ಬೆಂಗ್ಳೂರಲ್ಲಿ ದರೋಡೆ: 4 ಉಗ್ರರಿಗೆ 7 ವರ್ಷ ಜೈಲು

By Kannadaprabha NewsFirst Published Jan 15, 2023, 11:52 AM IST
Highlights

2018ರಲ್ಲಿ ಬೆಂಗಳೂರು ನಗರದ ಕೆ.ಆರ್‌.ಪುರ, ಕೊತ್ತನೂರು ಮತ್ತು ಅತ್ತಿಬೆಲೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ದರೋಡೆ ನಡೆಸಿ ಹಣ, ಬೆಲೆಬಾಳುವ ಎಲೆಕ್ಟ್ರಾನಿಕ್‌ ವಸ್ತುಗಳನ್ನು ದೋಚಿದ್ದ ಆರೋಪಿಗಳು.  

ಬೆಂಗಳೂರು(ಜ.15):  ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಹಣ ಹೊಂದಿಸುವ ಉದ್ದೇಶದಿಂದ ನಗರದಲ್ಲಿ ದರೋಡೆ ಮಾಡಿ ಬಂಧನಕ್ಕೆ ಒಳಗಾಗಿದ್ದ ನಾಲ್ವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 40 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಜಿಲ್ಲೆಯ ಕದೋರ್‌ ಖಾಜಿ ಅಲಿಯಾಸ್‌ ಮೋಟಾ ಅನಾಸ್‌ (33), ಮುಸ್ತಾಫಿಜರ್‌ ರಹಮಾನ್‌ ಅಲಿಯಾಸ್‌ ತುಹಿನ್‌ (39), ಶಂಷೇರ್‌ ಗಂಜ್‌ ಜಿಲ್ಲೆಯ ಅದಿಲ್‌ ಶೇಖ್‌ (27) ಹಾಗೂ ಮುರ್ಷಿದಾಬಾದ್‌ ಜಿಲ್ಲೆಯ ಅಬ್ದುಲ್‌ ಕರೀಮ್‌ ಅಲಿಯಾಸ್‌ ಚೋಟಾ (21) ಶಿಕ್ಷೆಗೆ ಒಳಗಾದವರು. ಈ ನಾಲ್ವರು ಬಾಂಗ್ಲಾದೇಶದ ಜಮಾತ್‌-ಉಲ್‌-ಮುಜಾಹಿದ್ದೀನ್‌ (ಜೆಎಂಬಿ) ಭಯೋತ್ಪಾದನಾ ಸಂಘಟನೆಗೆ ಸೇರಿದ ಉಗ್ರರಾಗಿದ್ದಾರೆ.

ಆರೋಪಿಗಳು 2018ರಲ್ಲಿ ನಗರದ ಕೆ.ಆರ್‌.ಪುರ, ಕೊತ್ತನೂರು ಮತ್ತು ಅತ್ತಿಬೆಲೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ದರೋಡೆ ನಡೆಸಿ ಹಣ, ಬೆಲೆಬಾಳುವ ಎಲೆಕ್ಟ್ರಾನಿಕ್‌ ವಸ್ತುಗಳನ್ನು ದೋಚಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳು ಚಿಕ್ಕಬಾಣಾವರ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಭಯೋತ್ಪಾದನಾ ಸಂಘಟನೆಯ ನಂಟು ಹೊಂದಿದ ಆಧಾರದಲ್ಲಿ ತನಿಖೆ ಕೈಗೊಂಡಿದ್ದ ಎನ್‌ಐಎ ತನಿಖಾಧಿಕಾರಿಗಳು ಆರೋಪಿಗಳಿಂದ ಅಪಾರ ಪ್ರಮಾಣದ ಎಲೆಕ್ಟ್ರಾನಿಕ್‌ ವಸ್ತುಗಳು, ರಾಸಾಯನಿಕ ಉಪಕರಣಗಳು, ಬಾಂಬ್‌ಗಳನ್ನು ತಯಾರಿಸಲು ಬಳಸುವ ಕಂಟೈನರ್‌, ಸುಧಾರಿತ ಸ್ಫೋಟಕ ಸಾಧನ, ಡಿಜಿಟಲ್‌ ಕ್ಯಾಮೆರಾ ಮತ್ತು ಕೈಬರಹದ ದಾಖಲೆಗಳನ್ನು ವಶಪಡಿಸಿಕೊಂಡು 2019 ಮತ್ತು 2020ರಲ್ಲಿ ದೋಷಾರೋಪ ಪಟ್ಟಿಸಲ್ಲಿಸಿದ್ದರು.

ವೇಶ್ಯಾವಾಟಿಕೆ, ಎತ್ತಂಗಡೀಲಿ ಸ್ಯಾಂಟ್ರೋ ಎಕ್ಸಪರ್ಟ್‌..!

ವಿಚಾರಣೆ ವೇಳೆ ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಬೆಂಗಳೂರಿನಲ್ಲಿ ವಾಸವಿದ್ದ ಮನೆಗಳಲ್ಲಿ ಸ್ಫೋಟಕಗಳನ್ನು ತಯಾರಿಸಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಮತ್ತು ಮುಸ್ತಾಫಿಜರ್‌ ರೆಹಮಾನ್‌ ಸಹಚರರೊಂದಿಗೆ ಸೇರಿ ಸ್ಫೋಟಕಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ತನಿಖೆಯಲ್ಲಿ ದೃಢಪಟ್ಟಿತು.

ಈ ನಾಲ್ವರು ಅಪರಾಧಿಗಳು ಜೆಎಂಬಿ ಭಯೋತ್ಪಾದನಾ ಸಂಘಟನೆಗೆ ಸೇರಿದವರಾಗಿದ್ದಾರೆ. ಈ ಪೈಕಿ ಅಬ್ದುಲ್‌ ಕರೀಂ 2013 ಜುಲೈ 7ರಂದು ವಿಶ್ವ ಪರಂಪರೆಯ ತಾಣವಾದ ಮಹಾಬೋಧಿ ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗವಹಿಸಿದ್ದ. ಈ ಸ್ಫೋಟದಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಸೇರಿದಂತೆ ಐವರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಎನ್‌ಐಎ ಪರ ವಕೀಲ ಪಿ.ಪ್ರಸನ್ನಕುಮಾರ್‌ ವಾದ ಮಂಡಿಸಿದ್ದರು. ಇದೀಗ ನಾಲ್ವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ.

click me!