10 ವರ್ಷದ ಬಾಲಕನನ್ನು ಹೂತು ಹಾಕಲು ಯತ್ನಿಸಿದ್ದ ಆರೋಪ| ಗಾಯಗೊಂಡಿದ್ದ ಬಾಲಕ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸಾವು| ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಉಪ್ಪುಣಸಿಯಲ್ಲಿ ನಡೆದ ಘಟನೆ|
ಹಾನಗಲ್ಲ(ಮಾ.24): ಕಳ್ಳತನ ಮಾಡುತ್ತಾನೆ ಎಂದು ಆರೋಪಿಸಿ 10 ವರ್ಷದ ಬಾಲಕನೊಬ್ಬನನ್ನು ಮನೆಯಲ್ಲಿ ಬಂಧಿಸಿಟ್ಟು ಬಳಿಕ ಮಣ್ಣಲ್ಲಿ ಹೂತು ಹಾಕಲು ಯತ್ನಿಸಿದ ಪ್ರಕರಣವೊಂದು ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ನಡೆದಿದ್ದು, ಗಾಯಗೊಂಡಿದ್ದ ಬಾಲಕ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ತಾಲೂಕಿನ ಆಡೂರು ಸಮೀಪದ ಉಪ್ಪುಣಸಿಯ ಹರೀಶಯ್ಯ ನಾಗಯ್ಯ ಹಿರೇಮಠ (10) ಮೃತಪಟ್ಟ ಬಾಲಕ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಮೃತ ಬಾಲಕನ ತಂದೆ ನಾಗಯ್ಯ ಹಿರೇಮಠ ದೂರು ನೀಡಿದ್ದಾರೆ. ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಪ್ರವೀಣ ಕರಿಶೆಟ್ಟರ, ಬಸವಣ್ಣೆವ್ವ ಕರಿಶೆಟ್ಟರ ಹಾಗೂ ಉಪ್ಪುಣಸಿ ಗ್ರಾಮದ ಶಿವರುದ್ರಪ್ಪ ಹಾವೇರಿ, ಕುಮಾರ ವೀರಭದ್ರಪ್ಪ ಹಾವೇರಿ ಎಂಬವರ ಮೇಲೆ ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗರ್ಲ್‌ಫ್ರೆಂಡ್ ಜತೆ ಮಾತನಾಡಿದ್ದಕ್ಕೆ ಹೀಗ್ ಮಾಡೋದಾ..!
ಮಾ. 16ರಂದು ತನ್ನ ಮಗ ಸ್ನೇಹಿತರೊಂದಿಗೆ ಆಟವಾಡುತ್ತ ಉಪ್ಪುಣಸಿ ಗ್ರಾಮದ ಶಿವರುದ್ರಪ್ಪ ಹಾವೇರಿ ಎಂಬಾತನ ಅಂಗಡಿಗೆ ತಿಂಡಿ ತಿನ್ನುವ ಸಲುವಾಗಿ ಹೋಗಿದ್ದ. ಆಗ ಹರೀಶಯ್ಯ ಕಳ್ಳತನ ಮಾಡುತ್ತಾನೆ ಎಂದು ಆರೋಪಿಸಿ ತಮ್ಮ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಮನೆಗೆ ಹೋಗಿ ತನ್ನ ಅಲ್ಪವಯಿ ಮಗನನ್ನು ಬಿಟ್ಟುಬಿಡುವಂತೆ ಕೇಳಿಕೊಂಡರೂ ಕೇಳಲಿಲ್ಲ. ತನ್ನ ಪತ್ನಿಗೆ ವಿಷಯ ಗೊತ್ತಾಗಿ ಶಿವರುದ್ರಪ್ಪ ಹಾವೇರಿ ಅವರ ಮನೆಗೆ ಹೋಗಿ ಮಗನನ್ನು ಬಿಡುವಂತೆ ಅವಳೂ ಮನವಿ ಮಾಡಿಕೊಂಡರೂ ಕೇಳಲಿಲ್ಲ. ಸಂಜೆವರೆಗೂ ಇಲ್ಲಿಯೇ ಇಟ್ಟುಕೊಳ್ಳುತ್ತೇವೆ, ಆಗ ನಿನ್ನ ಮಗನಿಗೆ ಬುದ್ದಿ ಬರುತ್ತದೆ ಎಂದು ಹೇಳಿ ಕಳಿಸಿದ್ದಾರೆ. ಮತ್ತೆ ಸಂಜೆ ತನ್ನ ಪತ್ನಿ ಆರೋಪಿಯ ಮನೆಗೆ ಹೋದ ವೇಳೆ ಮಗನನ್ನು ಹಿತ್ತಲಿನ ತಳಪಾಯದಲ್ಲಿ ಬಂಧಿಸಿಟ್ಟಿದ್ದಲ್ಲದೇ ಡುಬ್ಬದ (ಬೆನ್ನಿನ) ಮೇಲೆ ಭಾರವಾದ ಕಲ್ಲನ್ನು ಇಟ್ಟಿದ್ದರು. ನಂತರ ಅಲ್ಲಿಯೇ ಹೂತು ಹಾಕಲು ಯತ್ನಿಸಿದ್ದಾರೆ. ಮಗನನ್ನು ಕರೆತರಲು ಹೋಗಿದ್ದ ತನ್ನ ಪತ್ನಿಯ ಮೇಲೆ ಕೂಡ ನಾಲ್ವರು ಆರೋಪಿಗಳು ಸೇರಿ ಹಲ್ಲೆ ನಡೆಸಿದ್ದಾರೆ. ಬಳಿಕ ಮಗನನ್ನು ಹೇಗೋ ಬಿಡಿಸಿಕೊಂಡು ಬಂದು ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ, ತನಗೆ ಆರೋಪಿತರೆಲ್ಲ ಸೇರಿ ಕಾಲಿನಿಂದ ಒದ್ದು, ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಟೋ ಚಾಲಕರೂ ಆಗಿರುವ ಬಾಲಕನ ತಂದೆ ನಾಗಯ್ಯ ಹಿರೇಮಠ ಆರೋಪಿಸಿದ್ದಾರೆ. ಘಟನೆಯಿಂದ ಗಾಯಗೊಂಡಿದ್ದ ಬಾಲಕನನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಉಪ್ಪುಣಸಿ ಗ್ರಾಮದ ನಾಗಯ್ಯ ಹಿರೇಮಠ ಎಂಬವರು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಲಾಗಿದೆ. ಬಾಲಕ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಯಾವ ಕಾರಣದಿಂದ ಮೃತಪಟ್ಟಿದ್ದಾನೆ ಎಂಬುದು ತಿಳಿದುಬಂದಿಲ್ಲ. ಪ್ರಕರಣದ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಆಡೂರು ಪಿಎಸ್‌ಐ ನೀಲಪ್ಪ ತಿಳಿಸಿದ್ದಾರೆ.