ಬೆಂಗ್ಳೂರಲ್ಲಿ ಡ್ರಗ್ಸ್‌ ದಂಧೆ: ಹಂಚಿಕೆ ಮಾಡುತ್ತಿದ್ದಾಗಲೇ ಖೆಡ್ಡಾಗೆ ಬಿದ್ದ ಖದೀಮರು..!

By Kannadaprabha NewsFirst Published Sep 17, 2023, 6:21 AM IST
Highlights

ವರ್ತೂರು, ಬನಶಂಕರಿ, ವಿದ್ಯಾರಣ್ಯಪುರ, ಕಾಟನ್‌ಪೇಟೆ ಹಾಗೂ ಕಾಡುಗೋಡಿ ಠಾಣೆಗಳ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ದಾಳಿ ವೇಳೆ ಮೂವರು ವಿದೇಶಿ ಪ್ರಜೆಗಳು, ಒಡಿಶಾ ಹಾಗೂ ಕೇರಳ ರಾಜ್ಯಗಳ ತಲಾ ನಾಲ್ವರು ಹಾಗೂ ಬೆಂಗಳೂರಿನ ಮೂವರು ಸೇರಿದ್ದಾರೆ: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರು(ಸೆ.17): ಕಳೆದೊಂದು ವಾರದ ಅವಧಿಯಲ್ಲಿ ರಾಜಧಾನಿ ವ್ಯಾಪ್ತಿ ಮಾದಕ ವಸ್ತು ಮಾರಾಟದಲ್ಲಿ ನಿರತರಾಗಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 14 ಮಂದಿ ಪೆಡ್ಲರ್‌ಗಳನ್ನು ಬಂಧಿಸಿ 7.83 ಕೋಟಿ ರು. ಮೌಲ್ಯದ ಡ್ರಗ್ಸ್‌ ಅನ್ನು ಸಿಸಿಬಿ ಜಪ್ತಿ ಮಾಡಿದೆ.

ವರ್ತೂರು, ಬನಶಂಕರಿ, ವಿದ್ಯಾರಣ್ಯಪುರ, ಕಾಟನ್‌ಪೇಟೆ ಹಾಗೂ ಕಾಡುಗೋಡಿ ಠಾಣೆಗಳ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ದಾಳಿ ವೇಳೆ ಮೂವರು ವಿದೇಶಿ ಪ್ರಜೆಗಳು, ಒಡಿಶಾ ಹಾಗೂ ಕೇರಳ ರಾಜ್ಯಗಳ ತಲಾ ನಾಲ್ವರು ಹಾಗೂ ಬೆಂಗಳೂರಿನ ಮೂವರು ಸೇರಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ಸಿಸಿಬಿ ಪೊಲೀಸ್ ಭರ್ಜರಿ ಕಾರ್ಯಾಚರಣೆ; 34 ಪೆಡ್ಲರ್‌ಗಳನ್ನ ಬಂಧಿಸಿ ₹2.42 ಕೋಟಿ ಡ್ರಗ್ಸ್ ಜಪ್ತಿ!

ಆರೋಪಿಗಳಿಂದ 182 ಕೆಜಿ ಗಾಂಜಾ, 1.450 ಕೆಜಿ ಹ್ಯಾಶೀಶ್ ಆಯಿಲ್‌, 16.2 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌, 132 ಎಕ್ಸೈಟೆಸಿ ಮಾತ್ರೆಗಳು ಹಾಗೂ 80 ಗ್ರಾಂ ಕೊಕೇನ್‌ ಸೇರಿದಂತೆ 7.83 ಕೋಟಿ ರು ಮೌಲ್ಯದ ಡ್ರಗ್ಸ್ ಮತ್ತು 2 ಕಾರುಗಳು, 2 ಸ್ಕೂಟರ್ ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಮಂಗಳೂರು: ಪೊಲೀಸರ ಮೇಲೆ ಠಾಣೆಯಲ್ಲೇ ಯುವತಿ ಹಲ್ಲೆ; 'ಡ್ರಗ್ ಅಡಿಕ್ಟ್' ವಿಡಿಯೋ ವೈರಲ್ ಅಸಲಿಯತ್ತೇನು?

ಕಾರಿನಲ್ಲಿ 1 ಕ್ವಿಂಟಾಲ್ ಗಾಂಜಾ ಸಾಗಣೆ

ನಗರಕ್ಕೆ ತಮ್ಮೂರಿನಿಂದ ಸಾಮಾನ್ಯ ಪ್ರಯಾಣಿಕರ ಸೋಗಿನಲ್ಲಿ 1 ಕ್ವಿಂಟಾಲ್‌ 82 ಕೆಜಿ ಗಾಂಜಾವನ್ನು ಕಾರಿನಲ್ಲಿ ತುಂಬಿಕೊಂಡು ಬಂದು ಮಾರಾಟಕ್ಕೆ ಯತ್ನಿಸಿದ್ದ ಒಡಿಶಾ ಗ್ಯಾಂಗ್ ಸಿಸಿಬಿಗೆ ಸೆರೆಯಾಗಿದೆ.
ಒಡಿಶಾದ ಕುನ್ನಾ ಸೋನಾ, ಜಲಂದರ್ ಸಿಂಗ್‌, ಹರಿಜನ್ ಹಾಗೂ ಜಗದೀಶ್‌ ಬಂಧಿತರಾಗಿದ್ದು, ಈ ತಂಡದ ಪ್ರಮುಖ ಆರೋಪಿ ಪತ್ತೆಗೆ ತನಿಖೆ ನಡೆದಿದೆ. ಒಡಿಶಾ ರಾಜ್ಯದಿಂದ ಕಾರಿನಲ್ಲಿ ಗಾಂಜಾ ತಂದು ನಗರದ ಪೆಡ್ಲರ್‌ಗಳಿಗೆ ಆರೋಪಿಗಳು ಹಂಚಿಕೆ ಮಾಡುತ್ತಿದ್ದರು. ಈ ತಂಡದ ನಾಯಕನ ಸೂಚನೆ ಮೇರೆಗೆ ಪೆಡ್ಲರ್‌ಗಳನ್ನು ಆರೋಪಿಗಳು ಭೇಟಿಗೆ ಬಂದಿದ್ದರು. ಆಗ ಖಚಿತ ಮಾಹಿತಿ ಪಡೆದು ಬನಶಂಕರಿ ಸಮೀಪ ಒಡಿಶಾ ಗ್ಯಾಂಗ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿರೆಂಜಲ್ಲಿ ಹ್ಯಾಶೀಶ್ ಆಯಿಲ್!

ಸಿರೆಂಜ್‌ನಲ್ಲಿ ಹ್ಯಾಶೀಶ್ ಆಯಿಲ್ ತುಂಬಿಸಿ ಸಾಗಿಸುತ್ತಿದ್ದ ಚಾಲಾಕಿ ಪೆಡ್ಲರ್‌ಗಳು ಸಹ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಮಡಿಕೇರಿಯ ಎಸ್.ಎಸ್‌.ಅಕ್ಷಯ್‌, ಬೆಂಗಳೂರಿನ ರೋಹಿತ್ ಆದಿತ್ಯ, ಸಾಯಿ ಚೈತನ್ಯ, ಕೇರಳದ ಎಂ.ವಿಶಾಲ್‌ ವೀರ್, ರೋಹಿನ್‌ ಜಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ ಹ್ಯಾಶೀಶ್ ಆಯಿಲ್ ಹಾಗೂ ಸಿರೆಂಜ್‌ಗಳನ್ನು ಜಪ್ತಿ ಮಾಡಲಾಗಿದೆ. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು. ಸಿರೆಂಜ್‌ಗಳಲ್ಲಿ ಹ್ಯಾಶೀಶ್ ಆಯಿಲ್ ತುಂಬಿಸಿಟ್ಟುಕೊಳ್ಳುತ್ತಿದ್ದರು. ಬಳಿಕ ಗ್ರಾಹಕರಿಗೆ ಅದನ್ನು ಸಣ್ಣ ಸಣ್ಣ ಡಬ್ಬಿಗಳಿಗೆ ತುಂಬಿಸಿ ಮಾರುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

click me!