ಬೆಂಗಳೂರು: ಐಫೋನ್ ಎಂದು ನಕಲಿ ಫೋನ್ ಕೊಟ್ಟು ₹60,000 ವಂಚನೆ!

By Kannadaprabha NewsFirst Published Feb 2, 2024, 4:31 AM IST
Highlights

ಚರ್ಚ್‌ಸ್ಟ್ರೀಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಡಿಮೆ ಬೆಲೆಗೆ ದುಬಾರಿ ಐಫೋನ್‌ ನೀಡುವುದಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ₹60 ಸಾವಿರ ಪಡೆದು ಬಳಿಕ ನಕಲಿ ಐಫೋನ್‌ ಇರುವ ಬಾಕ್ಸ್‌ ಕೊಟ್ಟು ವಂಚಿಸಿರುವ ಸಂಬಂಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು (ಫೆ.2): ಚರ್ಚ್‌ಸ್ಟ್ರೀಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಡಿಮೆ ಬೆಲೆಗೆ ದುಬಾರಿ ಐಫೋನ್‌ ನೀಡುವುದಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ₹60 ಸಾವಿರ ಪಡೆದು ಬಳಿಕ ನಕಲಿ ಐಫೋನ್‌ ಇರುವ ಬಾಕ್ಸ್‌ ಕೊಟ್ಟು ವಂಚಿಸಿರುವ ಸಂಬಂಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೇರಳ ಮೂಲದ ಆದೀಲ್‌ ಸುನಿ(23) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಉತ್ತರಪ್ರದೇಶದ ಮೀರತ್‌ ಮೂಲದ ಮಹಮದ್‌ ಅಫ್ತಾಬ್‌ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಾಪತ್ತೆ; ವಾರ ಕಳೆದರೂ ಪತ್ತೆಯಾಗಿಲ್ಲ!

ಏನಿದು ಘಟನೆ?: ದೂರುದಾರ ಆದೀಲ್‌ ಸುನಿ ತಮಿಳುನಾಡಿನ ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಕಲಿಯುತ್ತಿದ್ದಾರೆ. ಸ್ನೇಹಿತರನ್ನು ಭೇಟಿಯಾಗಲು ಜ.25ರಂದು ಸೇಲಂನಿಂದ ಬೆಂಗಳೂರಿಗೆ ಬಂದಿದ್ದರು. ಜೆ.ಪಿ.ನಗರ ನಿವಾಸಿಯಾಗಿರುವ ಸ್ನೇಹಿತ ಮಹಮದ್‌ ಬಿಲಾಲ್‌ ಅವರ ಮನೆಯಲ್ಲಿ ತಂಗಿದ್ದರು. ಜ.28ರಂದು ರಾತ್ರಿ 8.20ರ ಸುಮಾರಿಗೆ ಸ್ನೇಹಿತರಾದ ಮಹಮದ್‌ ಬಿಲಾಲ್‌, ಅಬ್ದುಲ್‌ ರೆಹಮಾನ್‌ ಅವರ ಜತೆಗೆ ಚರ್ಚ್‌ ಸ್ಟ್ರೀಟ್‌ಗೆ ಸುತ್ತಾಡಲು ಬಂದಿದ್ದಾರೆ.

ನಕಲಿ ಐಫೋನ್‌ ಕೊಟ್ಟ!: ರಾತ್ರಿ 10 ಗಂಟೆ ಸುಮಾರಿಗೆ ಚರ್ಚ್‌ಸ್ಟ್ರೀಟ್‌-ಎಂ.ಜಿ.ರಸ್ತೆಯ ಮೆಟ್ರೋ ರೈಲು ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿ ಎದುರಾಗಿ ತನ್ನ ಹೆಸರು ಮಹಮದ್‌ ಅಫ್ತಾಬ್‌ ಎಂದು ಪರಿಚಯಿಸಿಕೊಂಡಿದ್ದಾನೆ. ತನ್ನ ಬಳಿ ನನ್ನ ಬಳಿ ಐಫೋನ್‌ 15 ಪ್ರೋ ಮ್ಯಾಕ್ಸ್‌ ಮೊಬೈಲ್‌ ಇದೆ. ಅದನ್ನು ನಾನು ₹60 ಸಾವಿರಕ್ಕೆ ಮಾರಾಟ ಮಾಡುತ್ತೇನೆ ಎಂದು ಒಂದು ಮೊಬೈಲ್‌ ತೋರಿಸಿದ್ದಾನೆ. ಈ ವೇಳೆ ಆದೀಲ್‌ ಹಾಗೂ ಆತನ ಸ್ನೇಹಿತರು ಆ ಮೊಬೈಲ್‌ ಪಡೆದು ಪರಿಶೀಲಿಸಿದಾಗ ಅದು ಅಸಲಿ ಐಫೋನ್‌ ಎನ್ನುವುದು ಗೊತ್ತಾಗಿದೆ. ಕಡಿಮೆ ಬೆಲೆಗೆ ದುಬಾರಿ ಐಫೋನ್‌ ಸಿಗುವ ಖುಷಿಯಲ್ಲಿ ಗೂಗಲ್‌ ಪೇ ಮುಖಾಂತರ ಅಪರಿಚಿತನಿಗೆ ₹60 ಸಾವಿರ ವರ್ಗಾಯಿಸಿದ್ದಾರೆ. ಈ ವೇಳೆ ಆತ ಮೊಬೈಲ್‌ ಫೋನ್‌ ಇರುವ ಬಾಕ್ಸ್‌ ಕೊಟ್ಟು ಸ್ಥಳದಿಂದ ತೆರಳಿದ್ದಾನೆ.

ಬೆಂಗಳೂರು: ಪೊಲೀಸ್‌ ಹೆಸರಲ್ಲೂ ಮೋಸ, ಮಹಿಳೆಗೆ ಟೋಪಿ ಹಾಕಿದ ಖದೀಮರು

ಈ ವೇಳೆ ಆದೀಲ್‌ ಆ ಬಾಕ್ಸ್ ತೆರೆದು ನೋಡಿದಾಗ ನಕಲಿ ಐಫೋನ್‌ ಮೊಬೈಲ್‌ ಇರುವುದು ಕಂಡು ಬಂದಿದೆ. ತಮಗೆ ಮೋಸ ಮಾಡಿದ ವ್ಯಕ್ತಿಗಾಗಿ ಆದೀಲ್‌ ಹಾಗೂ ಆತನ ಸ್ನೇಹಿತರು ಚರ್ಚ್‌ ಸ್ಟ್ರೀಟ್‌ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಹುಡುಕಾಡಿದ್ದಾರೆ. ಆದರೆ, ಎಲ್ಲಿಯೂ ಆತ ಪತ್ತೆಯಾಗಿಲ್ಲ. ಬಳಿಕ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಆರೋಪಿಯ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!