Women's U19 T20 World Cup: ಶಫಾಲಿ ವರ್ಮಾ ನೇತೃತ್ವದ ಭಾರತ ತಂಡಕ್ಕೆ ಸ್ಕಾಟ್ಲೆಂಡ್ ಸವಾಲು

By Kannadaprabha NewsFirst Published Jan 18, 2023, 9:25 AM IST
Highlights

ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಸ್ಕಾಟ್ಲೆಂಡ್ ಎದುರಾಳಿ
ಈಗಾಗಲೇ ಸತತ ಎರಡು ಗೆಲುವು ದಾಖಲಿಸಿರುವ ಶಫಾಲಿ ವರ್ಮಾ ಪಡೆ
'ಡಿ' ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಭಾರತ ಕಿರಿಯರ ಮಹಿಳಾ ಕ್ರಿಕೆಟ್ ತಂಡ

ಬೆನೊನಿ(ಜ.18): ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸತತ 2ನೇ ಗೆಲುವಿನೊಂದಿಗೆ ಈಗಾಗಲೇ ಸೂಪರ್‌-6 ಹಂತಕ್ಕೆ ಲಗ್ಗೆ ಇಟ್ಟಿರುವ ಭಾರತ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಬುಧವಾರ ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿದೆ. ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್‌, 2ನೇ ಪಂದ್ಯದಲ್ಲಿ ಯುಎಇ ವಿರುದ್ಧ 122 ರನ್‌ ಜಯಗಳಿಸಿರುವ ಶಫಾಲಿ ವರ್ಮಾ ನೇತೃತ್ವದ ಭಾರತ ತಂಡ ಸದ್ಯ ‘ಡಿ’ ಗುಂಪಿನಲ್ಲಿ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಭಾರತ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಸ್ಕಾಟ್ಲೆಂಡ್‌ ಆಡಿರುವ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡಿದೆ. ಭಾರತ ತಂಡದ ಪರ ನಾಯಕಿ ಶಫಾಲಿ ವರ್ಮಾ ಹಾಗೂ ಶ್ವೇತಾ ಶೆರಾವತ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇದರ ಜತೆಗೆ ರಿಚಾ ಘೋಷ್‌ ಕೂಡಾ ಕಳೆದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಬೌಲಿಂಗ್‌ನಲ್ಲೂ ಸಂಘಟಿತ ಪ್ರದರ್ಶನ ತೋರುತ್ತಿರುವ ಭಾರತೀಯ ಪಡೆ, ಇದೀಗ ಮತ್ತೊಂದು ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ. 

ಪಂದ್ಯ: ಸಂಜೆ 5.15ರಿಂದ
ಪ್ರಸಾರ: ಫ್ಯಾನ್‌ಕೋಡ್‌

4 ಬಾಲಲ್ಲಿ 4 ವಿಕೆಟ್‌ ಕಿತ್ತ ರವಾಂಡ ಬೌಲರ್‌!

ಪಾಚೆಫ್‌ಸ್ಟ್ರೋಮ್‌: ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ‘ಡಬಲ್‌ ಹ್ಯಾಟ್ರಿಕ್‌’ ಪಡೆದು ರವಾಂಡದ ಹೆನಿರಿಟ್ಟೆಇಶ್ಮಿಂವೆ ದಾಖಲೆ ಬರೆದಿದ್ದಾರೆ. ಮಂಗಳವಾರ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ರವಾಂಡದ 120 ರನ್‌ ಗುರಿ ಬೆನ್ನತ್ತಿದ ಜಿಂಬಾಬ್ವೆ 18 ಓವರಲ್ಲಿ 80 ರನ್‌ ಗಳಿಸಿತ್ತು. 

Ranji Trophy: ರಾಜ್ಯದ ಎದುರು ಕುಸಿದ ಕೇರಳಕ್ಕೆ ಸಚಿನ್ ಬೇಬಿ ಆಸರೆ

ಈ ವೇಳೆ ದಾಳಿಗಿಳಿದ ಹೆನಿರಿಟ್ಟೆ ಸತತ 4 ಎಸೆತಗಳಲ್ಲಿ ನಾಲ್ವರನ್ನು ಔಟ್‌ ಮಾಡಿದರು. ಸಾಮಾನ್ಯವಾಗಿ ‘ಡಬಲ್‌ ಹ್ಯಾಟ್ರಿಕ್‌’ ಅಂದರೆ 6 ಬಾಲಲ್ಲಿ 6 ವಿಕೆಟ್‌ ಎನ್ನುವ ಕಲ್ಪನೆ ಇದೆಯಾದರೂ ಕ್ರಿಕೆಟಲ್ಲಿ ಸತತ 4 ಎಸೆತಗಳಲ್ಲಿ ವಿಕೆಟ್‌ ಪಡೆಯುವುದನ್ನು ‘ಡಬಲ್‌ ಹ್ಯಾಟ್ರಿಕ್‌’ ಎನ್ನುತ್ತಾರೆ. 1, 2, 3ನೇ ಎಸೆತಗಳಲ್ಲಿ ಪಡೆದ ವಿಕೆಟ್‌ಗಳು ಒಂದು ಹ್ಯಾಟ್ರಿಕ್‌ ಆದರೆ, 2, 3, 4ನೇ ಎಸೆತದಲ್ಲಿ ಪಡೆಯುವ ವಿಕೆಟ್‌ಗಳು ಮತ್ತೊಂದು ಹ್ಯಾಟ್ರಿಕ್‌ ಎಂದು ಪರಿಗಣಿಸಲ್ಪಡುತ್ತದೆ.

ಹಾಕಿ ವಿಶ್ವಕಪ್‌: ಬೆಲ್ಜಿಯಂ-ಜರ್ಮನಿ 2-2 ಗೋಲುಗಳ ಡ್ರಾ

ಭುವನೇಶ್ವರ(ಜ.18): ಹಾಲಿ ಚಾಂಪಿಯನ್‌ ಬೆಲ್ಜಿಯಂ ಹಾಗೂ 2 ಬಾರಿ ಚಾಂಪಿಯನ್‌ ಜರ್ಮನಿ ನಡುವಿನ 15ನೇ ಆವೃತ್ತಿ ಹಾಕಿ ವಿಶ್ವಕಪ್‌ನ ರೋಚಕ ಹಣಾಹಣಿ 2-2 ಗೋಲುಗಳಲ್ಲಿ ಡ್ರಾಗೊಂಡಿದೆ. ಇದರೊಂದಿಗೆ ‘ಡಿ’ ಗುಂಪಿನಲ್ಲಿ ಬೆಲ್ಜಿಯಂ 4 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರೆ, ಅಷ್ಟೇ ಅಂಕ ಹೊಂದಿರುವ ಜರ್ಮನಿ 2ನೇ ಸ್ಥಾನದಲ್ಲಿದೆ. ಬೆಲ್ಜಿಯಂಗೆ ಕೊನೆ ಪಂದ್ಯದಲ್ಲಿ ಜಪಾನ್‌, ಜರ್ಮನಿಗೆ ಕೊರಿಯಾ ಸವಾಲು ಎದುರಾಗಲಿದೆ. ಕೊನೆ ಪಂದ್ಯದ ಫಲಿತಾಂಶ ಗುಂಪಿನಿಂದ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ತಂಡವನ್ನು ನಿರ್ಧರಿಸಲಿದೆ.

ಪಂದ್ಯದ 9ನೇ ನಿಮಿಷದಲ್ಲೇ ಚಾರ್ಲಿಯರ್‌ ಸೆಡ್ರಿಕ್‌ ಗೋಲು ಬಾರಿಸಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರೂ, 22ನೇ ನಿಮಿಷದಲ್ಲಿ ಜರ್ಮನಿ ಸಮಬಲ ಸಾಧಿಸಿತು. 52ನೇ ನಿಮಿಷದಲ್ಲಿ ಗ್ರಾಮ್‌ಬಶ್‌ ಟಾಂ ಪೆನಾಲ್ಟಿಶೂಟೌಟ್‌ ಮೂಲಕ ಗೋಲು ದಾಖಲಿಸಿ ಜರ್ಮನಿಗೆ ಗೆಲುವಿನ ನಿರೀಕ್ಷೆ ಮೂಡಿಸಿದರು. ಆದರೆ 54ನೇ ನಿಮಿಷದಲ್ಲಿ ಬೆಲ್ಜಿಯಂನ ವಿಕ್ಟರ್‌ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಮಂಗಳವಾರ ಮತ್ತೊಂದು ಪಂದ್ಯದಲ್ಲಿ ಜಪಾನ್‌ ವಿರುದ್ಧ ಕೊರಿಯಾ 2-1 ಗೋಲುಗಳಿಂದ ಗೆಲುವು ದಾಖಲಿಸಿತು.

click me!