
ಅಹಮದಾಬಾದ್: ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್, ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯನ್ನು ಬಿಟ್ಟು ಐಪಿಎಲ್ ಆಡಲು ಭಾರತಕ್ಕೆ ಬಂದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಹಮಾನುಲ್ಲಾ ಗುರ್ಬಾಜ್, ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಆದರೆ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಆರಂಭಿಕನಾಗಿ ಇನಿಂಗ್ಸ್ ಆರಂಭಿಸುತ್ತಿದ್ದಿದ್ದರಿಂದ ರಹಮಾನುಲ್ಲಾ ಗುರ್ಬಾಜ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದೆಲ್ಲದರ ನಡುವೆ ಅವರ ತಾಯಿಗೆ ಆರೋಗ್ಯ ಹದಗೆಟ್ಟಿದ್ದರಿಂದಾಗಿ ರಹಮಾನುಲ್ಲಾ ಗುರ್ಬಾಜ್, ಅರ್ಧದಲ್ಲೇ ಐಪಿಎಲ್ ತೊರೆದು ಆಫ್ಘಾನಿಸ್ತಾನಕ್ಕೆ ವಾಪಾಸ್ಸಾಗಿದ್ದರು. ಆದರೆ ಪ್ಲೇ ಆಫ್ ಪಂದ್ಯಕ್ಕೂ ಮುನ್ನ ಫಿಲ್ ಸಾಲ್ಟ್ ನ್ಯಾಷನಲ್ ಡ್ಯೂಟಿ ಮಾಡಲು ಐಪಿಎಲ್ ತೊರೆದಿದ್ದರು. ಹೀಗಾಗಿ ಗುರ್ಬಾಜ್‌ಗೆ ಮತ್ತೆ ಕೆಕೆಆರ್ ಬುಲಾವ್ ನೀಡಿತು.
ಇಂದು ಆರ್‌ಸಿಬಿ vs ರಾಯಲ್ಸ್ ಐಪಿಎಲ್ ಎಲಿಮಿನೇಟರ್ ಕದನ
"ನನ್ನ ತಾಯಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೆಕೆಆರ್ ಸಹ ನನ್ನ ಕುಟುಂಬ ಹೀಗಾಗಿ ಅಫ್ಘಾನಿಸ್ತಾನದಿಂದ ಮರಳಿ ಬಂದೆ ಎಂದು ತಂಡದ ವಿಕೆಟ್ ಕೀಪರ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಹೇಳಿದ್ದಾರೆ.
ಐಪಿಎಲ್ ಪ್ಲೇ-ಆಫ್‌ನ ಕ್ವಾಲಿಫೈಯರ್-1 ಪಂದ್ಯದಲ್ಲಿ ಕೆಕೆಆರ್ ಜಯ ಸಾಧಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರ್ಬಾಜ್, ‘ಫಿಲ್ ಸಾಲ್ಟ್ ಇಂಗ್ಲೆಂಡ್‌ಗೆ ವಾಪಸಾಗುತ್ತಿದ್ದು, ನಿಮ್ಮ ಅಗತ್ಯತೆ ತಂಡಕ್ಕಿದೆ ಎಂದು ಕೆಕೆಆರ್‌ನಿಂದ ಕರೆ ಬಂದಾಗ ನಾನು ಬರುವುದಿಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ತಾಯಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಬಂದಿದ್ದೇನೆ. ಕೆಕೆಆರ್ ಸಹ ನನ್ನ ಕುಟುಂಬವಿದ್ದಂತೆ’ ಎಂದರು.
ಅಯ್ಯರ್ ಜುಗಲ್ಬಂದಿ; ಸನ್‌ರೈಸರ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಕೆಕೆಆರ್..!
ಸನ್‌ರೈಸರ್ಸ್ ಹೈದರಾಬಾದ್ ತಂಡವು 160 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಈ ಸಂದರ್ಭದಲ್ಲಿ ಈ ಆವೃತ್ತಿಯಲ್ಲಿ ಮೊದಲ ಐಪಿಎಲ್ ಪಂದ್ಯವನ್ನಾಡಿದ ಗುರ್ಬಾಜ್ ಕೇವಲ 14 ಎಸೆತಗಳಲ್ಲಿ 23 ರನ್ ಸಿಡಿಸುವ ಮೂಲಕ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟರು.
4ನೇ ಬಾರಿ ಐಪಿಎಲ್ ಫೈನಲ್‌ಗೆ ಕೆಕೆಆರ್!
ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮೆರೆದು ಪ್ಲೇ-ಆಫ್ ಪ್ರವೇಶಿಸಿದ್ದ 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಕ್ವಾಲಿಫೈಯರ್-1 ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ 8 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿ, ಐಪಿಎಲ್ ಇತಿಹಾಸದಲ್ಲೇ 4ನೇ ಬಾರಿ ಫೈನಲ್‌ಗೆ ಎಂಟ್ರಿ ಕೊಟ್ಟಿತು.
ಟೂರ್ನಿಯಲ್ಲಿ ಸನ್‌ರೈಸರ್ಸ್‌ನ ಆರ್ಭಟ ಗಮನಿಸಿದ್ದರೆ ನಾಕೌಟ್ ಪಂದ್ಯ ಏಕಮುಖವಾಗಿ ಕೊನೆಗೊಳ್ಳಲಿದೆ ಎಂದು ಯಾರೂ ಭಾವಿಸಿರಲಿಕ್ಕಿಲ್ಲ. ಆದರೆ ನಿಖರ ದಾಳಿ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೋಲ್ಕತಾ, ಸನ್‌ರೈಸರ್ಸ್‌ನ ಸುಲಭದಲ್ಲಿ ಕಟ್ಟಿಹಾಕಿತು.
ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ 19.3 ಓವರಲ್ಲಿ 159ಕ್ಕೆ ಸರ್ವಪತನ ಕಂಡಿತು. ಈ ಮೊತ್ತ ಕೆಕೆಆರ್‌ಗೆ ಸುಲಭ ತುತ್ತಾಯಿತು. 13.4 ಓವರಲ್ಲೇ ಗುರಿ ಬೆನ್ನತ್ತಿ ಗೆಲುವಿನ ಕೇಕೆ ಹಾಕಿತು.
4ನೇ ಓವರಲ್ಲಿ ರಹ್ಮಾನುಲ್ಲಾ ಗುರ್ಬಾಜ್(23), 7ನೇ ಓವರಲ್ಲಿ ನರೈನ್(21) ಔಟಾದರೂ, 3ನೇ ವಿಕೆಟ್‌ಗೆ ಜೊತೆಯಾದ ವೆಂಕಟೇಶ್ ಅಯ್ಯರ್ ಹಾಗೂ ಶ್ರೇಯಸ್ ಅಯ್ಯರ್ ಸನ್‌ರೈಸರ್ಸ್ ಬೌಲರ್‌ಗಳ ಚಳಿ ಬಿಡಿಸಿದರು. ಈ ಜೋಡಿ 44 ಎಸೆತಗಳಲ್ಲೇ 97 ರನ್ ಚಚ್ಚಿತು. ಶ್ರೇಯಸ್ 24 ಎಸೆತಗಳಲ್ಲಿ ಔಟಾಗದೆ 58, ವೆಂಕಟೇಶ್ 28 ಎಸೆಗಳಲ್ಲಿ ಔಟಾಗದೆ 51 ರನ್ ಸಿಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.