ಭಾರತ ಟೆಸ್ಟ್‌ ತಂಡದಲ್ಲಿ ಮೇಜರ್ ಸರ್ಜರಿ ಸೂಚನೆ ಕೊಟ್ಟ ಕ್ಯಾಪ್ಟನ್ ಕೊಹ್ಲಿ..!

By Kannadaprabha NewsFirst Published Jun 25, 2021, 9:18 AM IST
Highlights

* ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

* ಮುಂಬರುವ ದಿನಗಳಲ್ಲಿ ಟೆಸ್ಟ್‌ ತಂಡದಲ್ಲಿ ಮೇಜರ್ ಸರ್ಜರಿ ಮುನ್ಸೂಚನೆ ಕೊಟ್ಟ ನಾಯಕ ಕೊಹ್ಲಿ

* ಹಿರಿಯ ಟೀಂ ಇಂಡಿಯಾ ಆಟಗಾರರ ಮೇಲೆ ಹೆಚ್ಚಿದ ಒತ್ತಡ

ಸೌಥಾಂಪ್ಟನ್(ಜೂ.25)‌: ನ್ಯೂಜಿಲೆಂಡ್ ಎದುರು ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಸೋಲಿನ ಬಳಿಕ ಭಾರತ ಟೆಸ್ಟ್‌ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವ ಸುಳಿವನ್ನು ನಾಯಕ ವಿರಾಟ್‌ ಕೊಹ್ಲಿ ನೀಡಿದ್ದಾರೆ.

ಪಂದ್ಯೋತ್ತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಯಾವುದೇ ಆಟಗಾರನ ಹೆಸರು ಹೇಳಲಿಲ್ಲವಾದರೂ, ‘ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ಮನಸ್ಥಿತಿಯುಳ್ಳ ಸೂಕ್ತ ವ್ಯಕ್ತಿಗಳ ಅವಶ್ಯಕತೆ ಇದೆ. ಅಂಜದೆ, ಧನಾತ್ಮಕವಾಗಿ ಆಡುವಂಥವರು ಬೇಕಿದ್ದಾರೆ. ಇದಕ್ಕಾಗಿ ನಾವು ನಿರಂತರವಾಗಿ ಪರಾಮರ್ಶೆ, ಸಮಾಲೋಚನೆಗಳನ್ನು ನಡೆಸುತ್ತಿದ್ದೇವೆ. ನಮ್ಮ ತಂಡವನ್ನು ಬಲಿಷ್ಠಗೊಳಿಸಲು ಏನೇನು ಆಗಬೇಕಿದೆ ಎಂಬುದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಇದಕ್ಕೆ ವರ್ಷಗಟ್ಟಲೆ ಕಾಯುವುದಿಲ್ಲ’ ಎಂದು ಖಡಕ್ಕಾಗಿ ಹೇಳಿದರು.

‘ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಗತಿ ಬದಲಾಯಿಸುವುದು, ಸಾಮರ್ಥ್ಯ ಪ್ರದರ್ಶಿಸುವುದು ಆಟಗಾರನಿಗೆ ಬಹುಮುಖ್ಯವಾದುದು. ವರ್ಷಗಳ ಕಾಲ ಅಗ್ರ ತಂಡವಾಗಿದ್ದು, ಇದ್ದಕ್ಕಿದ್ದಂತೆ ಗುಣಮಟ್ಟದಲ್ಲಿ ಕುಸಿತ ಕಾಣುವುದು ಒಳ್ಳೆಯ ಲಕ್ಷಣವಲ್ಲ’ ಎಂದು ಟೀಂ ಇಂಡಿಯಾ ನಾಯಕ  ಕೊಹ್ಲಿ ಬೇಗುದಿ ಹೊರಹಾಕಿದ್ದಾರೆ.

ಟೆಸ್ಟ್‌ ವಿಶ್ವ ವಿಜೇತರ ನಿರ್ಧಾರಕ್ಕೆ ಒಂದೇ ಪಂದ್ಯ ಸಾಲದು: ವಿರಾಟ್ ಕೊಹ್ಲಿ

ನ್ಯೂಜಿಲೆಂಡ್‌ ವಿರುದ್ಧ ಸೋತ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಹಿರಿಯ ಆಟಗಾರ ಚೇತೇಶ್ವರ ಪೂಜಾರ 54 ಎಸೆತ ಎದುರಿಸಿ ಕೇವಲ 8 ರನ್‌ ಗಳಿಸಿದ್ದರು. ಮೊದಲ ರನ್‌ ಗಳಿಸಲು 35 ಎಸೆತ ತೆಗೆದುಕೊಂಡಿದ್ದರು. ಎರಡನೇ ಇನಿಂಗ್ಸ್‌ನಲ್ಲಿ 80 ಎಸೆತ ಆಡಿ ಕೇವಲ 15 ರನ್‌ ಗಳಿಸಿದ್ದರು. ಅನುಭವಿ ರಹಾನೆ, ರೋಹಿತ್‌ ಶರ್ಮಾ ಕೂಡ ದೊಡ್ಡ ಇನಿಂಗ್ಸ್‌ ಕಟ್ಟಿರಲಿಲ್ಲ. ಆಗಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ 5 ಪಂದ್ಯದ ಟೆಸ್ಟ್‌ ಸರಣಿ ಆಡಲಿದ್ದು, ಅದರಲ್ಲಿ ಪ್ರದರ್ಶನ ನೀಡಿದರಷ್ಟೇ ಕೆಲ ಹಿರಿಯ ಆಟಗಾರರಿಗೆ ತಂಡದಲ್ಲಿ ಸ್ಥಾನ ಉಳಿಯಬಹುದು ಎನ್ನಲಾಗುತ್ತಿದೆ.
 

click me!