
ನವದೆಹಲಿ (ಅ.2): ವೈಯಕ್ತಿಕ ಜೀವನದ ಭಾರೀ ಹಿನ್ನಡೆ ಎನ್ನುವಂತೆ ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ಟೀಮ್ ಇಂಡಿಯಾ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಬಾಳಿನಲ್ಲಿ ಅಂದುಕೊಂಡಂತೆ ಆಗುತ್ತಿಲ್ಲ. ಟಿ20 ಹಾಗೂ ಏಕದಿನ ತಂಡದಿಂದ ಹೊರಗುಳಿದಿರುವ ಯಜುವೇಂದ್ರ ಚಾಹಲ್ ಶುಕ್ರವಾರ ರೆಡ್‌ಬಾಲ್ ಕ್ರಿಕೆಟ್‌ಗೆ (ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ) ದಿಢೀರ್ ಆಗಿ ಅಧಿಕೃತ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಪರ ಇದುವರೆಗೆ ಒಂದೂ ಟೆಸ್ಟ್ ಪಂದ್ಯವನ್ನಾಡದ ಚಾಹಲ್, ಟೆಸ್ಟ್ ಕ್ರಿಕೆಟ್ ಆಡುವ ತಮ್ಮ ಸುದೀರ್ಘ ದಿನಗಳ ಕನಸು ಇನ್ಮುಂದೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡು ಈ ನಿರ್ಧಾರ ತಳೆದಿದ್ದಾರೆ. ಅದರೊಂದಿಗೆ ಕ್ರಿಕೆಟ್ ಜೀವನದಲ್ಲಿ ತಾವು ಕಂಡ ಪ್ರಮುಖ ಕನಸೊಂದು ನನಸಾಗದೇ ತಮ್ಮ ವೃತ್ತಿಜೀವನ ಅಂತ್ಯ ಮಾಡಿದ್ದಾರೆ.
ಅದೇ ಸಮಯದಲ್ಲಿ, ಮುಂಬರುವ ದಿನಗಳಲ್ಲಿ ಭಾರತದ ವೈಟ್-ಬಾಲ್ (ಟಿ20 ಹಾಗೂ ಏಕದಿನ) ತಂಡಕ್ಕೆ ಬಲವಾದ ಕಂಬ್ಯಾಕ್ ಮಾಡುವುದಾಗಿ ಪ್ರಕಟಿಸಿದ್ದಾರೆ.
ತಮ್ಮ ನಿವೃತ್ತಿಯ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಹಾಗೂ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಚಹಾಲ್, "ನನ್ನ ಪಾಲಿಗೆ ರೆಡ್ ಬಾಲ್ ಕ್ರಿಕೆಟ್ ಎನ್ನುವುದು ಕೇವಲ ಮತ್ತೊಂದು ಮಾದರಿಯ ಆಟವಾಗಿರಲಿಲ್ಲ. ತಾಳ್ಮೆ, ವ್ಯಕ್ತಿತ್ವ, ಸಹನಶೀಲತೆ ಹಾಗೂ ಮೈದಾನದಲ್ಲಿ ಗಂಟೆಗಳ ಕಾಲ ನಿಂತು ಪ್ರತಿಯೊಂದು ರನ್ ಮತ್ತು ವಿಕೆಟ್‌ಗಾಗಿ ಹೋರಾಡುವ ನಿಜವಾದ ಖುಷಿಯನ್ನು ನಾನು ಕಲಿತಿದ್ದು ಇದೇ ಮಾದರಿಯಲ್ಲಿ" ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ನಾನು ನನ್ನ ಕೊನೆಯ ಪ್ರಥಮ ದರ್ಜೆ (First-Class) ಪಂದ್ಯವನ್ನು ಕ್ರಿಕೆಟ್ ಕಾಶಿ ಲಾರ್ಡ್ಸ್ (Lord's) ಮೈದಾನದಲ್ಲಿ ಆಡಿದ್ದೆ. ಈ ಮಾತುಗಳನ್ನು ಹೇಳುವಾಗ ನನಗೆ ತೀವ್ರ ಭಾವುಕತೆಯಾಗುತ್ತಿದೆ. ಏಕೆಂದರೆ ಭಾರತದ ಟೆಸ್ಟ್ ಕ್ಯಾಪ್ ಧರಿಸುವುದು ಸದಾ ನನ್ನ ಕನಸಾಗಿತ್ತು ಮತ್ತು ವರ್ಷಗಳಿಂದ ಆ ಕನಸನ್ನು ನಾನು ಹೊತ್ತು ಸಾಗಿದ್ದೆ. ಅದು ಈಡೇರದಿರಬಹುದು, ಆದರೆ ಈ ಮಾದರಿಯ ಆಟದಲ್ಲಿ ನಾನು ಸಾಗಿಬಂದ ಹಾದಿ ಮತ್ತು ನನಗೆ ಸಿಕ್ಕ ಪ್ರತಿಯೊಂದು ಅವಕಾಶಕ್ಕೆ ನಾನು ಕೃತಜ್ಞನಾಗಿದ್ದೇನೆ ಹಾಗೂ ತೃಪ್ತನಾಗಿದ್ದೇನೆ" ಎಂದು ಹೇಳಿದ್ದಾರೆ.
ಯಜುವೇಂದ್ರ ಚಾಹಲ್ ಭಾರತ ತಂಡದ ಪರ ಕೊನೆಯ ಬಾರಿಗೆ 2023ರ ಆಗಸ್ಟ್ 13 ರಂದು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಪಂದ್ಯವನ್ನಾಡಿದ್ದರು. ಇನ್ನು ಅವರ ಕೊನೆಯ ಏಕದಿನ (ODI) ಪಂದ್ಯವು ಅದೇ ವರ್ಷದ ಜನವರಿ 24 ರಂದು ನ್ಯೂಜಿಲೆಂಡ್ ವಿರುದ್ಧ ನಡೆದಿತ್ತು. ಸುಮಾರು ಮೂರು ವರ್ಷಗಳಿಂದ ಪ್ರಮುಖ ತಂಡದಿಂದ ಹೊರಗುಳಿದಿದ್ದರೂ, ನಿಯಮಿತವಾಗಿ ಕಠಿಣ ಅಭ್ಯಾಸ ನಡೆಸುತ್ತಿರುವ ಚಹಾಲ್, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ (T20I & ODI) ಮತ್ತೆ ಭಾರತ ತಂಡವನ್ನು ಪ್ರತಿನಿಧಿಸುವ ದೃಢ ವಿಶ್ವಾಸದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.