸಂಪೂರ್ಣ ಕುಸಿದು ಹೋಯಿತು. ನಷ್ಟದ ಹಣವನ್ನು ಭರಿಸುವ ನಿಟ್ಟಿನಲ್ಲಿ ಗ್ರಾಹಕರಿಂದ ಗೋಲ್ಡ್ ಸ್ಕಿಂ ಹೆಸರಲ್ಲಿ ಹಣ ಸಂಗ್ರಹಿಸಲಾಗಿತ್ತು. ಈ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಲಾಗಿತ್ತು.

ಗೋಪಾಲಕೃಷ್ಣ ರಾವ್ ಯಾನೇ  ಕಟ್ಟೆ ಭೋಜಣ್ಣ ಕೂಡಾ ಈ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಹಣ ವಿನಿಯೋಗಿಸಿದ್ದರು ಎನ್ನಲಾಗಿದೆ. ಬಳಿಕ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮಧ್ಯಸ್ಥಿಕೆಯ ಮೂಲಕ ಗಣೇಶ ಶೆಟ್ಟಿಯವರಿಗೆ ಸೇರಿದ ಬೆಲೆಬಾಳುವ ಸ್ಥಿರಾಸ್ತಿಯನ್ನು ಪರಬಾರೆ ಮಾಡಿ ಬಾಕಿ ಹಣ ನೀಡುವುದಾಗಿ ನಿಗದಿಯಾಗಿತ್ತು. 

ಈ ನಡುವೆ ಗಣೇಶ ಶೆಟ್ಟಿ ಅವರಿಗೆ ಸೇರಿದ ಸಂಪೂರ್ಣ ಸ್ಥಿರಾಸ್ತಿ ಹರಾಜಿಗೆ ಬಂದಿತ್ತು. ಈ ಬಗ್ಗೆ ಪ್ರಕಟಗೊಂಡಿದ್ದ ಪತ್ರಿಕಾ ಪ್ರಕಟಣೆಯನ್ನು ನೋಡಿದ ಕಟ್ಟೆ ಭೋಜಣ್ಣ ಕಂಗಾಲಾದರು. ಗೆಳೆಯನ ಮನೆ ಮುಂದೆ ಬಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಪ್ರಕರಣದ ಇನ್ನೋರ್ವ ಪ್ರಮುಖ ರುವಾರಿ ಇಸ್ಮಾಯಿಲ್ ಬಂಧನ ಆಗುವುದು ಬಾಕಿ ಇದೆ. ಪ್ರತಿಷ್ಠಿತ ವ್ಯಕ್ತಿಯೊಬ್ಬರ ಆತ್ಮಹತ್ಯೆಯ ಬಳಿಕ, ಕುಂದಾಪುರದ ಈ ಗೋಲ್ಡ್ ಸ್ಕೀಂ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ.‌ ಹಗರಣದಲ್ಲಿ ಮೋಸ ಹೋದವರು ಮತ್ತೆ ನ್ಯಾಯಕ್ಕಾಗಿ ಹೋರಾಟ ಆರಂಭಿಸುವ ಸಾಧ್ಯತೆಗಳಿವೆ.

click me!