ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಪುಣೆ ಟೆಸ್ಟ್ ಸೋಲುತ್ತಿದ್ದಂತೆ ಭಾರತದ ಫೈನಲ್ ಹಾದಿ ಮತ್ತಷ್ಟು ಕಠಿಣ!

By Naveen Kodase  |  First Published Oct 27, 2024, 11:56 AM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪುಣೆ ಟೆಸ್ಟ್ ಪಂದ್ಯ ಸೋಲುತ್ತಿದ್ದಂತೆಯೇ ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಲೆಕ್ಕಾಚಾರದಲ್ಲಿ ಮಹತ್ವದ ಬದಲಾವಣೆಗಳಾಗಿವೆ


ದುಬೈ: ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲುವುದರೊಂದಿಗೆ 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್ ಹಾದಿ ಕಠಿಣಗೊಂಡಿದೆ. ಆದರೂ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಸರಣಿಗೂ ಮುನ್ನ ಶೇ.74.24 ಗೆಲುವಿನ ಪ್ರತಿಶತ ಹೊಂದಿದ್ದ ಭಾರತ 2 ಪಂದ್ಯಗಳ ಸೋಲಿನ ಬಳಿಕ ಸದ್ಯ ಶೇ.62.82ಕ್ಕೆ ಕುಸಿದಿದೆ. ತಂಡ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ (ಶೇ.62.50)ಕ್ಕಿಂತ ಕೇವಲ 0.32 ಅಂತರದಲ್ಲಿ ಮುಂದಿದೆ.

ಭಾರತ ಈವರೆಗೂ 13 ಪಂದ್ಯಗಳನ್ನಾಡಿದ್ದು, 8 ಗೆಲುವು, 4 ಸೋಲು ಹಾಗೂ 1 ಡ್ರಾ ಸಾಧಿಸಿದೆ.ತಂಡಕ್ಕೆ ಇನ್ನು ಒಟ್ಟು ಟೆಸ್ಟ್ (ನ್ಯೂಜಿಲೆಂಡ್ ವಿರುದ್ಧ 1, ಆಸ್ಟ್ರೇಲಿಯಾ ವಿರುದ್ಧ) ಪಂದ್ಯ ಗಳು ಬಾಕಿಯಿದ್ದು, ಫೈನಲ್‌ಗೇರಬೇಕಿದ್ದರೆ ಕನಿಷ್ಠ 4ರಲ್ಲಿ ಗೆಲುವು ಸಾಧಿಸಬೇಕಿದೆ. ಶ್ರೀಲಂಕಾ (ಶೇ.55.56) 3ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ (ಶೇ.50.00) 4ನೇ ಸ್ಥಾನ ಕ್ಕೇರಿದೆ. ಉಳಿದಂತೆ ದಕ್ಷಿಣ ಆಫ್ರಿಕಾ (ಶೇ.47.62), ಇಂಗ್ಲೆಂಡ್ (ಶೇ.40.79), ಪಾಕಿಸ್ತಾನ (ಶೇ.33.33), ಬಾಂಗ್ಲಾದೇಶ (3.30.56), ಹಾಗೂ ವೆಸ್ಟ್‌ ಇಂಡೀಸ್ (ಶೇ.18.5) ನಂತರದ ಸ್ಥಾನಗಳಲ್ಲಿವೆ.

Latest Videos

undefined

ಪೋಸ್ಟ್ ಮಾರ್ಟಂ ಬೇಕಾಗಿಲ್ಲ, ಆಟಗಾರರ ಸಾಮರ್ಥ್ಯ ಗೊತ್ತಿದೆ: ಸರಣಿ ಸೋತ ರೋಹಿತ್ ಶರ್ಮಾ

ಭಾರತ ಈ ಹಿಂದಿನ ಎರಡೂ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್, ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ದ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಲೆಕ್ಕಾಚಾರ ಹೇಗಿದೆ?:

ಆಸ್ಟ್ರೇಲಿಯಾ ತಂಡವು ಭಾರತ ವಿರುದ್ದ 5 ಹಾಗೂ ಶ್ರೀಲಂಕಾ ವಿರುದ್ದ ಎರಡು ಹೀಗೆ ಒಟ್ಟು 7 ಪಂದ್ಯಗಳನ್ನು ಆಡಲಿದ್ದು, ಈ ಪೈಕಿ 4 ಪಂದ್ಯ ಜಯಿಸಿದರೇ, ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಇನ್ನು ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾ ವಿರುದ್ಧ ಒಂದು, ಶ್ರೀಲಂಕಾ & ಪಾಕಿಸ್ತಾನ ವಿರುದ್ದ ತಲಾ ಎರಡು ಸೇರಿದಂತೆ 5 ಪಂದ್ಯಗಳನ್ನು ಆಡಲಿದೆ. ಈ ಪೈಕಿ 4 ಪಂದ್ಯದಲ್ಲಿ ಜಯಿಸಿದರೆ ಫೈನಲ್‌ಗೇರುವ ಸಾಧ್ಯತೆ ಹೆಚ್ಚಿದೆ. ಇನ್ನೊಂದೆಡೆ ಭಾರತ ತಂಡವು ಕಿವೀಸ್ ಎದುರು ಒಂದು ಹಾಗೂ ಆಸೀಸ್ ಎದುರು 5 ಸೇರಿದಂತೆ ಒಟ್ಟು 6 ಪಂದ್ಯಗಳನ್ನು ಆಡಲಿದ್ದು, 4 ಪಂದ್ಯಗಳನ್ನು ಜಯಿಸಿದರೆ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಪುಣೆಯಲ್ಲೂ ಸೋತು 12 ವರ್ಷ ಬಳಿಕ ಟೆಸ್ಟ್ ಸರಣಿ ಕೈಚೆಲ್ಲಿದ ಟೀಂ ಇಂಡಿಯಾಗೆ ಮತ್ತೊಂದು ಶಾಕ್!

ಇನ್ನುಳಿದಂತೆ ನ್ಯೂಜಿಲೆಂಡ್ ಭಾರತ ಎದುರು ಒಂದು ಹಾಗೂ ಇಂಗ್ಲೆಂಡ್ ಎದುರು 3 ಪಂದ್ಯವನ್ನು ಜಯಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲಿದೆ. ಇನ್ನುಳಿದಂತೆ ಶ್ರೀಲಂಕಾ ತಂಡವು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಎದುರು ತಲಾ ಎರಡು ಸೇರಿದಂತೆ ಒಟ್ಟು 4 ಪಂದ್ಯಗಳನ್ನು ಆಡಲಿದ್ದು, ಮೂರು ಪಂದ್ಯ ಜಯಿಸಿದರೆ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಇನ್ನು ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬಿದ್ದಿವೆ.

 

click me!