ಬೆಂಗ್ಳೂರು: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ, 8 ಮಂದಿ ನೊಂದ ಯುವತಿಯರ ರಕ್ಷಣೆ

By Kannadaprabha NewsFirst Published Jul 12, 2022, 10:04 AM IST
Highlights

*   4 ಮಂದಿಯ ಬಂಧನ
*   2 ಪ್ರತ್ಯೇಕ ಪ್ರಕರಣ
*   ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 

ಬೆಂಗಳೂರು(ಜು.12):  ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸ್ಪಾ ಮತ್ತು ಸಲೂನ್‌ ಹೆಸರಿನಲ್ಲಿ ರಾಜ್ಯ ಹಾಗೂ ಹೊರದೇಶದ ಯುವತಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಹಾಗೂ ನಾಲ್ವರು ಗಿರಾಕಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಇಂದಿರಾ ನಗರದ ನಿರಂಜನ್‌, ರೂಬಿ, ಜೆ.ಪಿ.ನಗರದ ಶರೀಫ್‌ಸಾಬ್‌ ಹಾಗೂ ರಾಜಶೇಖರ್‌ ಬಂಧಿತರು. ಈ ಎರಡೂ ಪ್ರಕರಣಗಳಲ್ಲಿ ರಾಜ್ಯ, ಹೊರರಾಜ್ಯ ಹಾಗೂ ವಿದೇಶದ 8 ಮಂದಿ ನೊಂದ ಯುವತಿಯರನ್ನು ರಕ್ಷಿಸಲಾಗಿದೆ.

ಆರೋಪಿಗಳಾದ ನಿರಂಜನ್‌ ಮತ್ತು ರೂಬಿ ಇಂದಿರಾ ನಗರದ 100 ಅಡಿ ರಸ್ತೆಯ ನೆಸ್ಟ್‌ ಟು ಗ್ಲೇನ್‌ ಬೇಕ್‌ ಹೌಸ್‌ ಬಳಿ ‘ಐರಾ ಸ್ಪಾ ಆ್ಯಂಡ್‌ ವೆಲ್‌ನೆಸ್‌ ಸೆಂಟರ್‌’ ತೆರೆದು ರಾಜ್ಯ ಹಾಗೂ ಹೊರರಾಜ್ಯದ ಯುವತಿಯರನ್ನು ಅಕ್ರಮವಾಗಿ ಇರಿಸಿಕೊಂಡು ಸ್ಪಾಗೆ ಬರುವ ಗಿರಾಕಿಗಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಪಾ ಮೇಲೆ ದಾಳಿ ಮಾಡಿ ಆರೋಪಿಗಳಾದ ರೂಬಿ ಮತ್ತು ನಿರಂಜನ್‌ನನ್ನು ಬಂಧಿಸಲಾಗಿದೆ. ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ ಇಂದಿರಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಶ್ಯಾಗೃಹದಲ್ಲಿ ಸಿಕ್ಕಿಬಿದ್ದ ವೇಶ್ಯೆಯನ್ನು ಬಂಧಿಸುವಂತಿಲ್ಲ: ಸುಪ್ರೀಂ

ಮತ್ತೊಂದು ಪ್ರಕರಣಗಳಲ್ಲಿ ಜೆ.ಪಿ.ನಗರ 5ನೇ ಹಂತದಲ್ಲಿ ‘ರೂಹಿ ಸ್ಪಾ’ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಪಾ ಮೇಲೆ ದಾಳಿ ಮಾಡಿ ಆರೋಪಿಗಳಾದ ಶರೀಫ್‌ಸಾಬ್‌ ಮತ್ತು ರಾಜಶೇಖರ್‌ ಎಂಬಾತನನ್ನು ಬಂಧಿಸಲಾಗಿದೆ. ದಂಧೆಯಲ್ಲಿ ಸಿಲುಕಿದ್ದ ರಾಜ್ಯ ಹಾಗೂ ವಿದೇಶದ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!