ಶಾಂತಿ ಸುವ್ಯವಸ್ಥೆ ಕಾಪಾಡಲು ಉತ್ತರ ವಲಯ ಐಜಿಪಿ ವಿ. ವಿಕಾಸಕುಮಾರ್, ಎಸ್‌ಪಿ ಜಯಪ್ರಕಾಶ, ಎಎಸ್ಪಿ ಪ್ರಸನ್ನ ದೇಸಾಯಿ, 4 ಡಿವೈಎಸ್ಪಿ, 11 ಸಿಪಿಐ, 120 ಪಿಎಸ್‌ಐ ಹಾಗೂ ಸಿಬ್ಬಂದಿ, 4 ಡಿಆರ್, 2 ಕೆಎಸ್‌ಆರ್‌ಪಿ ಸಿಬ್ಬಂದಿ ಪಟ್ಟಣದಲ್ಲಿ ಬೀಡು ಬಿಟ್ಟಿವೆ.
ಬಾದಾಮಿ(ಜು.01): ಬಕ್ರೀದ್ ಹಿನ್ನೆಲೆಯಲ್ಲಿ ಗೋಹತ್ಯೆ ಮಾಡಿದ ಘಟನೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಉತ್ತರ ವಲಯ ಐಜಿಪಿ ವಿ.ವಿಕಾಸಕುಮಾರ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಈಗಲೂ ಅಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಮಹಮ್ಮದ ಅಜರುದ್ದೀನ ನಬಿಸಾಬ ಹುಲ್ಲಿಕೇರಿ, ಅಕ್ತಾಬ ನಬಿಸಾಬ ಹುಲ್ಲಿಕೇರಿ, ಬಾದಾಮಿ ಪಟ್ಟಣದವರಾದ ಮಹಮ್ಮದ ಜಮಿ ಹುಸೇನಸಾಬ ಹುಲ್ಲಿಕೇರಿ, ಇಬ್ರಾಹಿಂ ರಾಜೇಸಾಬ ಬೇಪಾರಿ, ಮುಸ್ತಾಕ ರಾಜೇಸಾಬ ಬೇಪಾರಿ, ಅಲ್ತಾಫ ರಾಜೇಸಾಬ ಜಾತಗಾರ, ಮಹಾಂತೇಶ ರಂಗಪ್ಪ ಚಲವಾದಿ ಹಾಗೂ ಬಾದಾಮಿ ತಾಲೂಕಿನ ಯರಗೊಪ್ಪ ಗ್ರಾಮದ ಹನಮಂತ ದುರಗಪ್ಪ ಮಾದರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
undefined
ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ತೀವ್ರ ಹೋರಾಟ: ಶಂಕರಮಠದ ಚಂದ್ರಶೇಖರ ಸ್ವಾಮೀಜಿ ಎಚ್ಚರಿಕೆ
ಬಾದಾಮಿ ಪಟ್ಟಣ ಸದ್ಯ ಬೂದಿಮುಚ್ಚಿದ ಕೆಂಡದಂತಾಗಿದೆ. ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳನ್ನು ಪತ್ತೆ ಹಚ್ಚಲು ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಆದರೆ ಸಂಘಟನೆಗಳ ಸದಸ್ಯರು ಶುಕ್ರವಾರ ಬೆಳಗ್ಗೆಯಿಂದ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡ ಹೇರಿದ್ದಾರೆ. ಬಂದ್‌ಗೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಸ್ಥಳೀಯ ವ್ಯಾಪಾರಸ್ಥರು ಪ್ರೋತ್ಸಾಹ ನೀಡಿದ್ದಾರೆ.
ಪೊಲೀಸ್ ಸರ್ಪಗಾವಲು:
ಶಾಂತಿ ಸುವ್ಯವಸ್ಥೆ ಕಾಪಾಡಲು ಉತ್ತರ ವಲಯ ಐಜಿಪಿ ವಿ. ವಿಕಾಸಕುಮಾರ್, ಎಸ್‌ಪಿ ಜಯಪ್ರಕಾಶ, ಎಎಸ್ಪಿ ಪ್ರಸನ್ನ ದೇಸಾಯಿ, 4 ಡಿವೈಎಸ್ಪಿ, 11 ಸಿಪಿಐ, 120 ಪಿಎಸ್‌ಐ ಹಾಗೂ ಸಿಬ್ಬಂದಿ, 4 ಡಿಆರ್, 2 ಕೆಎಸ್‌ಆರ್‌ಪಿ ಸಿಬ್ಬಂದಿ ಪಟ್ಟಣದಲ್ಲಿ ಬೀಡು ಬಿಟ್ಟಿವೆ. ಉತ್ತರ ವಲಯ ಐಜಿಪಿ ವಿಕಾಸಕುಮಾರ ಅವರು ಹಿಂದುಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಗೋಹತ್ಯೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವ ಜತೆಗೆ ಗೋಹತ್ಯೆ ಮಾಡಿದ ಜಾಗದಲ್ಲಿ ಗೋಶಾಲೆ ನಿರ್ಮಾಣ ಮಾಡಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ರವಿ ಪೂಜಾರ ಮನವಿ ಸಲ್ಲಿಸಿದ್ದಾರೆ.
ಸ್ವಯಂಪ್ರೇರಿತ ಬಂದ್:
ಇನ್ನುಳಿದ ಆರೋಪಿಗಳನ್ನು ಶೀಘ್ರ ಬಂಧನ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಯಿತು. ಹಿಂದು ಪರ ಸಂಘಟನೆಗಳು ಶುಕ್ರವಾರವೂ ಪ್ರತಿಭಟನೆ ನಡೆಸಿ, ಗೋಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪಿ.ಎಸ್.ಐ.ಅವರಿಗೆ ಮನವಿ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಬಕ್ರೀದ್ ಹಬ್ಬದ ಅಂಗವಾಗಿ ಗುರುವಾರ ನಡೆದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ನಡೆದಿದೆ ಎನ್ನಲಾದ ಗೋಹತ್ಯೆಗೆ ಹಿಂದುಪರ ಸಂಘಟನೆಗಳು ಶುಕ್ರವಾರ ಬೆಳಿಗ್ಗೆಯಿಂದ ಸ್ವಯಂ ಬಂದ್ ಮಾಡಲು ಮನವಿ ಮಾಡಿದ್ದರಿಂದ ಬಂದ್ ಶಾಂತರೀತಿಯಲ್ಲಿ ಯಶಸ್ಸು ಕಂಡಿತು.