
ಬೆಂಗಳೂರು: ಮುಂಬೈ ಮೂಲದ ಪ್ರಖ್ಯಾತ ಉದ್ಯಮಿ ರವಿ ಘೈ ಮೊಮ್ಮಗಳು ಸಾನಿಯಾ ಚಾಂದೋಕ್, ಆಗಸ್ಟ್ 13ರಂದು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಸಚಿನ್ ತೆಂಡುಲ್ಕರ್ ಸೊಸೆಯಾಗಲಿರುವ ಸಾನಿಯಾ ಚಾಂದೋಕ್ ಯಾರು ಎನ್ನುವುದನ್ನು ಹುಡುಕಲಾರಂಭಿಸಿದ್ದಾರೆ.
ಕೆಲವರು ಸಾನಿಯಾ ಚಾಂದೋಕ್ ಅಚರ ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನು ಹುಡುಕಾಡಿದ್ದಾರೆ. ಇದರ ನಡುವೆ ಸಾನಿಯಾ ಚಾಂದೋಕ್ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಪ್ರೈವೇಟ್‌ನಲ್ಲಿ ಇಟ್ಟಿದ್ದಾರೆ. ಇದನ್ನು ನೋಡಿದಾಗ ಸಾನಿಯಾ ಚಾಂದೋಕ್, ಇನ್‌ಸ್ಟಾಗ್ರಾಂನಲ್ಲಿ ಅಷ್ಟೊಂದು ಆ್ಯಕ್ಟೀವ್ ಆಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದರ ಜತೆಗೆ ತಮ್ಮ ವೈಯುಕ್ತಿಕ ಜೀವನವನ್ನು ತೀರಾ ಖಾಸಗಿಯಾಗಿಟ್ಟುಕೊಳ್ಳಲು ಬಯಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸಾನಿಯಾ ಚಾಂದೋಕ್ ಓರ್ವ ಮಹಿಳಾ ಉದ್ಯಮಿಯಾಗಿದ್ದು, ಹಲವು ಕಂಪನಿಗಳ ಸಂಸ್ಥಾಪಕಿ ಕೂಡಾ ಹೌದು.
ನಿಶ್ಚಿತಾರ್ಥವು ಖಾಸಗಿ ಸಮಾರಂಭದಲ್ಲಿ ನಡೆದಿದ್ದು, ಆಚರಣೆಗಳನ್ನು ಖಾಸಗಿಯಾಗಿ ಮತ್ತು ಮಾಧ್ಯಮಗಳ ಗಮನದಿಂದ ದೂರವಿರಿಸಲಾಗಿದೆ. ತೆಂಡುಲ್ಕರ್ ಕುಟುಂಬ ಅಥವಾ ಚಾಂದೋಕ್ ಕುಟುಂಬದ ಯಾವುದೇ ಸದಸ್ಯರು ಅಧಿಕೃತ ಹೇಳಿಕೆಗಳು ಅಥವಾ ಫೋಟೋಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ, ನಿಶ್ಚಿತಾರ್ಥ ಆಚರಣೆಗಳ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.
ಈ ಕಂಪನಿಗಳ ಫೌಂಡರ್, ಸಾನಿಯಾ ಚಾಂದೋಕ್:
ಸಾನಿಯಾ ಚಾಂದೋಕ್ ಓರ್ವ ದೊಡ್ಡ ಉದ್ಯಮಿ ಹಿನ್ನಲೆಯುಳ್ಳ ಕುಟುಂಬದಿಂದ ಬಂದ ಯುವತಿಯಾಗಿದ್ದಾರೆ. ಹೀಗಾಗಿ ಸಾನಿಯಾ ಚಾಂದೋಕ್ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆಗುರುತುಗಳನ್ನು ದಾಖಲಿಸಿದ್ದಾರೆ. ಇನ್ನು ಸಾನಿಯಾ ಅವರ ಶಿಕ್ಷಣದ ಕುರಿತಂತೆ ನೋಡುವುದಾದರೇ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಸಾನಿಯಾ ಮುಂಬೈನಲ್ಲಿ ಪೆಟ್ ಸೆಲ್ಯೂನ್, ಸ್ಪಾ ಹಾಗೂ ಸ್ಟೋರ್, ಮಿಸ್ಟರ್ ಫಾಜ್‌ನ ಫೌಂಡರ್ ಕೂಡಾ ಆಗಿದ್ದಾರೆ.
ರವಿ ಘೈ ಕುಟುಂಬವು ಫೈವ್ ಸ್ಟಾರ್ ಇಂಟರ್‌ಕಾಂಟಿನೆಂಟರ್ ಹೋಟೆಲ್‌ಗಳನ್ನು ಹಾಗೂ ಬ್ರೂಕಲೀನ್ ಕ್ರೀಮರಿಯಂತ ಹಲವು ಬ್ರ್ಯಾಂಡ್‌ಗಳ ಮಾಲೀಕರಾಗಿದ್ದಾರೆ. ಇದಷ್ಟೇ ಅಲ್ಲದೇ ಗ್ರೇವಿಸ್ ಗ್ರೂಪ್ ಕೂಡಾ ಘೈ ಕುಟುಂಬದ ಒಡೆತನದಲ್ಲಿದೆ. ಸಾನಿಯಾ ಚಾಂದೋಕ್ ಅವರ ಅಜ್ಜ ರವಿ ಘೈ, ಇಕ್ಬಾಲ್ ಕೃಷ್ಣ ಘೈ ಅಥವಾ IK ಘೈ ಅವರ ಪುತ್ರ, ಅವರು ಪ್ರಸಿದ್ಧ ಕ್ವಾಲಿಟಿ ಐಸ್‌ಕ್ರೀಮ್ ಬ್ರ್ಯಾಂಡ್ ಮತ್ತು ಮುಂಬೈನ ಐಕಾನಿಕ್ ಮೆರೈನ್ ಡ್ರೈವ್‌ನಲ್ಲಿರುವ ಇಂಟರ್‌ಕಾಂಟಿನೆಂಟಲ್ ಮಾಲೀಕರಾಗಿದ್ದಾರೆ. ಇದೀಗ ಅರ್ಜುನ್ ಹಾಗೂ ಸಾನಿಯಾ ಅವರಿಂದ ಮುಂಬೈನ ಎರಡು ಬಲಿಷ್ಠ ಕುಟುಂಬದ ಸಮಾಗಮಕ್ಕೆ ಸಾಕ್ಷಿಯಾದಂತೆ ಆಗಲಿದೆ. ಈ ಎರಡು ಪ್ರಭಾವಿ ಕುಟುಂಬಗಳು ಸಾನಿಯಾ-ಅರ್ಜುನ್ ಮದುವೆ ಯಾವಾಗ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
ಇನ್ನು ಅರ್ಜುನ್ ತೆಂಡುಲ್ಕರ್ ಬಗ್ಗೆ ಹೇಳುವುದಾದರೇ, ತಂದೆ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರೂ, ಅರ್ಜುನ್ ತಮ್ಮ ತಂದೆಯ ಹೆಜ್ಜೆಗುರುತು ಹಿಂಬಾಲಿಸುವಲ್ಲಿ ಯಶಸ್ಸು ದಕ್ಕಲಿಲ್ಲ. ಎಡಗೈ ವೇಗಿಯಾಗಿರುವ ಅರ್ಜನ್ ತೆಂಡುಲ್ಕರ್ ಕಳೆದ ಕೆಲ ವರ್ಷಗಳಿಂದಲೂ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಐಪಿಎಲ್‌ನಲ್ಲಿ ಇನ್ನೂ ಅರ್ಜುನ್ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ದೇಶಿ ಕ್ರಿಕೆಟ್‌ನಲ್ಲಿ ಅರ್ಜುನ್ ತೆಂಡುಲ್ಕರ್ ಗೋವಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಅರ್ಜುನ್ ತೆಂಡೂಲ್ಕರ್ 23.13 ಸರಾಸರಿಯಲ್ಲಿ ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ 532 ರನ್‌ಗಳನ್ನು ಗಳಿಸಿದ್ದಾರೆ ಮತ್ತು 33.51 ಸರಾಸರಿಯಲ್ಲಿ ಮತ್ತು 3.31 ರ ಎಕಾನಮಿ ದರದಲ್ಲಿ 2 ನಾಲ್ಕು ವಿಕೆಟ್‌ಗಳನ್ನು ಮತ್ತು ಐದು ವಿಕೆಟ್‌ಗಳನ್ನು ಸೇರಿದಂತೆ 37 ವಿಕೆಟ್‌ಗಳನ್ನು ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.