
ಲಂಡನ್: ಇಪ್ಪತ್ತೊಂದನೇ ಶತಮಾನದ ಅತ್ಯುತ್ತಮ ಟೆಸ್ಟ್ XI ತಂಡವನ್ನು ವಿಸ್ಡನ್ ಪ್ರಕಟಿಸಲಾಗಿದೆ. ಭಾರತದಿಂದ ಕೇವಲ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದು, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದ ಐವರು ಮತ್ತು ದಕ್ಷಿಣ ಆಫ್ರಿಕಾದ ನಾಲ್ವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ಒಬ್ಬರೂ ಆಟಗಾರರು ತಂಡದಲ್ಲಿಲ್ಲ. ಇಂಗ್ಲೆಂಡ್ ತಾರೆ ಜೋ ರೂಟ್‌ಗೆ ಸ್ಥಾನ ಸಿಗದಿರುವುದು ಇಂಗ್ಲಿಷ್ ಅಭಿಮಾನಿಗಳಿಗೂ ಅಚ್ಚರಿಗೆ ಕಾರಣವಾಗಿದೆ.
2000 ಜನವರಿ ಒಂದರಿಂದ ಆಟಗಾರರ ಪ್ರದರ್ಶನವನ್ನು ಮಾತ್ರ ಪರಿಗಣಿಸಿ ವಿಶ್ವ ಟೆಸ್ಟ್ XI ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ವಿಸ್ಡನ್ ತಿಳಿಸಿದೆ. ವಿಸ್ಡನ್.ಕಾಮ್‌ನ ವ್ಯವಸ್ಥಾಪಕ ಸಂಪಾದಕ ಬೆನ್ ಗಾರ್ಡ್ನರ್, ವಿಸ್ಡನ್ ಪತ್ರಿಕೆಯ ಮುಖ್ಯ ಸಂಪಾದಕ ಫಿಲ್ ವಾಕರ್ ಮತ್ತು ಪಾಡ್‌ಕ್ಯಾಸ್ಟ್ ನಿರೂಪಕ ಯಶ್ ರಾಣ 21ನೇ ಶತಮಾನದ ವಿಶ್ವ ಟೆಸ್ಟ್ XI ತಂಡವನ್ನು ಆಯ್ಕೆ ಮಾಡಿದ್ದಾರೆ.
ವಿಶ್ವ ಟೆಸ್ಟ್ XI ತಂಡದ ಆರಂಭಿಕ ಆಟಗಾರನಾಗಿ ಭಾರತದ ಸ್ಫೋಟಕ ಆರಂಭಿಕ ವಿರೇಂದ್ರ ಸೆಹ್ವಾಗ್ ಆಯ್ಕೆಯಾಗಿದ್ದಾರೆ. ಅಲಿಸ್ಟರ್ ಕುಕ್ ಮತ್ತು ಮ್ಯಾಥ್ಯೂ ಹೇಡನ್ ಅವರನ್ನು ಹಿಂದಿಕ್ಕಿ ವಿರೇಂದ್ರ ಸೆಹ್ವಾಗ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಸೆಹ್ವಾಗ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಆಡಲಿದ್ದಾರೆ. ಸಚಿನ್, ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರನ್ನು ಹಿಂದಿಕ್ಕಿ ನಾಲ್ಕನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾಕ್ ಕಾಲಿಸ್ ಆಡಲಿದ್ದಾರೆ.
ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನಾಡಿದ ಮೊದಲ ಹಾಗೂ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಇಂದಿಗೂ ತೆಂಡೂಲ್ಕರ್ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ಹೀಗಿದ್ದೂ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ತಂಡದಲ್ಲಿ ತೆಂಡೂಲ್ಕರ್‌ಗೆ ಸ್ಥಾನ ಸಿಕ್ಕಿಲ್ಲ. ಇದರ ಜತೆಗೆ ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ವಿರಾಟ್ ಕೊಹ್ಲಿ, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೂ ವಿಸ್ಡನ್ ಶತಮಾನದ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಐದನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆಡಲಿದ್ದಾರೆ. ವಿಕೆಟ್ ಕೀಪರ್ ಆಗಿ ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ಆಯ್ಕೆಯಾಗಿದ್ದಾರೆ. ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆಸ್ಟ್ರೇಲಿಯಾದ ಶೇನ್ ವಾರ್ನ್ ಆಯ್ಕೆಯಾಗಿದ್ದಾರೆ. ವೇಗದ ಬೌಲರ್‌ಗಳಾಗಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಭಾರತದ ಜಸ್ಪ್ರೀತ್ ಬುಮ್ರಾ ಆಯ್ಕೆಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಜಗತ್ತಿನ ಯಾವುದೇ ಮೈದಾನದಲ್ಲಿ ಬೇಕಿದ್ದರೂ ಮಾರಕ ದಾಳಿ ನಡೆಸುವ ಮೂಲಕ ಎದುರಾಳಿ ಬ್ಯಾಟರ್ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.
ಸದ್ಯ ವಿಸ್ಡನ್ ಆಯ್ಕೆ ಮಾಡಿದ 21ನೇ ಶತಮಾನದ ವಿಶ್ವ ಟೆಸ್ಟ್ 11 ತಂಡದಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ ಎನ್ನುವುದು ವಿಶೇಷ.
ವಿರೇಂದ್ರ ಸೆಹ್ವಾಗ್, ಗ್ರೇಮ್ ಸ್ಮಿತ್, ರಿಕಿ ಪಾಂಟಿಂಗ್, ಜಾಕ್ ಕಾಲಿಸ್, ಎಬಿ ಡಿವಿಲಿಯರ್ಸ್, ಆಡಮ್ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ಪ್ಯಾಟ್ ಕಮಿನ್ಸ್, ಡೇಲ್ ಸ್ಟೇನ್, ಜಸ್ಪ್ರೀತ್ ಬುಮ್ರಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.