
ನಾಗಮಂಗಲ (ಮೇ.18) : ಬುದ್ಧಿಮಾಂದ್ಯ ಯುವತಿ ಮೇಲೆ ಅಪ್ರಾಪ್ತನೊಬ್ಬ ಲೈಂಗಿಕ ದೌರ್ಜನ್ಯ ಎಸಗಿ ಜಾತಿ ನಿಂದನೆ ಮಾಡಿರುವ ಘಟನೆ ತಾಲೂಕಿನ ಕರಿಕ್ಯಾತನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಗ್ರಾಮದ 19 ವರ್ಷದ ಬುದ್ಧಿಮಾಂದ್ಯ ಯುವತಿ ಮನೆಯವರು ಕಾರ್ಯನಿಮಿತ್ತ ಬೇರೊಂದು ಗ್ರಾಮಕ್ಕೆ ತೆರಳಿದ್ಧ ವೇಳೆ ಮೆಣಸಿನಕಾಯಿ ಕೇಳುವ ನೆಪದಲ್ಲಿ ಯುವತಿ ಮನೆಗೆ ಬಂದ ಅದೇ ಗ್ರಾಮದ 17 ವರ್ಷದ ಅಪ್ರಾಪ್ತನು ಯುವತಿ ಬಾಯಿಗೆ ಬಟ್ಟೆ ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಹೇಳಲಾಗಿದೆ.
ಯುವತಿ ಚೀರಾಟ ಕೇಳಿದ ಪಕ್ಕದ ಮನೆಯಲ್ಲಿದ್ದ ಯುವತಿಯ ಅಜ್ಜಿ ಬಂದು ನೋಡಲಾಗಿ ನಗ್ನಾವಸ್ಥೆಯಲ್ಲಿದ್ದ ಬಾಲಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ದೌರ್ಜನ್ಯ ತಡೆಯಲು ಬಂದ ಅಜ್ಜಿ ಮೇಲೆ ಬಾಲಕ ಹಲ್ಲೆ ನಡೆಸಿದ್ದಲ್ಲದೇ ಜಾತಿನಿಂದನೆ ಮಾಡಿದ್ದಾನೆಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ಬಲತ್ಕಾರ ಮಾಡಿದವನಿಗೆ 8 ವರ್ಷ ಜೈಲು ಶಿಕ್ಷೆ, ₹50 ಸಾವಿರ ದಂಡ: ಕೋರ್ಟ್ ತೀರ್ಪು
ದೌರ್ಜನ್ಯಕ್ಕೊಳಗಾದ ಯುವತಿಯ ಪೋಷಕರು ನೀಡಿದ ದೂರಿನನ್ವಯ ಶುಕ್ರವಾರ ರಾತ್ರಿಯೇ ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ನಿರಂಜನ್ ಹಾಗೂ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
ಅಪ್ರಾಪ್ತನ ವಿರುದ್ಧ ಶುಕ್ರವಾರ ತಡರಾತ್ರಿ ಲೈಂಗಿಕ ದೌರ್ಜನ್ಯ ಮತ್ತು ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಶನಿವಾರ ಬೆಳಗ್ಗೆ ಅಪ್ರಾಪ್ತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದ ಪೊಲೀಸರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಮಂಡ್ಯದ ಬಾಲ ನ್ಯಾಯ ಮಂಡಳಿಯ ನ್ಯಾಯಾಧೀಶರೆದುರು ಹಾಜರುಪಡಿಸಿ ನಂತರ ಮೈಸೂರಿನ ಬಾಲಕರ ಬಾಲ ಮಂದಿರದಲ್ಲಿರಿಸಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಬುದ್ಧಿಮಾಂದ್ಯ ಯುವತಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ನಂತರ ಮಹಿಳಾ ಪೊಲೀಸ್ ಅಧಿಕಾರಿಗಳು ಘಟನೆ ಕುರಿತು ಹೇಳಿಕೆ ಪಡೆದುಕೊಂಡು ಪೋಷಕರ ಜೊತೆಯಲ್ಲಿ ಮನೆಗೆ ಕಳುಹಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ