ಜಯನಗರ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಮರಣಪತ್ರ ಬರೆದಿಟ್ಟು ಆಸ್ಪತ್ರೆಯ ತಮ್ಮ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು (ಏ.24): ಜಯನಗರ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಮರಣಪತ್ರ ಬರೆದಿಟ್ಟು ಆಸ್ಪತ್ರೆಯ ತಮ್ಮ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವಲ್ ಬೈರಸಂದ್ರ ನಿವಾಸಿ ಡಾ. ರೇಣುಕಾನಂದ (44) ಆತ್ಮಹತ್ಯೆಗೆ ಶರಣಾದ ವೈದ್ಯ. ಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಏಳು ವರ್ಷಗಳಿಂದ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರ ಸಂಜೆ ಆಸ್ಪತ್ರೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ‘ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಡಾ.ರೇಣುಕಾನಂದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಪ್ರತಿಷ್ಠಿತ ಸಾಫ್‌್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರೇಣುಕಾನಂದ ಅವರು ಹುಟ್ಟು ಅಂಗವಿಕಲರಾಗಿದ್ದು, ಎಡಕಾಲಿನ ಸಮಸ್ಯೆ ಇತ್ತು. ಜತೆಗೆ ಕೆಲ ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಜತೆಗೆ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದ ಕೆಲವು ದಿನಗಳಿಂದ ರೇಣುಕಾನಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Bengaluru: ಅನಾಥ ಮಕ್ಕಳ ಹೆಸರಿನಲ್ಲಿ ವಸೂಲಿಗಿಳಿದ ವಂಚಕರಿಬ್ಬರ ಸೆರೆ
ಕೊಠಡಿಯಲ್ಲಿ ಫ್ಯಾನಿಗೆ ನೇಣು: ಭಾನುವಾರವೂ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ರೇಣುಕಾನಂದ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಪತ್ನಿ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಈ ವೇಳೆ ಅನುಮಾನಗೊಂಡು ಆಸ್ಪತ್ರೆಗೆ ಸಿಬ್ಬಂದಿಗೆ ಕರೆ ಮಾಡಿ ಪತಿಯ ಬಗೆ ವಿಚಾರಿಸಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ವೈದ್ಯರ ಕೊಠಡಿ ಬಳಿ ಬಂದು ನೋಡಿದಾಗ, ಒಳಗಿನಿಂದ ಕೊಠಡಿ ಬಾಗಿಲು ಲಾಕ್ ಆಗಿರುವುದು ಕಂಡು ಬಂದಿದೆ. ಹಲವು ಬಾರಿ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Bengaluru: ಕಾಲೇಜು ಪ್ರವೇಶ ನೆಪದಲ್ಲಿ 104 ವಿದೇಶಿಯರಿಗೆ ಟೋಪಿ: ಆರೋಪಿ ಬಂಧನ
ಬಳಿಕ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಡಾ.ರೇಣುಕಾನಂದ ಅವರು ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಭಾನುವಾರ ಮಧ್ಯಾಹ್ನ 2.30ರಿಂದ 4 ಗಂಟೆ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.