ಒಂದು ವಾರ ಕಳೆದರೂ ಬೆಳ್ಳುಳ್ಳಿ ಲೋಡ್ ಬರಲಿಲ್ಲ. ಆ ವ್ಯಕ್ತಿಗಳು ಫೋನ್ ಕರೆಯನ್ನು ಸ್ವೀಕರಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಮೋಸ ಹೋದ ಮೇಲೆ ಖಾಲಿದ್ ಖಾನ್ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಮನಗರ(ಜೂ.09): ಬೆಳ್ಳುಳ್ಳಿ ವ್ಯಾಪಾರ ಮಾಡಲು ಹೋಗಿ ವ್ಯಕ್ತಿಯೊಬ್ಬರು 2.25 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಕನಕಪುರ ನಗರದ ಪೈಪ್ ಲೈನ್ ರಸ್ತೆಯಲ್ಲಿನ ಅಜೀಜ್ ನಗರ ಬಡಾವಣೆ ವಾಸಿ ಖಾಲಿದ್ ಖಾನ್ ವಂಚನೆಗೊಳಗಾದವರು. ಕಬ್ಬಿಣದ ವ್ಯಾಪಾರಿಯಾದ ಖಾಲಿದ್ ಖಾನ್ ಬೆಳ್ಳುಳ್ಳಿ ವ್ಯಾಪಾರ ಮಾಡಲು ಕಿಸಾನ್ ಡೀಲ್ಸ್ ಆಪ್ ನಲ್ಲಿ ತಮ್ಮ ಫೋನ್ ನಂಬರ್ ಹಾಗೂ 5 ಟನ್ ಬೆಳ್ಳುಳ್ಳಿ ವ್ಯಾಪಾರಕ್ಕಾಗಿ ಬೇಕೆಂದು ಅಪ್ ಲೋಡ್ ಮಾಡಿದ್ದರು.
ವಂಚಕನೊಬ್ಬ ಖಾಲಿದ್ ಖಾನ್ ಮೊಬೈಲ್‌ಗೆ ಫೋನ್ ಮಾಡಿ ತನ್ನ ಹೆಸರು ಲೋಕೇಶ್, ಸತ್ಯಸಾಯಿ ಎಂಟರ್ ಪ್ರೈಸಸ್ ನ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲದೆ, ಆಂಧ್ರದ ಗುಂಟೂರಿನಲ್ಲಿ ತಮ್ಮ ಕಂಪನಿಯಿದ್ದು, ನಿಮಗೆ 2.5 ಟನ್ ಬೆಳ್ಳುಳ್ಳಿಯನ್ನು ಕಳುಹಿಸುವುದಾಗಿ ಹೇಳಿದ್ದಾನೆ.
ಮೊಮ್ಮಗಳ ಬೆತ್ತಲೆ ವಿಡಿಯೋ ತೋರಿಸಿ ಬೆದರಿಕೆ; ಮರ್ಯಾದೆಗೆ ಹೆದರಿ ವಿಷ ಸೇವಿಸಿದ ಕುಟುಂಬ
ಆಗ ಖಾಲಿದ್ ಸ್ಯಾಂಪಲ್‌ಗಾಗಿ ಬೆಳ್ಳುಳ್ಳಿಯ ಫೋಟೋ ವಾಟ್ಸ್ ಆಪ್ ಗೆ ತರಿಸಿಕೊಂಡು ನೋಡಿದ್ದಾರೆ. ಬೆಳ್ಳುಳ್ಳಿ ಕೊಳ್ಳಲು ಒಪ್ಪಿ 50 ಸಾವಿರ ರು. ವಂಚಕ ಹೇಳಿದಂತೆ ಗೂಗಲ್ ಪೇ ಮಾಡಿದ್ದಾರೆ. ನಂತರ ಇನ್ ವಾಯ್ಸ್ ಕಳುಹಿಸಿ ಮತ್ತೆ ಹಣ ಕೇಳಿದಾಗ 50 ಸಾವಿರ ವರ್ಗಾವಣೆ ಮಾಡಿದ್ದಾರೆ. 2.5 ಟನ್ ಬೆಳ್ಳುಳ್ಳಿ ಸೌತ್ ಎಂಡಿಯಮ್ ಟ್ರಾನ್ಸ್ ಪೋರ್ಟ್ ಗೆ ಲೋಡ್ ಮಾಡಿರುವುದಾಗಿ ಹೇಳಿ ಟ್ರಾನ್ಸ್ ಪೋರ್ಟ್ ಬಿಲ್ ಕಳುಹಿಸಿ ಮತ್ತೆ ಹಣ ಕೇಳಿದಾಗ ಖಾಲಿದ್ ರವರು 15 ಸಾವಿರ ಕಳುಹಿಸಿದ್ದಾರೆ.
ಆನಂತರ ಮತ್ತೊಬ್ಬ ವ್ಯಕ್ತಿ ತಾನು ಸೌತ್ ಇಂಡಿಯನ್ ಟ್ರಾನ್ಸ್ ಪೋರ್ಟ್ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಪೂರ್ಣ ಹಣ ಕಳುಹಿಸಿದರೇ ಮಾತ್ರ ಬೆಳ್ಳುಳ್ಳಿ ಲೋಡ್ ಅನ್ನು ಕಳುಹಿಸುವುದಾಗಿ ಹೇಳಿದ್ದಾರೆ. ಆಗಲೂ ಖಾಲಿದ್ 1.10 ಲಕ್ಷ ರು.ಗಳನ್ನು ವರ್ಗಾವಣೆ ಮಾಡಿದ್ದಾರೆ. ಒಂದು ವಾರ ಕಳೆದರೂ ಬೆಳ್ಳುಳ್ಳಿ ಲೋಡ್ ಬರಲಿಲ್ಲ. ಆ ವ್ಯಕ್ತಿಗಳು ಫೋನ್ ಕರೆಯನ್ನು ಸ್ವೀಕರಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಮೋಸ ಹೋದ ಮೇಲೆ ಖಾಲಿದ್ ಖಾನ್ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.