ಲೀಸಸ್ಟರ್‌ಶೈರ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ
ಲೀಸಸ್ಟರ್‌ಶೈರ್ ಎದುರು ಮೊದಲ ಇನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಪಡೆದ ಭಾರತ
ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ
ಲೀಸೆಸ್ಟರ್(ಜೂ.25): ಲೀಸೆಸ್ಟರ್‌ಶೈರ್ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಬೌಲಿಂಗ್ ಜೊತೆ ಬ್ಯಾಟಿಂಗ್‌ನಲ್ಲೂ ತಂಡ ಅತ್ಯುತ್ತದ ಪ್ರದರ್ಶನ ತೋರಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ. ಮೊದಲ ದಿನ 8 ವಿಕೆಟ್‌ಗೆ 248 ರನ್ ಗಳಿಸಿದ್ದ ಭಾರತ ಅಷ್ಟಕ್ಕೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಬಳಿಕ ಬ್ಯಾಟಿಂಗ್ ಮಾಡಿದ ಲೀಸೆಸ್ಟರ್‌ಶೈರ್ ಭಾರತದ ವೇಗಿಗಳ ಮುಂದೆ ರನ್ ಗಳಿಸಲು ಪರದಾಡಿತು.
ಲೀಸೆಸ್ಟರ್‌ಶೈರ್ ತಂಡದ ಪರ ಕಣಕ್ಕಿಳಿದಿದ್ದ ಟೀಂ ಇಂಡಿಯಾ (Team India) ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಏಕಾಂಗಿ ಹೋರಾಟ ಪ್ರದರ್ಶಿಸಿ 76 ರನ್ ಸಿಡಿಸಿದರು. ರಿಷಿ ಪಟೇಲ್, ರೋಮನ್ ವಾಕರ್ ಗಳಿಸಿದ ತಲಾ 34 ರನ್ ನೆರವಿನಿಂದ ತಂಡ 246ಕ್ಕೆ ಆಲೌಟ್ ಆಯಿತು. ಭಾರತದ ಪರ ಮೊಹಮದ್ ಶಮಿ, ರವೀಂದ್ರ ಜಡೇಜಾ ತಲಾ 3, ಮೊಹದಮ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು.
ಭಾರತ ಉತ್ತಮ ಆರಂಭ
2 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಒಂದು ವಿಕೆಟ್ ಕಳೆದುಕೊಂಡು 80 ರನ್ ಕಲೆ ಹಾಕಿದ್ದು, ಒಟ್ಟಾರೆ 82 ರನ್ ಮುನ್ನಡೆಯಲ್ಲಿದೆ. ಶುಭ್‌ಮನ್ ಗಿಲ್ 31 ರನ್ ಗಳಿಸಿ ವೇಗಿ ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದ ಶ್ರೀಕರ್ ಭರತ್ ಅಜೇಯ 31 ಹಾಗೂ ಹನುಮ ವಿಹಾರಿ 9 ರನ್ ಬಾರಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಇಂದು 2ನೇ ವನಿತಾ ಟಿ20: ಭಾರತಕ್ಕೆ ಸರಣಿ ಜಯದ ಗುರಿ
ಡಂಬುಲಾ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಶನಿವಾರ ಆತಿಥೇಯರ ವಿರುದ್ಧ 2ನೇ ಪಂದ್ಯವಾಡಲಿದ್ದು, ಸರಣಿ ಕೈ ವಶಪಡಿಸಿಕೊಳ್ಳುವ ಕಾತರದಲ್ಲಿದೆ. ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರೂ ಬೌಲರ್‌ಗಳ ಕೈಚಳಕದಿಂದಾಗಿ 34 ರನ್ ಜಯಗಳಿಸಿತ್ತು. ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ಗೂ ಮುನ್ನ ಸೂಕ್ತ ತಂಡ ಕಟ್ಟುವ ನಿರೀಕ್ಷೆಯಲ್ಲಿರುವ ಭಾರತ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
Eng vs NZ 2ನೇ ಟೆಸ್ಟ್: ಬೇರ್‌ಸ್ಟೋವ್ ಶತಕ, ಕಿವೀಸ್ ಕಂಗಾಲು
ಲೀಡ್ಸ್: ಜಾನಿ ಬೇರ್‌ಸ್ಟೋವ್(130*) ಆಕರ್ಷಕ ಶತಕ ಹಾಗೂ ಓವರ್ಟನ್ ಅಜೇಯ 89 ಅರ್ಧಶತಕ 7ನೇ ವಿಕೆಟ್‌ಗೆ ದ್ವಿಶತಕದ ಜತೆಯಾಟದ ನೆರವಿನಿಂದ ನ್ಯೂಜಿಲೆಂಡ್ ವಿರುದ್ದದ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ದಿಟ್ಟ ತಿರುಗೇಟು ನೀಡಿದೆ. ಮೊದಲ ದಿನದಾಟದಲ್ಲಿ 5 ವಿಕೆಟ್‌ಗೆ 225 ರನ್ ಗಳಿಸಿದ್ದ ಕಿವೀಸ್ ಶುಕ್ರವಾರ 329 ರನ್‌ಗಳಿಗೆ ಸರ್ವಪತನ ಕಂಡಿತು. ಡೇರಲ್ ಮಿಚೆಲ್ ಸರಣಿಯಲ್ಲಿ ಸತತ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. ಇಂಗ್ಲೆಂಡ್ ಪರ ಸ್ಪಿನ್ನರ್ ಜಾಕ್ ಲೀಚ್ 5 ವಿಕೆಟ್ ಕಬಳಿಸಿದರು.
Ranji Trophy Final ಬಲಿಷ್ಠ ಮುಂಬೈಗೆ ತಿರುಗೇಟು ನೀಡಿದ ಮಧ್ಯಪ್ರದೇಶ..!
ಇನ್ನು ಕಿವೀಸ್ ತಂಡವನ್ನು ಆಲೌಟ್ ಮಾಡಿ ಮೊದಲ ಇನಿಂಗ್ಸ್ ಆರಂಭಿಸಿದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ನ್ಯೂಜಿಲೆಂಡ್ ವೇಗಿಗಳು ಶಾಕ್ ನೀಡಿದರು. ಇಂಗ್ಲೆಂಡ್ ತಂಡವು ಕೇವಲ 55 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೇ, ನಾಯಕ ಬೆನ್ ಸ್ಟೋಕ್ಸ್ 18 ರನ್ ಗಳಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್ ಖಾತೆ ತೆರೆಯುವ ಮುನ್ನವೇ ನೀಲ್ ವ್ಯಾಗ್ನರ್‌ಗೆ ವಿಕೆಟ್ ಒಪ್ಪಿಸಿದರು.
7 ನೇ ವಿಕೆಟ್‌ಗೆ ಬೇರ್‌ಸ್ಟೋವ್-ಓವರ್ಟನ್ ಜತೆಯಾಟ: ಹೌದು, ಕೇವಲ 55 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಇಂಗ್ಲೆಂಡ್ ತಂಡಕ್ಕೆ ಜಾನಿ ಬೇರ್‌ಸ್ಟೋವ್ ಹಾಗೂ ಜೇಮಿ ಓವರ್ಟನ್ ಆಸರೆಯಾದರು. ಈ ಜೋಡಿ ಮುರಿಯದ 209 ರನ್‌ಗಳ ಜತೆಯಾಟ ನಿಭಾಯಿಸಿದ್ದು, ಮೂರನೇ ದಿನದಾಟದಲ್ಲಿ ಪಂದ್ಯ ಯಾರ ಕಡೆ ವಾಲಬಹುದು ಎನ್ನುವ ಕುತೂಹಲ ಜೋರಾಗಿದೆ.