
ಮಹಿಳಾ ಪ್ರೀಮಿಯರ್ ಲೀಗ್ (WPL) ಐದನೇ ಆವೃತ್ತಿಯ ಆಟಗಾರ್ತಿಯರ ಹರಾಜು ಇಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ವಿಶ್ವದ 146 ಆಟಗಾರ್ತಿಯರು ಭಾಗಿಯಾಗುತ್ತಿದ್ದಾರೆ. ಆದರೆ ಈ ಪೈಕಿ ಗರಿಷ್ಠ 27 ಆಟಗಾರ್ತಿಯರು ಮಾತ್ರ ತಂಡಗಳಿಗೆ ಆಯ್ಕೆಯಾಗಲಿದ್ದಾರೆ. 2023ರಲ್ಲಿ ಆರಂಭವಾದ ಈ ಲೀಗ್ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಗೆ ಉತ್ತಮ ಆದಾಯದ ಮೂಲವಾಗಿದೆ.
ಹೌದು, ಐಪಿಎಲ್‌ಗೆ ಹೋಲಿಸಿದರೆ ಮಹಿಳಾ ಪ್ರೀಮಿಯರ್ ಲೀಗ್(WPL)ನ ಆದಾಯದ ವಿಷಯಕ್ಕೆ ಬಂದರೆ ಸ್ವಲ್ಪ ಕಡಿಮೆ ಎನಿಸಿದರೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಈ ಲೀಗ್ ನಿಧಾನವಾಗಿ ಪ್ರಾಬಲ್ಯ ಸಾಧಿಸುತ್ತಿದೆ. ಇದರಿಂದಾಗಿ ಆಟಗಾರ್ತಿಯರ ಸಂಬಳವೂ ಹೆಚ್ಚಾಗುತ್ತಿದೆ. 2026ರ WPLನಲ್ಲಿ ಮೂವರು ಆಟಗಾರ್ತಿಯರು ಗರಿಷ್ಠ 3.50 ಕೋಟಿ ರೂಪಾಯಿ ಸಂಬಳ ಪಡೆದಿದ್ದದರು ಎಂದರೆ ನಂಬುತ್ತೀರಾ? ನಿಜವಾಗಿಯೂ ನಂಬಲೇಬೇಕು. ಈವರೆಗೆ WPL ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಪಡೆದ ಆಟಗಾರ್ತಿಯರು ಯಾರು?
WPL ಹರಾಜಿನ ವಿಷಯಕ್ಕೆ ಬಂದರೆ ಇಲ್ಲಿಯವರೆಗಿನ ಅತಿ ಹೆಚ್ಚು ಬಿಡ್ ಆಗಿದ್ದು ಸ್ಮೃತಿ ಮಂಧಾನಾ! ಅಂದರೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಸ್ಮೃತಿ ಮಂಧಾನ ಅವರನ್ನು ಆರ್‌ಸಿಬಿ ಖರೀದಿಸಿದೆ. 2023ರಲ್ಲಿ ನಡೆದ ಮೊದಲ ಆವೃತ್ತಿಯ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅವರನ್ನು 3.40 ಕೋಟಿ ರೂಪಾಯಿಗೆ ಖರೀದಿಸಿತ್ತು. ಇಂದಿಗೂ WPL ಹರಾಜಿನಲ್ಲಿ ಆಟಗಾರ್ತಿಯೊಬ್ಬರಿಗೆ ಸಿಕ್ಕಿರುವ ಅತ್ಯಧಿಕ ಮೊತ್ತ ಇದೇ ಆಗಿದೆ. ಕಳೆದ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ತಂಡವು ಸ್ಮೃತಿ ಮಂಧಾನ ಅವರನ್ನು ಉಳಿಸಿಕೊಳ್ಳಲು 3.50 ಕೋಟಿ ರೂಪಾಯಿ ನೀಡಿತ್ತು.
ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಪಡೆದ ಆಟಗಾರ್ತಿಯರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆಶ್ಲೇ ಗಾರ್ಡ್ನರ್ ಎರಡನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಗುಜರಾತ್ ಜೈಂಟ್ಸ್ ತಂಡವು ಅವರನ್ನು 3.20 ಕೋಟಿ ರೂಪಾಯಿಗೆ ಖರೀದಿಸಿತ್ತು. ಅದೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇಂಗ್ಲೆಂಡ್‌ನ ನ್ಯಾಟ್ ಸಿವರ್ ಬ್ರಂಟ್ ಅವರನ್ನು 3.20 ಕೋಟಿ ರೂಪಾಯಿಗೆ ಖರೀದಿಸಿತ್ತು. 2026ರ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ತಂಡವು ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು 3.20 ಕೋಟಿ ರೂಪಾಯಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಹೀಗಾಗಿ, ಆಶ್ಲೇ ಗಾರ್ಡ್ನರ್, ನ್ಯಾಟ್ ಸಿವರ್-ಬ್ರಂಟ್ ಮತ್ತು ದೀಪ್ತಿ ಶರ್ಮಾ ಈ ಮೂವರು ಆಟಗಾರ್ತಿಯರು ಅತಿ ಹೆಚ್ಚು ಬಿಡ್ ಪಡೆದವರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಈ ಪಟ್ಟಿಯಲ್ಲಿ ಮುಂದಿನ ಸ್ಥಾನದಲ್ಲಿದ್ದಾರೆ. 2026ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅವರನ್ನು 3 ಕೋಟಿ ರೂಪಾಯಿಗೆ ಖರೀದಿಸಿತ್ತು.
2026ರ WPLನಲ್ಲಿ ಅತಿ ಹೆಚ್ಚು ಸಂಬಳ ಪಡೆದ ಆಟಗಾರ ವಿಷಯಕ್ಕೆ ಬರೋದಾದ್ರೆ ಸ್ಮೃತಿ ಮಂಧಾನ ಅವರೇ ಮೊದಲಿಗರಾಗಿದ್ದಾರೆ. ನಂತರದ ಸ್ಥಾನ ಆಶ್ಲೇ ಗಾರ್ಡ್ನರ್ ಮತ್ತು ನ್ಯಾಟ್ ಸಿವರ್-ಬ್ರಂಟ್ ಅವರಿದ್ದಾರೆ. ಈ ಮೂವರಿಗೂ ತಲಾ 3.50 ಕೋಟಿ ರೂಪಾಯಿ ಸಂಬಳ ನೀಡಲಾಗಿದೆ. ಆರ್‌ಸಿಬಿ, ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕ್ರಮವಾಗಿ ಸ್ಮೃತಿ ಮಂಧಾನ, ಆಶ್ಲೇ ಗಾರ್ಡ್ನರ್ ಮತ್ತು ನ್ಯಾಟ್ ಸಿವರ್-ಬ್ರಂಟ್ ಅವರನ್ನು ತಲಾ 3.50 ಕೋಟಿ ರೂಪಾಯಿ ನೀಡಿ ಉಳಿಸಿಕೊಂಡಿದ್ದವು. ಆದರೆ, ಹರಾಜಿನಲ್ಲಿ ಆಟಗಾರ್ತಿಯೊಬ್ಬರಿಗೆ ಸಿಕ್ಕಿರುವ ಅತಿ ಹೆಚ್ಚಿನ ಬಿಡ್‌ನ ದಾಖಲೆಯು ಇಂದಿಗೂ ಸ್ಮೃತಿ ಮಂಧಾನ ಅವರ ಹೆಸರಿನಲ್ಲೇ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.