ಆರ್ಶದೀಪ್‌ಗಾಗಿ ಶಿವಂ ಮಾವಿ ಬೆಂಚ್ ಕಾಯಿಸಿದರೇ ದುರಾದೃಷ್ಟಕರ: ಇರ್ಫಾನ್ ಪಠಾಣ್

By Naveen KodaseFirst Published Jan 5, 2023, 6:20 PM IST
Highlights

ಭಾರತ-ಶ್ರೀಲಂಕಾ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
ಎರಡನೇ ಟಿ20 ಪಂದ್ಯಕ್ಕೂ ಮುನ್ನ ಫಿಟ್ ಆದ ಆರ್ಶದೀಪ್ ಸಿಂಗ್
ಆರ್ಶದೀಪ್ ತಂಡ ಕೂಡಿಕೊಂಡರೇ ಯಾರಿಗೆ ರೆಸ್ಟ್‌


ಪುಣೆ(ಜ.05): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಎರಡನೇ ಟಿ20 ಪಂದ್ಯ ಜರುಗಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲಿ 2 ರನ್‌ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಇದೀಗ ಎರಡನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಲಂಕಾ ಎದುರು ಟೀಂ ಇಂಡಿಯಾ ಗೆಲುವು ಸಾಧಿಸುವಲ್ಲಿ ಭಾರತದ ವೇಗಿಗಳು ಮಹತ್ತರ ಪಾತ್ರವನ್ನು ವಹಿಸಿದ್ದರು. ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ವೇಗಿ ಶಿವಂ ಮಾವಿ 22 ರನ್‌ ನೀಡಿ 4 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ ಹಾಗೂ ಹರ್ಷಲ್ ಪಟೇಲ್‌ ತಲಾ ಎರಡೆರಡು ವಿಕೆಟ್ ಪಡೆದರು. ಇದೀಗ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಎಡಗೈ ವೇಗಿ ಆರ್ಶದೀಪ್ ಸಿಂಗ್ ಸಂಪೂರ್ಣ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯವಾಗಿದ್ದಾರೆ. ಹೀಗಾಗಿ ಓರ್ವ ವೇಗಿ ತಂಡದಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಇದೆ.

ಇನ್ನು ಈ ಕುರಿತಂತೆ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌, " ಇಂಥಹ ಅದ್ಭುತ ಪ್ರದರ್ಶನದ ಹೊರತಾಗಿಯೂ ಒಂದು ವೇಳೆ ಶಿವಂ ಮಾವಿ ತಂಡದಿಂದ ಹೊರಗುಳಿಯಬೇಕಾಗಿ ಬಂದರೆ ನಿಜಕ್ಕೂ ದುರಾದೃಷ್ಟವೇ ಸರಿ. ಒಂದು ವೇಳೆ ಆರ್ಶದೀಪ್ ಸಿಂಗ್ ತಂಡದೊಳಗೆ ಬಂದರೆ ಬೇರೆ ಆಯ್ಕೆ ಏನಿದೆ ಹೇಳಿ ಎಂದು ಹೇಳಿದ್ದಾರೆ.

ಆರ್ಶದೀಪ್‌ಗಾಗಿ ಉಮ್ರಾನ್ ಮಲಿಕ್ ಇಲ್ಲವೇ ಹರ್ಷಲ್‌ ಪಟೇಲ್‌ ಅವರನ್ನು ಹೊರಗಿಡಲು ಸಾಧ್ಯವೇ? ಯಾಕೆಂದರೆ ಆರ್ಶದೀಪ್‌ ಸಿಂಗ್‌ ಕಳೆದ ಒಂದೂವರೆ ವರ್ಷದಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಆರ್ಶದೀಪ್ ತಂಡ ಕೂಡಿಕೊಂಡ ಬಳಿಕ ಯಾರನ್ನು ಹೊರಗಿಡಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಪಠಾಣ್ ಹೇಳಿದ್ದಾರೆ.

click me!