
ಬೆಂಗಳೂರು : ಇದೇ ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ ಮಹಿಳಾ ಏಕದಿನ ವಿಶ್ವಕಪ್‌ಗೂ ಮುನ್ನ ಅಂ.ರಾ. ಕ್ರಿಕೆಟ್ ಸಮಿತಿ(ಐಸಿಸಿ), ನಾಯಕಿಯರ ಜೊತೆ ಸಂವಾದ (ಕ್ಯಾಪ್ಟನ್ಸ್ ಡೇ) ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ ನಾಲ್ಕು ತಂಡಗಳ ನಾಯಕಿಯರು ಭಾಗಿಯಾಗಿದ್ದರು.
ಹರ್ಮನ್‌ಪ್ರೀತ್ ಕೌರ್ ಜತೆಗೆ ಆಸೀಸ್ ನಾಯಕಿ ಅಲಿಸ್ಸಾ ಹೀಲಿ, ಇಂಗ್ಲೆಂಡ್‌ನ ಹೀದರ್ ನೈಟ್, ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ‘ಒಬ್ಬ ಆಟಗಾರ್ತಿಯಾಗಿ ದೇಶ ಪ್ರತಿನಿಧಿಸುವುದು ಯಾವಾಗಲೂ ವಿಶೇಷ. ಅದರಲ್ಲೂ ವಿಶ್ವಕಪ್‌ನಲ್ಲಿ ತಂಡದ ಸಾರಥ್ಯ ವಹಿಸುತ್ತಿರುವುದು ಇನ್ನು ವಿಶೇಷ. ನಮ್ಮ ದೇಶದಲ್ಲೇ ನಡೆಯುತ್ತಿರುವುದರಿಂದ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಿದೆ. ಅವರು ಕ್ರೀಡಾಂಗಣದಲ್ಲಿ ನಮ್ಮನ್ನು ಹುರಿದುಂಬಿಸುವುದನ್ನು ಈ ಬಾರಿ ನೋಡಲಿದ್ದೇವೆ. ನಮ್ಮ ಜವಾಬ್ದಾರಿಯೂ ಜಾಸ್ತಿಯಿದೆ. ತವರಿನಲ್ಲಿ ವಿಶ್ವಕಪ್ ಗೆಲ್ಲಲು ಉತ್ಸುಕರಾಗಿದ್ದೇವೆ’ ಎಂದರು.
ಭಾರತದ ಜೊತೆ ಶ್ರೀಲಂಕಾ ಸಹ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದ್ದು, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡದ ನಾಯಕಿಯರು ಕೊಲಂಬೊದಲ್ಲಿ ನಡೆದ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎರಡೂ ಕಾರ್ಯಕ್ರಮಗಳು ಒಟ್ಟಿಗೆ ನಡೆದವು.
ಲಖನೌ: ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಸಾಯಿ ಸುದರ್ಶನ್‌ರ ಅಮೋಘ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ‘ಎ’ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’, ದಾಖಲೆಯ 412 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ 5 ವಿಕೆಟ್‌ಗಳ ಜಯದೊಂದಿಗೆ 2 ಪಂದ್ಯಗಳ ಸರಣಿಯನ್ನು 1-0ಯಲ್ಲಿ ಜಯಿಸಿದೆ. ಮೊದಲ ಅನಧಿಕೃತ ಟೆಸ್ಟ್ ಡ್ರಾದಲ್ಲಿ ಅಂತ್ಯವಾಗಿತ್ತು.
ಬೃಹತ್ ಗುರಿ ಬೆನ್ನತ್ತಿದ ಭಾರತ ‘ಎ’ ಪರ ರಾಹುಲ್ ಔಟಾಗದೆ 176, ಸಾಯಿ ಸುದರ್ಶನ್ 100, ನಾಯಕ ಧೃವ್ ಜುರೆಲ್ 56 ರನ್ ಸಿಡಿಸಿದರು. 5 ವಿಕೆಟ್ ನಷ್ಟಕ್ಕೆ 413 ರನ್ ಗಳಿಸಿದ ಭಾರತ ‘ಎ’, ದೇಶದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6ನೇ ಅತಿದೊಡ್ಡ ಮೊತ್ತವನ್ನು ಚೇಸ್ ಮಾಡಿದ ದಾಖಲೆಗೆ ಪಾತ್ರವಾಯಿತು. ಇನ್ನು ‘ಎ’ ಟೆಸ್ಟ್‌ಗಳ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ಎನ್ನುವ ದಾಖಲೆಯನ್ನೂ ಭಾರತ ತಂಡ ಬರೆಯಿತು.
ಸ್ಕೋರ್: ಆಸ್ಟ್ರೇಲಿಯಾ ‘ಎ’ 420 ಹಾಗೂ 185, ಭಾರತ ‘ಎ’ 194 ಹಾಗೂ 413/5
ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿ ಭಾರತ ಅಂಡರ್-19 ತಂಡವು ಯೂಥ್ ಒನ್‌ಡೇ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಶುಕ್ರವಾರ ನಡೆದ ಮೂರನೇ ಭಾರತ ಯುವ ಕ್ರಿಕೆಟ್ ತಂಡಕ್ಕೆ ಬರೋಬ್ಬರಿ 163 ರನ್‌ಗಳ ಬೃಹತ್ ಗೆಲುವು ಒಲಿಯಿತು.
ವೇದಾಂತ್(86), ರಾಹುಲ್(62), ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 280 ರನ್ ಕಲೆಹಾಕಿತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಅಂಡರ್-19 ತಂಡವು 28.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಇದಕ್ಕೂ ಮೊದಲು ಮೊದಲೆರಡು ಪಂದ್ಯಗಳಲ್ಲಿ ಭಾರತ ಕ್ರಮವಾಗಿ 7 ವಿಕೆಟ್ ಹಾಗೂ 51 ರನ್‌ಗಳಿಂದ ಗೆಲುವು ದಾಖಲಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.