
ಬೆಂಗಳೂರು: 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಹಣಾಹಣಿ ನಡೆಯಲಿದೆ. ಈ ಪ್ರಶಸ್ತಿಯ ಹೋರಾಟಕ್ಕಾಗಿ ಕಾಂಗರೂಗಳು ಹಾಗೂ ಹರಿಣಗಳು ತಮ್ಮ ತಂಡಗಳನ್ನು ಘೋಷಿಸಿವೆ. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಎರಡನೇ ಬಾರಿಗೆ WTC ಫೈನಲ್‌ನಲ್ಲಿ ಆಡಲಿದೆ. ಕಳೆದ ಬಾರಿ ಕಮಿನ್ಸ್ ನಾಯಕತ್ವದಲ್ಲಿಯೇ ಆಸ್ಟ್ರೇಲಿಯಾ ಭಾರತವನ್ನು ಫೈನಲ್‌ನಲ್ಲಿ ಸೋಲಿಸಿ ಟ್ರೋಫಿ ಎತ್ತಿತ್ತು. ಇನ್ನೊಂದೆಡೆ ಹರಿಣಗಳ ತಂಡವನ್ನು ನಿರೀಕ್ಷೆಯಂತೆಯೇ ತೆಂಬಾ ಬವುಮಾ ಮುನ್ನಡೆಸಲಿದ್ದು, ಚೊಚ್ಚಲ ಬಾರಿಗೆ ಟೆಸ್ಟ್ ವಿಶ್ವಕಪ್ ಎತ್ತಿಹಿಡಿಯಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಎದುರು ನೋಡುತ್ತಿದೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಫೈನಲ್ ಮುಂದಿನ ತಿಂಗಳು IPL ಮುಗಿದ ನಂತರ ಜೂನ್‌ನಲ್ಲಿ ನಡೆಯಲಿದೆ. ಹೀಗಾಗಿ, ಈ ದೊಡ್ಡ ಪಂದ್ಯಕ್ಕಾಗಿ ಹಲವು ಆಸ್ಟ್ರೇಲಿಯಾದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕಾಂಗರೂಗಳು ಸಿದ್ಧಪಡಿಸಿದ ತಂಡದಲ್ಲಿ ಹಲವು ಆಟಗಾರರು IPL ನಲ್ಲಿ ಆಡುತ್ತಿದ್ದಾರೆ. ಲೀಗ್ ಮಧ್ಯದಲ್ಲಿ ಸ್ಥಗಿತಗೊಂಡಿದ್ದರಿಂದ ಹಲವು ಆಟಗಾರರು ವಾಪಸ್ ತವರಿಗೆ ತೆರಳಿದ್ದರು. ಈ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಯಕರಾಗಿದ್ದ ಪ್ಯಾಟ್ ಕಮಿನ್ಸ್ ಕೂಡ ಇದ್ದಾರೆ. ಆದಾಗ್ಯೂ, ಅವರ ತಂಡ ಪ್ಲೇಆಫ್‌ನಿಂದ ಹೊರಬಿದ್ದಿದೆ. ಹೀಗಾಗಿ ಅವರು ಐಪಿಎಲ್‌ಗೆ ಬರುವ ಸಾಧ್ಯತೆ ಕಡಿಮೆ.
ಫೈನಲ್‌ಗೆ ಆಸ್ಟ್ರೇಲಿಯಾ ಅದ್ಭುತ ತಂಡ ರಚಿಸಿದೆ
ದಕ್ಷಿಣ ಆಫ್ರಿಕಾ ವಿರುದ್ಧದ WTC ಫೈನಲ್‌ಗೆ ಆಸ್ಟ್ರೇಲಿಯಾ ತಂಡವನ್ನು ಗಮನಿಸಿದರೆ, ಪ್ಯಾಟ್ ಕಮಿನ್ಸ್ ನಾಯಕತ್ವ ವಹಿಸಲಿದ್ದಾರೆ. ಅವರಲ್ಲದೆ, ಟ್ರಾವಿಸ್ ಹೆಡ್, ಸ್ಯಾಮ್ ಕಾನ್ಸ್ಟನ್ಸ್ ಮತ್ತು ಉಸ್ಮಾನ್ ಖವಾಜ ಇವರಲ್ಲಿ ಇಬ್ಬರು ಆರಂಭಿಕರಾಗಿ ಕಣಕ್ಕಿಳಿಯಬಹುದು. ನಂತರ ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲಬುಶೇನ್, ಮ್ಯಾಥ್ಯೂ ಕುಹ್ನೆಮನ್, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್ ಕಾಣಿಸಿಕೊಳ್ಳಲಿದ್ದಾರೆ. ನಂತರ ಕ್ಯಾಮರೂನ್ ಗ್ರೀನ್, ಬ್ಯೂ ವೆಬ್‌ಸ್ಟರ್ ಕಾಣಿಸಿಕೊಳ್ಳಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಸ್ಕಾಟ್ ಬೋಲ್ಯಾಂಡ್ ರೂಪದಲ್ಲಿ ಸರಿಯಾದ ವೇಗದ ಬೌಲರ್‌ಗಳಿದ್ದಾರೆ. ಕಮಿನ್ಸ್ ಮತ್ತು ಗ್ರೀನ್ ಕೂಡ ವೇಗದ ಬೌಲಿಂಗ್ ಮಾಡಲಿದ್ದಾರೆ.
ಇನ್ನೊಂದೆಡೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಮೊದಲ ಬಾರಿಗೆ ಫೈನಲ್‌ಗೇರಿರುವ ಹರಿಣಗಳ ಪಡೆ ಕೂಡಾ ಸಾಕಷ್ಟು ಬಲಿಷ್ಠವಾಗಿದೆ. ತೆಂಬಾ ಬವುಮಾ, ಏಯ್ಡನ್ ಮಾರ್ಕ್‌ರಮ್. ರಿಯನ್ ರಿಕೆಲ್ಟನ್, ಟ್ರಿಸ್ಟಿನ್ ಸ್ಟಬ್ಸ್, ಕೇಶವ್ ಮಹರಾಜ್, ಮಾರ್ಕೊ ಯಾನ್ಸೆನ್, ಕಗಿಸೋ ರಬಾಡ. ಲುಂಗಿ ಎಂಗಿಡಿ ಅವರಂತಹ ಯುವ ಹಾಗೂ ಅನುಭವಿ ಆಟಗಾರನ್ನೊಳಗೊಂಡ ತಂಡ ಹೊಂದಿದೆ.
WTC ಫೈನಲ್‌ಗೆ ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಸ್ಯಾಮ್ ಕಾನ್ಸ್ಟನ್ಸ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್, ಬ್ರಾಂಡನ್ ಡೋಗೆಟ್ (ಪ್ರಯಾಣ ಮೀಸಲು).
WTC ಫೈನಲ್‌ಗೆ ದಕ್ಷಿಣ ಆಫ್ರಿಕಾ ತಂಡ
ಟೋನಿ ಜೋರ್ಜಿ, ಏಯ್ಡನ್ ಮಾರ್ಕ್‌ರಮ್, ರಿಯನ್ ರಿಕೆಲ್ಟನ್, ಟ್ರಿಸ್ಟಿನ್ ಸ್ಟಬ್ಸ್, ತೆಂಬಾ ಬವುಮಾ(ನಾಯಕ), ಡೇವಿಡ್ ಬೆಡ್ರಿಗ್ಯಾಂ, ಕೈಲ್ ವೆರಿಯೆನ್ನೆ, ವಿಯಾನ್ ಮುಲ್ಡರ್, ಶೆನುರನ್ ಮುತ್ತುಸ್ವಾಮಿ, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸನ್, ಕಾರ್ಬಿನ್ ಬೋಷ್, ಕಗಿಸೋ ರಬಾಡ, ಲುಂಗಿ ಎಂಗಿಡಿ, ಡೇನ್ ಪ್ಯಾಟರ್‌ಸನ್.
WTC 2025 ಫೈನಲ್ ಪಂದ್ಯ ಯಾವಾಗ ನಡೆಯಲಿದೆ?
WTC ಫೈನಲ್ 2025 ಲಾರ್ಡ್ಸ್‌ನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ಜೂನ್ 11 ರಿಂದ 15 ರ ನಡುವೆ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಎರಡೂ ತಂಡಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್ ತಲುಪಿವೆ. ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತವನ್ನು ಸೋಲಿಸಿದರೆ, ದಕ್ಷಿಣ ಆಫ್ರಿಕಾ ದೊಡ್ಡ ತಂಡಗಳನ್ನು ಮಣಿಸಿದೆ. ಹೀಗಾಗಿ, ರೋಚಕ ಫೈನಲ್‌ಗೆ ವೇದಿಕೆ ಸಜ್ಜಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.