
ಬೆಂಗಳೂರು(ಜೂ.15): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಂದಾಯ ಇನ್‌ಸ್ಪೆಕ್ಟರ್ ಸೋಗಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಯಡಿ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವ್ಯಕ್ತಿಯೊಬ್ಬ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಧನಂಜಯ್ ಎಂಬಾತನ ಮೇಲೆ ಆರೋಪ ಬಂದಿದ್ದು, ರಾಜಾಜಿನಗರದ ಸಿ.ಸುರೇಶ್ ನೀಡಿದ ದೂರಿನ ಮೇರೆಗೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನೆಯಲ್ಲಿ ಮಲಗಿದ್ದ ದಂಪತಿಗೆ ಕಚ್ಚಿದ ಹಾವು: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ
ಎರಡು ವರ್ಷಗಳ ಹಿಂದೆ ತಮ್ಮ ಸ್ನೇಹಿತ ಎಂಜಿನಿಯರ್ ಜಿ.ರಾಮು ಮೂಲಕ ವಿನಾಯಕ ಕಂಪ್ಯೂಟರ್ ಮಳಿಗೆ ಮಾಲಿಕ ಸುರೇಶ್‌ಗೆ ಧನಂಜಯ್ ಪರಿಚಯವಾಗಿದ್ದಾನೆ. ಆಗ ತಾನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಂದಾಯ ಇನ್‌ಸ್ಪೆಕ್ಟರ್ ಆಗಿದ್ದೇನೆ. ಸರ್ಕಾರದ ವಿವಿಧ ಆಶ್ರಯ ಯೋಜನೆಗಳಯಡಿ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಹೇಳಿದ್ದ. ಅಂತೆಯೇ 2023ರ ಮಾಚ್‌ರ್‍ನಲ್ಲಿ ಬಿಡಿಎಯಲ್ಲಿ ಸೈಟ್ ಕೊಡಿಸುವುದು ಕಷ್ಟ. ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಮೂಲಕ ಕೆಂಗೇರಿ ಬಳಿಯ ಕೊಮ್ಮಘಟ್ಟಗ್ರಾಮದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಯಡಿ ಸೈಟ್ ಕೊಡಿಸುತ್ತೇನೆ ಎಂದಿದ್ದ. ಈ ಮಾತಿಗೆ ಒಪ್ಪಿದ ಸುರೇಶ್, ರಾಮು, ಪುನೀತ್ ಹಾಗೂ ಮನೋಜ್ ಸೇರಿದಂತೆ 9 ಜನರು ತಲಾ ಒಂದರಂತೆ 9 ನಿವೇಶನಗಳಿಗೆ ಮನವಿ ಮಾಡಿದ್ದರು. ಆಗ ಈ ನಿವೇಶನ ಮಂಜೂರಾತಿ ಸಲುವಾಗಿ ಓಡಾಡಲು ಪ್ರತಿ ನಿವೇಶನಕ್ಕೆ ತಲಾ .55 ಸಾವಿರ ನೀಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದ. ನಿವೇಶನ ಸಿಗುವ ಖುಷಿಯಲ್ಲಿ ಆರೋಪಿಗೆ ಆನ್‌ಲೈನ್ ಮೂಲಕ ಹಣವನ್ನು ಸಂತ್ರಸ್ತರು ಕಳುಹಿಸಿದ್ದರು. ಈ ಹಣ ಸಂದಾಯವಾದ ಬಳಿಕ ಧನಂಜಯ್ ಮೊಬೈಲ್ ಸ್ಥಗಿತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್‌ನಲ್ಲೇ ಡೀಲ್:
ಸಂತ್ರಸ್ತರಿಗೆ ಆರೋಪಿ ಧನಂಜಯ್ ನೇರ ಪರಿಚಯವಿಲ್ಲ. ಈ ವಂಚನೆ ಮಾತುಕತೆಯನ್ನು ಮೊಬೈಲ್ ಮೂಲಕವೇ ನಡೆದಿದೆ. ಹೀಗಾಗಿ ಆರೋಪಿಯ ಹೆಸರು ಧನಂಜಯ್ ಅಥವಾ ಬೇರೆಯೇ ಎಂಬುದು ಖಚಿತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ