ಕೆಲಸ ಕೊಡಿಸೋದಾಗಿ ನಂಬಿಸಿ ಯುವತಿಗೆ ₹2.70 ಲಕ್ಷ ವಂಚನೆ, ಹಣ ವಾಪಸ್ ಕೇಳಿದ್ರೆ ಬೆದರಿಕೆ!

Published : Apr 21, 2025, 10:41 AM ISTUpdated : Apr 21, 2025, 10:55 AM IST
ಕೆಲಸ ಕೊಡಿಸೋದಾಗಿ ನಂಬಿಸಿ ಯುವತಿಗೆ ₹2.70 ಲಕ್ಷ ವಂಚನೆ, ಹಣ ವಾಪಸ್ ಕೇಳಿದ್ರೆ ಬೆದರಿಕೆ!

ಸಾರಾಂಶ

ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ₹2.70 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಏ.21): ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ₹2.70 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ರಾಮನಗರ ಮೂಲದ ಇಂಚರಾ (ಹೆಸರು ಬದಲಿಸಲಾಗಿದೆ) ಅವರು ನೀಡಿದ ದೂರಿನ ಮೇರೆಗೆ ಪತ್ನೋಲ್‌ ಕಲಾಂದರ್‌ ಖಾನ್‌ ಮತ್ತು ವೀರೇಶ್‌ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ವಿವರ:

ಎಂಜಿನಿಯರಿಂಗ್‌ ಪದವಿಧರೆಯಾಗಿರುವ 24 ವರ್ಷದ ಇಂಚರಾ ಉದ್ಯೋಗಾವಕಾಶಗಳ ಬಗ್ಗೆ ಆನ್‌ಲೈನಲ್ಲಿ ಹುಡುಕಾಡುತ್ತಿದ್ದರು. ಈ ವೇಳೆ ಒಂದು ವೆಬ್‌ಸೈಟ್‌ನಲ್ಲಿ ಬೆಸ್ಕಾಂ ಕಚೇರಿಯಲ್ಲಿ ಟೆಕ್ನಿಕಲ್‌ ಎಂಜಿನಿಯರ್‌ ಉದ್ಯೋಗ ಖಾಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಂತೆ ಇಂಚರಾ ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದ ನಗರ್ತಪೇಟೆಯ ಕಚೇರಿ ವಿಳಾಸಕ್ಕೆ ಇಂಟರ್‌ವ್ಯೂಗೆ ಹೋಗಿದ್ದಾರೆ.

ಇದನ್ನೂ ಓದಿ: ಹುಡುಗಿ ತೋರಿಸಿ ಆಕೆ ಅಮ್ಮನ ಜೊತೆಗೆ ಮದ್ವೆ! ಮುಸುಕು ತೆಗೆದಾಗ ಮದುಮಗ ಶಾಕ್!

ಈ ವೇಳೆ ಇಂಟರ್‌ವ್ಯೂ ಮಾಡಿದ ಶ್ರೀಧರ್‌ ಎಂಬುವರು ಇಂಚರಾ ಅವರಿಗೆ ನಿಮ್ಮ ವಿದ್ಯಾಭ್ಯಾಸಕ್ಕೆ ಬಾಷ್‌, ಟೆಕ್‌ ಮಹೀಂದ್ರ ಇತರೆ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಸಿಗಲಿದೆ. ನನಗೆ ಪರಿಚಯವಿರುವ ಮೂಲಕ ಕೆಲಸ ಕೊಡಿಸುತ್ತೇನೆ ಎಂದು ವಿನೋದಿನಿ ಎಂಬುವವರ ಮೊಬೈಲ್‌ ಸಂಖ್ಯೆ ನೀಡಿದ್ದಾನೆ. ಬಳಿಕ ವಿನೋದಿನಿ ಎಂಬುವವರು ಇಂಚರಾಗೆ ಕರೆ ಮಾಡಿ ಜೆ.ಪಿ.ನಗರ ಕಾಫಿಶಾಪ್‌ಗೆ ಬರುವಂತೆ ಕರೆದಿದ್ದಾರೆ.

ಅದರಂತೆ ಇಂಚರಾ, ವಿನೋದಿನಿ ಮತ್ತು ಕಲಂದರ್‌ ಖಾನ್‌ನನ್ನು ಭೇಟಿಯಾಗಿದ್ದಾರೆ. ಈ ವೇಳೆ ಕಲಂದರ್‌ ಖಾನ್‌, ಬಾಷ್‌ ಹಾಗೂ ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆ. ಆದರೆ, 2.70 ಲಕ್ಷ ರು. ನೀಡಬೇಕು, ಮುಂಗಡವಾಗಿ 30 ಸಾವಿರ ರು. ಕೊಡಬೇಕು. ಆಫರ್‌ ಲೆಟರ್‌ ಕೊಟ್ಟ ಬಳಿಕ ಉಳಿದ ಹಣ ಕೊಡಬೇಕು ಎಂದು ಹೇಳಿದ್ದಾನೆ. ಇದಕ್ಕೆ ಇಂಚರಾ ಒಪ್ಪಿಕೊಂಡಿದ್ದಾರೆ. ಒಪ್ಪಂದದಂತೆ ಮುಂಗಡವಾಗಿ ಕಲಂದರ್‌ಗೆ ಆನ್‌ಲೈನ್‌ನಲ್ಲಿ 30 ಸಾವಿರ ರು. ವರ್ಗಾಯಿಸಿದ್ದಾರೆ.

ಒಟ್ಟು 2.70 ಲಕ್ಷ ಪಡೆದರು:

ಕೆಲ ದಿನಗಳ ಬಳಿಕ ಕಲಂದರ್‌ ಖಾನ್‌ ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ಕೆಲಸ ಖಾಲಿ ಇಲ್ಲ. ಬಾಷ್‌ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಕೆಲ ದಿನಗಳ ಬಳಿಕ ಬಾಷ್‌ ಕಂಪನಿಯಲ್ಲಿ ಅನುಭವ ಕೇಳುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಆ ಕಂಪನಿಯಲ್ಲಿ ಕೆಲಸ ಇಲ್ಲ. ಹೀಗಾಗಿ ಎಚ್‌ಎಸ್‌ಆರ್‌ ಲೇಔಟ್‌ನ ಸಿಂಥೆಟಿಕ್‌ ಕಂಪನಿಯಲ್ಲಿ ಕೆಲಸ ಕೊಡಿಸುತ್ತಾನೆ ಎಂದು ವೀರೇಶ್‌ನ ಮೊಬೈಲ್‌ ಸಂಖ್ಯೆ ನೀಡಿದ್ದಾನೆ. ಆಫರ್‌ ಲೆಟರ್‌ ಬರುವ ಮುನ್ನ ಅರ್ಧದಷ್ಟು ಹಣ ಕೊಡಬೇಕು ಎಂದಿದ್ದಾನೆ. ಅದರಂತೆ ಇಂಚರಾ, ಕಲಂದರ್‌ಗೆ ₹1.20 ಲಕ್ಷ ಹಣ ನೀಡಿದ್ದಾರೆ. ಬಳಿಕ ಇಂಚರಾಗೆ ಸಿಂಥೆಟಿಕ್‌ ಕಂಪನಿಯ ಆಫರ್‌ ಲೆಟರ್‌ ಇ-ಮೇಲ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂಚರಾ ಅವರಿಂದ ಬಾಕಿ ಹಣ ₹1.20 ಲಕ್ಷ ಪಡೆದಿದ್ದಾನೆ. ಅಲ್ಲಿಗೆ ಒಟ್ಟು ₹2.70 ಲಕ್ಷ ಪಡೆದಿದ್ದಾನೆ.

ಇದನ್ನೂ ಓದಿ: ಅಶ್ಲೀಲ ಫೋಟೋ ತೋರಿಸಿ ಮಹಿಳಾ ಟೆಕ್ಕಿಗೆ ದುಷ್ಕರ್ಮಿಗಳ ಬೆದರಿಕೆ, ಹಣಕ್ಕೆ ಬೇಡಿಕೆ

ಹಣ ವಾಪಾಸ್‌ ಕೇಳಿದ್ದಕ್ಕೆ ಬೆದರಿಕೆ

ಹಣ ಕೊಟ್ಟ ಬಳಿಕ ಸಿಂಥೆಟಿಕ್‌ ಕಂಪನಿಯ ವೀರೇಶ್‌ ಮತ್ತೆ ಹಣಕ್ಕೆ ಬೇಡಿಕೆ ಇರಿಸಿದ್ದಾನೆ. ಈ ವೇಳೆ ಇಂಚರಾ ತನ್ನ ಹಣವಿಲ್ಲ ಎಂದಿದ್ದಾರೆ. ಇತ್ತ ಕೆಲಸ ಸಿಗದೆ ಗೊಂದಲಕ್ಕೆ ಒಳಗಾದ ಇಂಚರಾ, ಹಣ ವಾಪಾಸ್‌ ನೀಡುವಂತೆ ಕಲಂದರ್‌ನನ್ನು ಕೇಳಿದಾಗ ಆತ ಬೆದರಿಕೆ ಹಾಕಿದ್ದಾನೆ. ಆರೋಪಿಗಳು ಇಂಚರಾ ಮಾದರಿಯಲ್ಲಿ ಸುಮಾರು ಎಂಟು ಮಂದಿ ಉದ್ಯೋಕಾಂಕ್ಷಿಗಳಿಂದ ಸುಮಾರು ₹14 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ