ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಸೆ ತೋರಿಸಿ ಉದ್ಯಮಿಗೆ 5 ಕೋಟಿ ರು. ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಕಳೆದೊಂದು ವಾರದಿಂದ ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀ ಅವರನ್ನು ಸಿಸಿಬಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಹತ್ತಿ ಒಡಿಶಾದಲ್ಲಿ ಬಂಧಿಸಿದ್ದಾರೆ.
ಬೆಂಗಳೂರು (ಸೆ.20): ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಸೆ ತೋರಿಸಿ ಉದ್ಯಮಿಗೆ 5 ಕೋಟಿ ರು. ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಕಳೆದೊಂದು ವಾರದಿಂದ ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಶ್ರೀ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಅಲಿಯಾಸ್ ಹಾಲಶ್ರೀ ಅವರನ್ನು ಸಿಸಿಬಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಹತ್ತಿ ಒಡಿಶಾದಲ್ಲಿ ಬಂಧಿಸಿದ್ದಾರೆ.
‘ವಂಚನೆ ಕೃತ್ಯದಲ್ಲಿ ಹಾಲಶ್ರೀ ಬಂಧನದ ನಂತರ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಹೊರಬರಲಿದೆ’ ಎಂದು ಪ್ರಕರಣದಲ್ಲಿ ಬಂಧಿತಳಾಗಿರುವ ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಇತ್ತೀಚೆಗೆ ಸ್ಫೋಟಕ ಹೇಳಿಕೆ ನೀಡಿದ್ದಳು. ಹೀಗಾಗಿ ಹಾಲಶ್ರೀ ಬಂಧನ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಕಾವಿ ಬಟ್ಟೆ ಕಳಚಿದ್ದ ಸ್ವಾಮೀಜಿ, ಒಡಿಶಾ ರಾಜ್ಯದ ಕಟಕ್‌ನಿಂದ ಉತ್ತರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವಾರಾಣಸಿಗೆ ರೈಲಿನಲ್ಲಿ ತಿಳಿ ನೀಲಿ ಬಣ್ಣ ಟೀ ಶರ್ಟ್ ಹಾಗೂ ಹಾಫ್ ಪ್ಯಾಂಟ್ ಧರಿಸಿ ತೆರಳುತ್ತಿದ್ದರು.
Chaitra Kundapur Fraud Case: ಚೈತ್ರಾಳ 1 ಕೋಟಿ ಆಸ್ತಿ, 65 ಲಕ್ಷ ಚಿನ್ನ, 40 ಲಕ್ಷ ವಶ!
ಇದರ ಸುಳಿವು ಅರಿತ ಸಿಸಿಬಿ ಪೊಲೀಸರು, ಒಡಿಶಾ ಪೊಲೀಸರ ನೆರವು ಪಡೆದು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಬಳಿಕ ಸ್ಥಳೀಯ ನ್ಯಾಯಾಲಯದ ಒಪ್ಪಿಗೆ ಪಡೆದು ಮಂಗಳವಾರ ಸಂಜೆ ವಿಮಾನದಲ್ಲಿ ಸ್ವಾಮೀಜಿ ಅವರನ್ನು ನಗರಕ್ಕೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಬುಧವಾರ ಕೋರ್ಟಿಗೆ ಹಾಜರುಪಡಿಸಿ, ಇನ್ನಷ್ಟು ದಿವಸ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ. ಈ ವಂಚನೆ ಪ್ರಕರಣದಲ್ಲಿ ಹಾಲಶ್ರೀ 3ನೇ ಆರೋಪಿಯಾಗಿದ್ದಾರೆ. ಬಿಜೆಪಿ ನಾಯಕರಿಗೆ ಬೈಂದೂರು ಕ್ಷೇತ್ರಕ್ಕೆ ಹೆಸರು ಶಿಫಾರಸು ಮಾಡಲು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ 1.5 ಕೋಟಿ ರು ಹಣವನ್ನು ಪಡೆದ ಆರೋಪ ಹಾಲಶ್ರೀ ಮೇಲೆ ಇದೆ.
ಚಾಲಕ ನೀಡಿದ ಸುಳಿವು ಆಧರಿಸಿ ಸೆರೆ: ಕೃತ್ಯ ಬಯಲಾದ ಬಳಿಕ ರಾಜ್ಯ ತೊರೆದು ಹೊರ ರಾಜ್ಯಗಳಲ್ಲಿ ಅವರು ಅಜ್ಞಾತವಾಗಿದ್ದರು. ಇತ್ತೀಚಿಗೆ ಹಾಲಶ್ರೀಗಳ ಕಾರು ಚಾಲಕ ನಿಂಗರಾಜುನನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆಗೊಳಪಡಿಸಿತ್ತು. ಆತ ನೀಡಿದ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಕೊನೆಗೆ ಒಡಿಶಾ ರಾಜ್ಯದ ಕಟಕ್‌ನಲ್ಲಿ ಸ್ವಾಮೀಜಿ ಅವರನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ಟು ಒಡಿಶಾ ಶ್ರೀಗಳ ಪಯಣ: ‘ಬಿಜೆಪಿ ಟಿಕೆಟ್ ಪಡೆಯಲು ಹಾಲಶ್ರೀ ಅವರ ಶಿಫಾರಸು ಅಗತ್ಯವಾಗಿ ಬೇಕಾಗಿದೆ. ಕೂಡಲೇ ಸ್ವಾಮೀಜಿ ಅವರನ್ನು ಭೇಟಿಯಾಗಿ’ ಎಂದು ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಚೈತ್ರಾ ಸೂಚಿಸಿದ್ದಳು. ಅಂತೆಯೇ ಇದೇ ವರ್ಷದ ಜನವರಿ 16 ರಂದು ಬೆಂಗಳೂರಿನ ವಿಜಯನಗರದ ಮನೆಯಲ್ಲಿ ಹಾಲಶ್ರೀ ಅವರನ್ನು ಭೇಟಿಯಾಗಿದ್ದ ಪೂಜಾರಿ, ಬಿಜೆಪಿ ಟಿಕೆಟ್ ಸಲುವಾಗಿ 1.5 ಕೋಟಿ ರು.ಗಳನ್ನು ನೀಡಿದ್ದರು. ಆದರೆ ಟಿಕೆಟ್ ಸಿಗದೆ ಹೋದಾಗ ಪೂಜಾರಿ ಅವರು, ಹಾಲಶ್ರೀ ಅವರನ್ನು ಭೇಟಿಯಾಗಿ ವಂಚನೆ ಬಗ್ಗೆ ಹೇಳಿದ್ದರು. ಆಗ ತಾನು ಹಣ ಮರಳಿಸಲು ಕಾಲಾವಕಾಶ ನೀಡುವಂತೆ ಸ್ವಾಮೀಜಿ ಕೋರಿದ್ದರು. ಅದರಲ್ಲಿ 50 ಲಕ್ಷ ರು. ಅನ್ನು ಹಾಲಶ್ರೀ ಮರಳಿಸಿದ್ದರು ಎಂದು ತಿಳಿದು ಬಂದಿದೆ.
ಆಪರೇಷನ್ ಹಾಲಶ್ರೀ ಆರಂಭಿಸಿದ ಸಿಸಿಬಿ: ಚೈತ್ರಾ ಬಂಧನವಾದ ದಿನ ಬೆಂಗಳೂರಿನಲ್ಲೇ ಇದ್ದ ಹಾಲಶ್ರೀ, ರಾತ್ರೋರಾತ್ರಿ ನಗರ ತೊರೆದು ತಪ್ಪಿಸಿಕೊಂಡಿದ್ದರು. ಬೆಂಗಳೂರಿನಿಂದ ಸೀದಾ ಮೈಸೂರಿಗೆ ಕಾರಿನಲ್ಲಿ ತಮ್ಮ ಇಬ್ಬರು ಶಿಷ್ಯರ ಜತೆ ತೆರಳಿದ ಹಾಲಶ್ರೀ, ಸೆ.12 ರಂದು ರಾತ್ರಿ ಮೈಸೂರಿನ ವೀರಸ್ವಾಮಿ ಮಠದಲ್ಲಿ ವಾಸ್ತವ್ಯ ಹೂಡಿದಿದ್ದರು. ನಂತರ ಮೈಸೂರಿನ ಬಸ್ ನಿಲ್ದಾಣದ ಮೊಬೈಲ್ ಅಂಗಡಿಯಲ್ಲಿ ತಮ್ಮ ಶಿಷ್ಯರ ಮೂಲಕ 4 ಮೊಬೈಲ್‌ಗಳು ಹಾಗೂ 4 ಸಿಮ್ ಕಾರ್ಡ್ ಖರೀದಿಸಿ ಸ್ವಾಮೀಜಿ ಓಡಲು ಶುರು ಮಾಡಿದ್ದರು. ಅದೇ ದಿನ ತಮ್ಮ ಶಿಷ್ಯ ಪ್ರಣವ್‌ಗೆ ಹೇಳಿ ನಿಂಗರಾಜು ಮೂಲಕ 50 ಲಕ್ಷ ರು, ನಗದು ಹಣವನ್ನು ಶ್ರೀಗಳು ಪಡೆದಿದ್ದರು. ಮೈಸೂರಿನಿಂದ ಬಳ್ಳಾರಿ ಮಾರ್ಗವಾಗಿ ಕಾರಿನಲ್ಲಿ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರವನ್ನು ಶ್ರೀ ತಲುಪಿದ್ದರು.
ಈ ನಡುವೆ ತಮ್ಮ ಕಾರು ಚಾಲಕ ನಿಂಗರಾಜುನನ್ನು ಶ್ರೀಗಳು ವಾಪಸ್ ಕಳುಹಿಸಿದ್ದರು. ಅಷ್ಟರಲ್ಲಿ ಚಾಲಕನ ಮಾಹಿತಿ ಪಡೆದು ಆತನನ್ನು ಶನಿವಾರ ಸಿಸಿಬಿ ತನ್ನ ವಶಕ್ಕೆ ಪಡೆದಿತ್ತು.ಆಗ ಆತ, ಶ್ರೀಗಳು ಮಾರು ವೇಷದಲ್ಲಿ ರೈಲಿನಲ್ಲಿ ಸಂಚರಿಸುತ್ತಿರುವ ಸಂಗತಿ ಬಾಯ್ಬಿಟ್ಟಿದ್ದ. ಅಷ್ಟರಲ್ಲಿ ಹೈದರಾಬಾದ್ ನಗರಕ್ಕೆ ತೆರಳಿದ ಶ್ರೀಗಳು, ಕಾವಿ ಕಳಚ್ಚಿಟ್ಟು ಟೀ ಶರ್ಟ್ ಹಾಗೂ ಹಾಫ್ ಪ್ಯಾಂಟ್ ಧರಿಸಿ ಒಡಿಶಾ ರೈಲು ಹತ್ತಿದ್ದರು. ಹೈದರಾಬಾದ್‌ನಿಂದ ಒಡಿಶಾದ ಜಗನ್ನಾಥ ಕ್ಷೇತ್ರ ಪುರಿಗೆ ತೆರಳಿದ ಅವರು, ಅಲ್ಲಿಂದ ವಾರಾಣಸಿಗೆ ಹೋಗಲು ಯೋಜಿಸಿದ್ದರು.
ಚೈತ್ರಾ ಕುಂದಾಪುರ ಮುಖ ಪರಿಚಯವೇ ಇಲ್ಲ: ಶಾಸಕ ಸುನಿಲ್ ಕುಮಾರ್
ಪೊಲೀಸರ ದಿಕ್ಕು ತಪ್ಪಿಸಿದ್ದ ಶ್ರೀಗಳು: ಈ ನಡುವೆ, ಸ್ವಾಮೀಜಿ ಟಿಕೆಟ್ ಬುಕ್ಕಿಂಗ್ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಆಗ ಪುರಿ ರೈಲ್ವೆ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಬೋಧಗಯಾಗೆ ಟಿಕೆಟ್ ಪಡೆದಿದ್ದ ಶ್ರೀಗಳು, ಪುರಿ ನಿಲ್ದಾಣದಲ್ಲಿ ರೈಲು ಹತ್ತದೆ ಪೊಲೀಸರ ಕಣ್ತಪ್ಪಿಸಲು ಕಟಕ್ ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲು ಹತ್ತಲು ಯತ್ನಿಸಿದ್ದರು. ಈ ಮಾಹಿತಿ ಪಡೆದ ಸಿಸಿಬಿ, ಕೂಡಲೇ ಒಡಿಶಾ ಪೊಲೀಸರಿಗೆ ಮಾಹಿತಿ ನೀಡಿತ್ತು. ವಾಟ್ಸಾಪ್ ನಲ್ಲಿ ಸ್ವಾಮೀಜಿ ಪೋಟೋವನ್ನು ಸಹ ಸಿಸಿಬಿ ಪೊಲೀಸರು ಕಳುಹಿಸಿದ್ದರು. ಈ ಪೋಟೋ ಆಧರಿಸಿ ತಕ್ಷಣವೇ ಕಾರ್ಯಾಚರಣೆಗಿಳಿದ ಒಡಿಶಾ ಪೊಲೀಸರು, ರೈಲಿನಲ್ಲಿದ್ದ ಶ್ರೀಗಳನ್ನು ಗುರುತಿಸಿ ವಶಕ್ಕೆ ಪಡೆದು ಸಿಸಿಬಿ ತಂಡಕ್ಕೊಪ್ಪಿಸಿದ್ದಾರೆ.
ದಿನಕ್ಕೊಮ್ಮೆ ಮೊಬೈಲ್ ಬದಲಾವಣೆ: ಸಿಸಿಬಿ ಯೋಜನೆ ಸಫಲವಾಗಿಲ್ಲ. ಇನ್ನು ಪರಾರಿಯಾಗುವಾಗ ಮೈಸೂರಿನಲ್ಲಿ ಖರೀದಿಸಿದ್ದ 4 ಮೊಬೈಲ್‌ಗಳ ಪೈಕಿ 3 ಮೊಬೈಲ್ ಅನ್ನು ಹಾಲಶ್ರೀ ಬಳಸಿ ದಾರಿ ಮಧ್ಯೆ ಬಿಸಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.