Women's Asia Cup: ಬಲಿಷ್ಠ ಭಾರತಕ್ಕಿಂದು ಪಾಕ್‌ ಸವಾಲು..!

By Kannadaprabha NewsFirst Published Oct 7, 2022, 11:59 AM IST
Highlights

ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಭಾರತ-ಪಾಕಿಸ್ತಾನ ಕಾದಾಟ
ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಭಾರತ
ಪಾಕಿಸ್ತಾನ ಎದುರು ಸವಾರಿ ಮಾಡಲು ಸಜ್ಜಾದ ಹರ್ಮನ್‌ಪ್ರೀತ್ ಕೌರ್ ಪಡೆ

ಸೈಲೆಟ್‌(ಬಾಂಗ್ಲಾದೇಶ): ಹ್ಯಾಟ್ರಿಕ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಶುಕ್ರವಾರ ಬದ್ಧವೈರಿ ಪಾಕಿಸ್ತಾನವನ್ನು ಬಗ್ಗುಬಡಿದು ಸೆಮಿಫೈನಲ್‌ನಲ್ಲಿ ಸ್ಥಾನವನ್ನುಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಮತ್ತೊಂದೆಡೆ ಗುರುವಾರ ಥಾಯ್ಲೆಂಡ್‌ ವಿರುದ್ಧ ಸೋತು ಆಘಾತಕ್ಕೊಳಗಾಗಿರುವ ಪಾಕಿಸ್ತಾನ, ಪುಟಿದೇಳಬೇಕಾದ ಒತ್ತಡಕ್ಕೆ ಸಿಲುಕಿದೆ.

ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ಭಾರತ, ಅಷ್ಟೇ ಪರಿಣಾಮಕಾರಿ ಬೌಲಿಂಗ್‌ ಪಡೆಯನ್ನೂ ಹೊಂದಿದೆ. ಬಹುತೇಕ ಆಟಗಾರ್ತಿಯರು ಉತ್ತಮ ಲಯದಲ್ಲಿದ್ದು, ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್‌, ಜೆಮಿಮಾ ರೋಡ್ರಿಗಸ್‌, ದೀಪ್ತಿ ಶರ್ಮಾ ಈಗಾಗಲೇ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಿ ಗಮನ ಸೆಳೆದಿದ್ದಾರೆ. ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್‌, ರಾಜೇಶ್ವರಿ ಗಾಯಕ್ವಾಡ್‌ ವಿಕೆಟ್‌ ಕಬಳಿಸುವುದರ ಜೊತೆಗೆ ರನ್‌ ನಿಯಂತ್ರಿಸುವಲ್ಲೂ ಮೇಲುಗೈ ಸಾಧಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತ 12 ಟಿ20 ಪಂದ್ಯಗಳನ್ನು ಆಡಿದ್ದು, 10ರಲ್ಲಿ ಜಯಿಸಿ ಕೇವಲ 2ರಲ್ಲಿ ಸೋಲುಂಡಿದೆ. ಇದೀಗ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ ಇದೆ. ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸುಲಭವಾಗಿ ಜಯಿಸಿತ್ತು. ಪಾಕಿಸ್ತಾನ ವಿರುದ್ಧ ಆಡಿರುವ ಕಳೆದ 5 ಟಿ20 ಪಂದ್ಯಗಳಲ್ಲೂ ಭಾರತ ಗೆದ್ದಿರುವುದು ವಿಶೇಷ.

ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಟಿ20: 77 ಎಸೆತದಲ್ಲಿ ಕಾರ್ನ್‌ವಾಲ್‌ 205 ರನ್‌!

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಸಾಧನೆಯನ್ನು ವಿಂಡೀಸ್‌ ಕ್ರಿಕೆಟಿಗ ರಖೀಮ್‌ ಕಾರ್ನ್‌ವಾಲ್‌ ಮಾಡಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಅಟ್ಲಾಂಟಾ ಓಪನ್‌ ಟಿ20 ಲೀಗ್‌ನಲ್ಲಿ ಅಟ್ಲಾಂಟಾ ಫೈಯರ್‌ ತಂಡದ ಪರ ಆಡುತ್ತಿರುವ ರಖೀಮ್‌, ಸ್ಕ್ವೇರ್‌ ಡ್ರೈವ್‌ ತಂಡದ ವಿರುದ್ಧ 77 ಎಸೆತಗಳಲ್ಲಿ ಬರೋಬ್ಬರಿ 205 ರನ್‌ ಸಿಡಿಸಿದರು. ಅವರ ಇನ್ನಿಂಗ್‌್ಸನಲ್ಲಿ 17 ಬೌಂಡರಿ, 22 ಸಿಕ್ಸರ್‌ಗಳಿದ್ದವು. ಅಟ್ಲಾಂಟಾ ಫೈಯರ್‌ ತಂಡ 1 ವಿಕೆಟ್‌ಗೆ 326 ರನ್‌ ಗಳಿಸಿತು. ಸ್ಕ್ವೇರ್‌ ಡ್ರೈವ್‌ ತಂಡ 8 ವಿಕೆಟ್‌ಗೆ 154 ರನ್‌ ಗಳಿಸಿ 172 ರನ್‌ ಸೋಲು ಕಂಡಿತು. 

ಬೊಗಳೊ ನಾಯಿಗೆ ಕಲ್ಲೆಸೆದರೆ ಗುರಿ ತಲುಪಲಾಗಲ್ಲ: ಬುಮ್ರಾ ಹೀಗಂದಿದ್ದೇಕೆ..?

ಇದು ಐಸಿಸಿಯಿಂದ ಮಾನ್ಯತೆ ಪಡೆಯದ ಲೀಗ್‌ ಆಗಿರುವ ಕಾರಣ ಟಿ20 ದಾಖಲೆಗಳಿಗೆ ರಖೀಮ್‌ರ ದ್ವಿಶತಕವನ್ನು ಪರಿಗಣಿಸುವುದಿಲ್ಲ. ಟಿ20ಯಲ್ಲಿ ಅತಿಹೆಚ್ಚು ರನ್‌ ಬಾರಿಸಿದ ವಿಶ್ವ ದಾಖಲೆ ಕ್ರಿಸ್‌ ಗೇಲ್‌ (175 ರನ್‌) ಹೆಸರಲ್ಲೇ ಉಳಿಯಲಿದೆ.

ರೇಪ್‌: ನೇಪಾಳ ಕ್ರಿಕೆಟಿಗ ಸಂದೀಪ್‌ ಪೊಲೀಸ್‌ ವಶಕ್ಕೆ

ಕಾಠ್ಮಂಡು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸೆಗಿದ ಆರೋಪ ಎದುರಿಸುತ್ತಿರುವ ನೇಪಾಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಂದೀಪ್‌ ಲಮಿಚ್ಚಾನೆ ಗುರುವಾರ ತವರಿಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾರೆ. 

ಕಳೆದ ತಿಂಗಳು ಪ್ರಕರಣ ದಾಖಲಾದಾಗ ಅವರು ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿದ್ದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುತ್ತಿದ್ದರು. ಟೂರ್ನಿ ಮುಗಿದ ಬಳಿಕ ಅವರು ನೇಪಾಳಕ್ಕೆ ವಾಪಸಾಗಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಸಂದೀಪ್‌ ವಿಂಡೀಸ್‌ನಲ್ಲೇ ಉಳಿದ ಕಾರಣ ಅವರ ಮೇಲೆ ಬಂಧನ ವಾರೆಂಟ್‌ ಜಾರಿ ಮಾಡಲಾಗಿತ್ತು. ಬುಧವಾರ ತಮ್ಮ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ತಾವು ಕಾಠ್ಮಂಡುಗೆ ಆಗಮಿಸುತ್ತಿರುವ ವಿಮಾನದ ವಿವರಗಳನ್ನು ಹಾಕಿ, ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದರು. ಅವರು ಆಗಮಿಸುತ್ತಿದ್ದಂತೆ ಏರ್‌ಪೋರ್ಚ್‌ನಲ್ಲೇ ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಕರೆದೊಯ್ದರು.

click me!