
ಬೆಂಗಳೂರು(ಜೂ.22): ಭಾರತವು ಸುನಿಲ್ ಗವಾಸ್ಕರ್, ಕಪಿಲ್ ದೇವ್, ಗುಂಡಪ್ಪ ವಿಶ್ವನಾಥ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಹೀಗೆ ಒಬ್ಬರಿಗಿಂತ ಒಬ್ಬರು ವಿಭಿನ್ನ ದಿಗ್ಗಜ ಕ್ರಿಕೆಟಿಗರನ್ನು ವಿಶ್ವಕ್ರಿಕೆಟ್‌ಗೆ ಪರಿಚಯಿಸಿದೆ. ಇವರೆಲ್ಲ ತಮ್ಮ ಕಾಲದಲ್ಲಿ ರನ್ ಮಳೆಯನ್ನೇ ಹರಿಸಿದ್ದಾರೆ. ಶತಕಗಳ ಶಿಖರ ಏರಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆಲವೇ ಕೆಲವು ಅದೃಷ್ಟವಂತ ಬ್ಯಾಟರ್‌ಗಳು ಮಾತ್ರ ಇಡೀ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಮ್ಮೆಯೂ ಶೂನ್ಯಕ್ಕೆ ವಿಕೆಟ್ ಒಪ್ಪಿಸದೇ ಅಪರೂಪದ ಸಾಧನೆ ಮಾಡಿದ್ದಾರೆ. ಇಂತಹ ಸಾಧನೆ ಮಾಡಿದ ನಾಲ್ಕೇ ನಾಲ್ಕು ಆಟಗಾರರ ಪೈಕಿ ಓರ್ವ ಭಾರತೀಯ ಆಟಗಾರನೂ ಇದ್ದಾರೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಆಟಗಾರ ಸಾಕಷ್ಟು ವರ್ಷಗಳ ಕಾಲ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರೂ ಸಹಾ, ಒಮ್ಮೆಯೂ ಎದುರಾಳಿ ಬೌಲರ್‌ಗಳು ಇವರು ಖಾತೆ ತೆರೆಯುವ ಮುನ್ನವೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.
ಒಮ್ಮೆಯೂ ಶೂನ್ಯ ಸಂಪಾದನೆ ಮಾಡಿಲ್ಲ ಟೀಂ ಇಂಡಿಯಾದ ಹೀರೋ ಯಶ್ಫಾಲ್ ಶರ್ಮಾ..!
ಟೀಂ ಇಂಡಿಯಾ ಕ್ರಿಕೆಟಿಗರಾಗಿದ್ದ ಯಶ್ಪಾಲ್ ಶರ್ಮಾ, ಭಾರತ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಕಪಿಲ್ ದೇವ್ ನೇತೃತ್ವದಲ್ಲಿ 1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯಶ್ಪಾಲ್ ಶರ್ಮಾ ತಮ್ಮದೇ ಆದ ಪಾತ್ರವಹಿಸಿದ್ದರು. ಇದೇ ಯಶ್ಪಾಲ್ ಶರ್ಮಾ ತಮ್ಮ ಇಡೀ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಒಮ್ಮೆಯೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿಲ್ಲ. 80ರ ದಶಕದಲ್ಲಿ ಭಾರತ ಪರ 42 ಏಕದಿನ ಪಂದ್ಯಗಳನ್ನಾಡಿದ್ದ ಯಶ್ಪಾಲ್ ಶರ್ಮಾ 4 ಅರ್ಧಶತಕ ಸಹಿತ 883 ರನ್ ಬಾರಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅವರ ವೈಯುಕ್ತಿಕ ಗರಿಷ್ಟ ಸ್ಕೋರ್ 89 ರನ್ ಆಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಯಶ್ಪಾಲ್ ಶರ್ಮಾ ಒಮ್ಮೆಯೂ ಖಾತೆ ತೆರೆಯುವ ಮುನ್ನ ವಿಕೆಟ್ ಒಪ್ಪಿಸಿಲ್ಲ. ಯಶ್ಪಾಲ್ ಶರ್ಮಾ ಆಡುತ್ತಿದ್ದ ಸಂದರ್ಭದಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳಲ್ಲಿ ಮಾರಕ ವೇಗಿಗಳ ದಂಡೇ ಇತ್ತು. ಹೀಗಿದ್ದೂ ಯಶ್ಪಾಲ್ ಶರ್ಮಾ ಎಂದೆಂದಿಗೂ ಶೂನ್ಯಕ್ಕೆ ವಿಕೆಟ್ ಒಪ್ಪಿಸದೇ ದಿಟ್ಟ ಪ್ರದರ್ಶನ ತೋರಿದ್ದರು.
1983ರ ವಿಶ್ವಕಪ್ ಸೆಮೀಸ್ ಹೀರೋ ಆಗಿದ್ದ ಯಶ್ಪಾಲ್ ಶರ್ಮಾ:
ಇಂದಿಗೆ(ಜೂನ್ 22) ಸರಿಯಾಗಿ 39 ವರ್ಷಗಳ ಹಿಂದೆ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡವು 1983ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಕಣಕ್ಕಿಳಿದಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ಇಂಗ್ಲೆಂಡ್ ತಂಡವು ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 213 ರನ್‌ಗಳಿ ಸರ್ವಪತನ ಕಂಡಿತ್ತು.
ಇಂಗ್ಲೆಂಡ್ ನೀಡಿದ್ದ 214 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಸುನಿಲ್ ಗವಾಸ್ಕರ್(25) ಹಾಗೂ ಕೃಷ್ಣಮಾಚಾರಿ ಶ್ರೀಕಾಂತ್ (19) ಉತ್ತಮ ಆರಂಭವನ್ನು ಒದಗಿಸಿಕೊಟ್ಟಿದ್ದರು. ಆದರೆ 50 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಆದರೆ ಮೂರನೇ ವಿಕೆಟ್‌ಗೆ ಯಶ್ಪಾಲ್ ಶರ್ಮಾ ಹಾಗೂ ಮೋಹಿಂದರ್ ಅಮರ್‌ನಾಥ್ 92 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅಮರ್‌ನಾಥ್ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಮೋಹಿಂದರ್ ಅಮರ್‌ನಾಥ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಸಂದೀಪ್ ಪಾಟೀಲ್ ಹಾಗೂ ಯಶ್ಪಾಲ್ ಶರ್ಮಾ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಸಂದೀಪ್ ಪಾಟೀಲ್ ಕೇವಲ 32 ಎಸೆತಗಳಲ್ಲಿ ಅಜೇಯ 51 ರನ್ ಚಚ್ಚಿದ್ದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಯಶ್ಪಾಲ್ ಶರ್ಮಾ 115 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 61 ರನ್ ಬಾರಿಸುವ ಮೂಲಕ ತಂಡವನ್ನು ಫೈನಲ್‌ಗೇರಿಸುವಲ್ಲಿ ಯಶಸ್ವಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.