
ಬೆಂಗಳೂರು(ಡಿ.15): ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಪಡೆಯಲು ನ್ಯಾಯಾಲಯಗಳಿಗೆ ನಕಲಿ ದಾಖಲಿ ಸೃಷ್ಟಿಸಿ ಶ್ಯೂರಿಟಿ (ಭದ್ರತಾ ಠೇವಣಿದಾರ) ನೀಡುತ್ತಿದ್ದ ಓರ್ವ ಮಹಿಳೆ ಸೇರಿದಂತೆ 9 ಮಂದಿಯನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ತಾಯಮ್ಮ ಕ್ಯಾಂಪ್‌ನ ವೀರೇಶ್, ದೇವದುರ್ಗ ತಾಲೂಕಿನ ನಗೋಳಿ ಗ್ರಾಮದ ಅಮರೇಶ್, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕೆಸರಹಟ್ಟಿಯ ಉಮೇಶ್ ಕುಮಾರ್, ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡದ ಸಂತೋಷ್, ಮಾದವಾರದ ಪ್ರಕಾಶ್, ಮೈಸೂರು ಜಿಲ್ಲೆ ನಂಜನೂಡು ತಾಲೂಕಿನ ಬಿದರಗೋಡು ಉಮೇಶ್, ಕೋಲಾರ ಜಿಲ್ಲೆ ಶ್ರೀನಿವಾಸಪುರದ ನಾಗರಾಜ್, ಗುಂಟುಪಲ್ಲಿಯ ಆರ್.ಮಂಜುನಾಥ್, ಆರ್,ಟಿ.ನಗರ ಸಮೀಪ ಚಾಮುಂಡಿನಗರದ ತಬಸಂ ಬಂಧಿತರು. ಆರೋಪಿಗಳಿಂದ 35 ನಕಲಿ ಆಧಾರ್ ಕಾರ್ಡ್‌ಗಳು ಹಾಗೂ ಸ್ವತ್ತಿನ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡ್ತಿದೆ ಡಿಜಿಟಲ್ ಅರೆಸ್ಟ್? ಕೇವಲ 15 ದಿನದಲ್ಲಿ ಮೂರೂವರೆ ಕೋಟಿ ವಂಚನೆ!
ಇತ್ತೀಚೆಗೆ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಜಾಮೀನು ಪಡೆಯಲು ಕೆಲವರು ನಕಲಿ ದಾಖಲೆ ಸೃಷ್ಟಿಸಿ ಶ್ಯೂರಿಟಿ ನೀಡುತ್ತಿರುವ ಬಗ್ಗೆ ಸಿಸಿಬಿ ಸಂಘಟಿತ ಅಪರಾಧ ದಳದ ಇನ್‌ಸ್ಪೆಕ್ಟರ್ ಬಾಲಾಜಿ ತಂಡಕ್ಕೆ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಮೈಸೂರು ಬ್ಯಾಂಕ್ ವೃತ್ತದ ಬಳಿ ಜೆರಾಕ್ಸ್ ಅಂಗಡಿಗಳಲ್ಲಿ ಜಾಮೀನು ಅರ್ಜಿ ಸಲ್ಲಿಕೆಗೆ ದಾಖಲೆಗಳನ್ನು ಜೆರಾಕ್ಸ್ ಮಾಡಿಸುವಾಗ ಆರೋಪಿಗಳನ್ನು ಬಂಧಿಸಿದ್ದಾರೆ.
ಹಣಕ್ಕಾಗಿ ಶ್ಯೂರಿಟಿ
ಅಪರಾಧ ಪ್ರಕರಣಗಳಲ್ಲಿ ಒಂದು ಆಧಾರ್ ಕಾರ್ಡ್ ಬಳಸಿ ಇಬ್ಬರು ಆರೋಪಿಗಳ ಜಾಮೀನಿಗೆ ಶ್ಯೂರಿಟಿ ನೀಡಬಹುದಾಗಿದೆ. ಆದರೆ, ಆರೋಪಿಗಳು ಹಣ ಪಡೆದು ನಾಲ್ಕೈದು ಮಂದಿಗೆ ಶ್ಯೂರಿಟಿ ನೀಡಿದ್ದಾರೆ. ಒಂದೇ ಆಧಾರ್ ಕಾರ್ಡ್, ಪಹಣಿ ಹಾಗೂ ಮ್ಯೂಟೇಷನ್‌ಗಳನ್ನು ಈ ತಂಡ ಬಳಸಿದೆ. ಈ ದಂಧೆ ಹಲವು ವರ್ಷಗಳಿಂದ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ನಕಲಿ ದಾಖಲೆ ಸಲ್ಲಿಸಿ ಶ್ಯೂರಿಟಿ ನೀಡಿರುವ ಮಾಹಿತಿ ಮೇರೆಗೆ ಒಂಭತ್ತು ಮಂದಿಯನ್ನು ಬಂಧಿಸಲಾಗಿದೆ. ಯಾವ ಪ್ರಕರಣಗಳಲ್ಲಿ ಯಾರ್ಯಾರಿಗೆ ಆರೋಪಿಗಳು ಶ್ಯೂರಿಟಿ ನೀಡಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸಂಸತ್ ಸ್ಮೋಕ್ ಬಾಂಬ್ ದಾಳಿ ಮಾಸ್ಟರ್ ಮೈಂಡ್ ಲಲಿತ್ ಝಾ ಅರೆಸ್ಟ್
ಒಂದೇ ಆಧಾರ್‌ಗೆ ಬೇರೆ ಬೇರೆ ಸಂಖ್ಯೆ!
ಒಂದೇ ಆಧಾರ್ ಕಾರ್ಡ್‌ಗೆ ಬೇರೆ ಬೇರೆ ನಂಬರ್‌ಗಳನ್ನು ಅಂಟಿಸುತ್ತಿದ್ದ. ತದನಂತರ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಆಧಾರ್ ನಂಬರ್‌ಗಳನ್ನು ತಿದ್ದುಪಡಿ ಮಾಡಿ ನ್ಯಾಯಾಲಯಗಳಲ್ಲಿ ಜಾಮೀನು ಪಡೆಯಲು ಆರೋಪಿಗಳಿಗೆ ಶ್ಯೂರಿಟಿ ನೀಡುತ್ತಿದ್ದಾಗಿ ವಿಚಾರಣೆ ವೇಳೆ ರಾಯಚೂರಿನ ವೀರೇಶ್ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರು. 50 ಸಾವಿರದಿಂದ ರು. 1 ಲಕ್ಷವರೆಗೂ ಹಣ
ಒಂದೊಂದು ಪ್ರಕರಣದಲ್ಲಿ ಒಂದೊಂದು ರೀತಿ ನಕಲಿ ಶ್ಯೂರಿಟಿದಾರರಿಗೆ ಹಣ ಸಿಕ್ಕಿದೆ. ಕೊಲೆ ಪ್ರಕರಣದ ಆರೋಪಿಯಿಂದ 50 ಸಾವಿರದಿಂದ 1 ಲಕ್ಷ ರೂ ಸಂದಾಯವಾದರೆ, ಸಣ್ಣಪುಟ್ಟ ಪ್ರಕರಣಗಳಲ್ಲಿ ಕಡಿಮೆ ಹಣ ಲಭಿಸಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ