
ಹರಾರೆ: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಧೂಳೀಪಟ ಮಾಡಿದ ವೈಭವ್ ಸೂರ್ಯವಂಶಿ ಬಗ್ಗೆ ಈಗ ಎಲ್ಲೆಡೆ ಚರ್ಚೆ ಜೋರಾಗಿದೆ. ಈ 14 ವರ್ಷದ ಹುಡುಗನ ಸ್ಫೋಟಕ ಬ್ಯಾಟಿಂಗ್ ನೋಡಿ, 'ಈತನನ್ನು ಯಾಕೆ ಟಿ20 ವಿಶ್ವಕಪ್‌ಗೆ ಆಡಿಸಬಾರದು?' ಅಂತ ಕ್ರಿಕೆಟ್ ಫ್ಯಾನ್ಸ್ ಪ್ರಶ್ನೆ ಎತ್ತಿದ್ದಾರೆ. ಅಭಿಷೇಕ್ ಶರ್ಮಾ ಜೊತೆ ವೈಭವ್ ಸೂರ್ಯವಂಶಿ ಓಪನಿಂಗ್ ಬಂದರೆ ಅದೊಂದು ಬೆಂಕಿ ಜೊತೆಯಾಟ ಆಗಲಿದೆ ಎಂದೂ ಹೇಳುತ್ತಿದ್ದಾರೆ. ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಕೇವಲ 80 ಬಾಲ್‌ನಲ್ಲಿ 175 ರನ್ ಸಿಡಿಸಿದ ವೈಭವ್‌ನನ್ನು ಸೀನಿಯರ್ ಟೀಮ್‌ಗೆ ಸೇರಿಸಿಕೊಳ್ಳಬೇಕೆಂದು ಮಾಜಿ ಆಟಗಾರರೂ ಸಹ ಒತ್ತಾಯಿಸಿದ್ದಾರೆ. ಆದರೆ, ಬಿಸಿಸಿಐ ಮನಸ್ಸು ಮಾಡಿದರೂ ಸದ್ಯಕ್ಕೆ ಅದು ಸಾಧ್ಯವಿಲ್ಲ. ಇದು ಅಚ್ಚರಿ ಎನಿಸಿದ್ರೂ ಸತ್ಯ.
ವೈಭವ್ ಸೂರ್ಯವಂಶಿಯನ್ನು ಸೀನಿಯರ್ ಟೀಮ್‌ಗೆ ಆಯ್ಕೆ ಮಾಡಲು ಇರುವ ಅತಿದೊಡ್ಡ ಅಡ್ಡಿ ಅಂದ್ರೆ ಐಸಿಸಿಯ ವಯಸ್ಸಿನ ನಿಯಮ. 2020ರಲ್ಲಿ ಐಸಿಸಿ ಒಂದು ಹೊಸ ರೂಲ್ ಜಾರಿಗೆ ತಂದಿದೆ. ಅದರ ಪ್ರಕಾರ, ಅಂತರಾಷ್ಟ್ರೀಯ ಸೀನಿಯರ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಬೇಕಾದರೆ ಆಟಗಾರನಿಗೆ ಕನಿಷ್ಠ 15 ವರ್ಷ ಆಗಿರಲೇಬೇಕು. ವೈಭವ್ ಹುಟ್ಟಿದ್ದು 2011ರ ಮಾರ್ಚ್ 27ರಂದು. ಹಾಗಾಗಿ, 2026ರ ಮಾರ್ಚ್ 27ರ ನಂತರವಷ್ಟೇ ಭಾರತದ ಸೀನಿಯರ್ ತಂಡಕ್ಕೆ ಅವರನ್ನು ಪರಿಗಣಿಸಲು ಸಾಧ್ಯ. ಅಲ್ಲಿಯವರೆಗೂ ಸೆಲೆಕ್ಟರ್‌ಗಳು ಅವರನ್ನು ಆಯ್ಕೆ ಮಾಡುವಂತಿಲ್ಲ.
ವಯಸ್ಸಿನ ಪ್ರಕಾರ ನೋಡಿದರೆ, ವೈಭವ್‌ಗೆ 2028 ಮತ್ತು 2030ರ ಅಂಡರ್-19 ವಿಶ್ವಕಪ್ ಆಡಲು ಅವಕಾಶವಿದೆ. ಆದರೆ, ಇಲ್ಲಿ ಬಿಸಿಸಿಐನ 'ಒಂದು ಟೂರ್ನಿ' ನಿಯಮ ಅಡ್ಡ ಬರುತ್ತೆ. ಬಿಸಿಸಿಐ ಪಾಲಿಸಿ ಪ್ರಕಾರ, ಒಬ್ಬ ಆಟಗಾರ ಒಮ್ಮೆ ಅಂಡರ್-19 ವಿಶ್ವಕಪ್ ಆಡಿದರೆ, ಮತ್ತೆ ಅದೇ ಟೂರ್ನಿಯಲ್ಲಿ ಆಡಲು ಅವಕಾಶವಿಲ್ಲ. ಜೂನಿಯರ್ ಮಟ್ಟದಲ್ಲಿ ನಡೆಯುತ್ತಿದ್ದ ವಯಸ್ಸಿನ ವಂಚನೆ ತಡೆಯಲು, ಹೆಚ್ಚು ಆಟಗಾರರಿಗೆ ಅವಕಾಶ ನೀಡಲು ಮತ್ತು ಯುವ ಪ್ರತಿಭೆಗಳನ್ನು ಸೀನಿಯರ್ ಮಟ್ಟಕ್ಕೆ ಬೆಳೆಸಲು ಬಿಸಿಸಿಐ 2016ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಹೀಗಾಗಿ, ವೈಭವ್ 2028ರ ಅಂಡರ್-19 ವಿಶ್ವಕಪ್‌ನಲ್ಲಿ ಆಡುವಂತಿಲ್ಲ.
ನಿನ್ನೆ ನಡೆದ ಫೈನಲ್‌ನಲ್ಲಿ ವೈಭವ್ 80 ಎಸೆತಗಳಲ್ಲಿ 175 ರನ್ ಗಳಿಸಿ, ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆ ಬರೆದರು. ಈ ಪಂದ್ಯದಲ್ಲಿ ವೈಭವ್ ಕೇವಲ ಬೌಂಡರಿ, ಸಿಕ್ಸರ್‌ಗಳಿಂದಲೇ 150 ರನ್ ಸಿಡಿಸಿದರು. ಇದೇ ಪಂದ್ಯದಲ್ಲಿ 15 ಸಿಕ್ಸರ್‌ಗಳನ್ನು ಬಾರಿಸಿದ ಅವರು, ಇಡೀ ಟೂರ್ನಿಯಲ್ಲಿ ಒಟ್ಟು 30 ಸಿಕ್ಸರ್‌ಗಳನ್ನು ಸಿಡಿಸಿ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ವೈಭವ್ ಸೂರ್ಯವಂಶಿ ತಾನಾಡಿದ ಚೊಚ್ಚಲ ಅಂಡರ್-19 ವಿಶ್ವಕಪ್‌ನಲ್ಲೇ ರನ್ ರಾಶಿಯನ್ನು ಗುಡ್ಡೆಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಭಾರತ ಪರ ಏಳು ಪಂದ್ಯಗಳನ್ನಾಡಿದ ವೈಭವ್ ಬರೋಬ್ಬರಿ 62.71ರ ಬ್ಯಾಟಿಂಗ್ ಸರಾಸರಿಯಲ್ಲಿ 169.50 ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ ಮೂರು ಅರ್ಧಶತಕ ಹಾಗೂ ಒಂದು ಶತಕ ಸಹಿತ 439 ರನ್ ಚಚ್ಚಿದರು. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಇನ್ನು ಇಂಗ್ಲೆಂಡ್‌ನ ಬೆನ್ ಮೇಯ್ಸ್ 444 ರನ್ ಸಿಡಿಸಿ ಮೊದಲ ಸ್ಥಾನ ಪಡೆದರು.
ಇಂಗ್ಲೆಂಡ್ ಎದುರಿನ ಫೈನಲ್‌ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದಷ್ಟೇ ಅಲ್ಲದೇ ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರಿಂದ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಜಯಿಸುವಲ್ಲಿ ಯಶಸ್ವಿಯಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.