ಮುಂಬೈ ಕ್ರೈಂ ಬ್ರ್ಯಾಂಚ್‌ ಪೊಲೀಸರ ಹೆಸರಲ್ಲಿ ಕರೆ ಮಾಡಿ ಮೋಸ: ಶಿಕ್ಷಕನಿಗೆ 32 ಲಕ್ಷ ವಂಚನೆ

By Kannadaprabha News  |  First Published Sep 6, 2023, 7:43 AM IST

ತಮ್ಮ ಹೆಸರಿನ ಐದು ಪಾಸ್‌ಪೋರ್ಟ್‌ಗಳ ಪತ್ತೆ ಸಂಬಂಧ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ಶಿಕ್ಷಕರೊಬ್ಬರಿಗೆ ಮಹಾರಾಷ್ಟ್ರದ ಮುಂಬೈ ನಗರದ ಕ್ರೈಂ ಬ್ರಾಂಚ್‌ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಸೈಬರ್‌ ವಂಚಕರು 32.25 ಲಕ್ಷ ದೋಚಿರುವ ಘಟನೆ ನಡೆದಿದೆ.


ಬೆಂಗಳೂರು (ಸೆ.06): ತಮ್ಮ ಹೆಸರಿನ ಐದು ಪಾಸ್‌ಪೋರ್ಟ್‌ಗಳ ಪತ್ತೆ ಸಂಬಂಧ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ಶಿಕ್ಷಕರೊಬ್ಬರಿಗೆ ಮಹಾರಾಷ್ಟ್ರದ ಮುಂಬೈ ನಗರದ ಕ್ರೈಂ ಬ್ರಾಂಚ್‌ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಸೈಬರ್‌ ವಂಚಕರು 32.25 ಲಕ್ಷ ದೋಚಿರುವ ಘಟನೆ ನಡೆದಿದೆ. ದೇವನಹಳ್ಳಿ ನಿವಾಸಿ ಚತುರ ರಾವ್‌ ಹಣ ಕಳೆದುಕೊಂಡಿದ್ದು, ಈ ಸಂಬಂಧ ಈಶಾನ್ಯ ವಿಭಾಗದ ಸಿಇಎನ್‌ ಠಾಣೆಯಲ್ಲಿ ರಾವ್‌ ದೂರು ದಾಖಲಿಸಿದ್ದಾರೆ.

ಆ.2ರಂದು ಫೆಡೆಕ್ಸ್‌ ಕೊರಿಯರ್‌ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ಶಿಕ್ಷಕ ಚತುರರಾವ್‌ ಅವರಿಗೆ ಕಿಡಿಗೇಡಿ ಕರೆ ಮಾಡಿದ್ದಾನೆ. ಆಗ ನಿಮ್ಮ ಹೆಸರಿನಲ್ಲಿ ಕೊರಿಯರ್‌ ಪಾರ್ಸೆಲ್ ಬಂದಿದ್ದು, ಅದರಲ್ಲಿ ನಿಮ್ಮ ಮೊಬೈಲ್ ನಂಬರ್‌, ಆಧಾರ್‌ ನಂಬರ್‌, ಐದು ಪಾಸ್‌ಪೋರ್ಟ್‌, ಐದು ಕ್ರೆಡಿಟ್‌ ಕಾರ್ಡ್‌ ಮತ್ತು ಒಂದು ಲ್ಯಾಪ್‌ಟಾಪ್‌ ಪತ್ತೆಯಾಗಿವೆ. ಈ ಪ್ರಕರಣವನ್ನು ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದಿದ್ದ. ಕೆಲ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿ ಪಾಸ್‌ಪೋರ್ಟ್‌ ಪತ್ತೆ ಸಂಬಂಧ ವಿಚಾರಣೆಗೆ ವಿಡಿಯೋ ಕರೆ ಮೂಲಕ ಮಾತನಾಡಬೇಕಾಗುತ್ತದೆ. ಆದ್ದರಿಂದ ಸ್ಕೈಪ್‌ ಆ್ಯಪ್‌ ಡೌನ್‌ಲೋಡ್‌ ಮಾಡಿ ಎಂದು ಶಿಕ್ಷಕನಿಗೆ ಆರೋಪಿ ತಿಳಿಸಿದ್ದ. ಈ ಕರೆಯಿಂದ ಗಾಬರಿಗೊಂಡ ಶಿಕ್ಷಕರು, ಪೊಲೀಸರೇ ಇರಬಹುದು ಎಂದು ಭಾವಿಸಿ ವಿಡಿಯೋ ಕರೆ ಸ್ವೀಕರಿಸಿದ್ದರು.

Tap to resize

Latest Videos

ಪ್ರಾಣಿ ದಾಳಿ ತಡೆಯಲು ಅರಣ್ಯ ಒತ್ತುವರಿ ತೆರವು: ಸಿಎಂ ಸಿದ್ದು ಸೂಚನೆ

ತರುವಾಯ ಮುಂಬೈ ಕ್ರೈಂ ಬ್ರಾಂಚ್‌ನ ಆ್ಯಂಟಿ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋದ ಅಧಿಕಾರಿ ಎಂದು ಪರಿಚಯಿಸಿಕೊಂಡ ವಿಡಿಯೋ ಕರೆ ಮಾಡಿದ್ದ ಮತ್ತೊಬ್ಬ, ಕೆಲವರು ನಿಮ್ಮ ಹೆಸರಿನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಿಳಿದುಕೊಳ್ಳಬೇಕಾದರೆ ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣವನ್ನು ವರ್ಗಾಯಿಸಬೇಕು ಎಂದು ಸೂಚಿಸಿದ್ದ. ಅಂತೆಯೇ ಆರೋಪಿ ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ 32.25 ಲಕ್ಷವನ್ನು ಚತುರರಾವ್‌ ವರ್ಗಾಯಿಸಿದ್ದರು. ಈ ಹಣ ಸಂದಾಯವಾದ ಬಳಿಕ ಸಂಪರ್ಕ ಕಡಿತವಾಗಿದೆ. ಕೊನೆಗೆ ತಾವು ವಂಚನೆಗೆ ಒಳಗಾಗಿರುವುದು ಶಿಕ್ಷಕರಿಗೆ ಅರಿವಾಗಿದೆ. ನಂತರ ಈಶಾನ್ಯ ವಿಭಾಗದ ಸಿಇಎನ್‌ ಠಾಣೆಗೆ ತೆರಳಿ ಅವರು ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!