
ದುಬೈ(ನ.13): ಟೀಂ ಇಂಡಿಯಾ ಮಾಜಿ ಸ್ಪೋಟಕ ಆರಂಭಿಕ ಬ್ಯಾಟರ್, ಮುಲ್ತಾನಿನ ಸುಲ್ತಾನ ಖ್ಯಾತಿಯ ವಿರೇಂದ್ರ ಸೆಹ್ವಾಗ್ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜತೆಗೆ ಶ್ರೀಲಂಕಾದ ವಿಶ್ವಕಪ್ ಹೀರೋ ಅರವಿಂದ ಡಿ ಸಿಲ್ವಾ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನ ಎಡುಲ್ಜಿಗೂ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿರೇಂದ್ರ ಸೆಹ್ವಾಗ್, ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾಗುತ್ತಿರುವ ಭಾರತದ 8ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಹಾಗೂ ವಿನೂ ಮಂಕಡ್ ಭಾರತದ ಪರ ಹಾಲ್ ಫೇಮ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವಿಶ್ವಕಪ್ ಲೀಗ್ ಹಂತದ ಶ್ರೇಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ..! ವಿರಾಟ್ ಕೊಹ್ಲಿಗೆ ನಾಯಕ ಪಟ್ಟ
ವಿಶ್ವ ಕ್ರಿಕೆಟ್ ಕಂಡಂತ ಸ್ಪೋಟಕ ಆರಂಭಿಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಸಿಡಿಲಮರಿ ಸೆಹ್ವಾಗ್, 23 ಟೆಸ್ಟ್ ಶತಕ ಸಿಡಿಸುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಅತಿಹೆಚ್ಚು ಶತಕ ಸಿಡಿಸಿದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಎರಡು ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಹಾಗೂ ಒಮ್ಮೆ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಸೆಹ್ವಾಗ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೂಡಾ ಹೌದು.
ಇನ್ನು ಡಯಾನ ಎಡುಲ್ಜಿ, ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಭಾರತ ಪರ ಒಟ್ಟಾರೆ 54 ಪಂದ್ಯಗಳನ್ನು ಆಡಿರುವ ಡಯಾನ 109 ವಿಕೆಟ್ ಕಬಳಿಸಿದ್ದಾರೆ.
ವಿರೇಂದ್ರ ಸೆಹ್ವಾಗ್ ಹಾಗೂ ಡಯಾನ ಎಡುಲ್ಜಿ ಜತೆಗೆ ಶ್ರೀಲಂಕಾದ ದಿಗ್ಗಜ ಬ್ಯಾಟರ್ ಅರವಿಂದ ಡಿ ಸಿಲ್ವಾ ಕೂಡಾ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ. ಲಂಕಾ ಪರ ಹಾಲ್ ಆಫ್ ಫೇಮ್ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಡಿ ಸಿಲ್ವಾ ಪಾತ್ರರಾಗಿದ್ದಾರೆ. ಈ ಮೊದಲು ಮುತ್ತಯ್ಯ ಮುರಳೀಧರನ್, ಕುಮಾರ ಸಂಗಕ್ಕರ ಹಾಗೂ ಮಹೇಲಾ ಜಯವರ್ಧನೆ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಪಾತ್ರರಾಗಿದ್ದರು.
ಅರವಿಂದ ಡಿ ಸಿಲ್ವಾ, 1996ರ ಐಸಿಸಿ ಏಕದಿಮ ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸುವ ಮೂಲಕ ಲಂಕಾ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅರವಿಂದ ಡಿ ಸಿಲ್ವಾ ಲಂಕಾ ಪರ 93 ಟೆಸ್ಟ್ ಪಂದ್ಯಗಳನ್ನಾಡಿ 42.97ರ ಬ್ಯಾಟಿಂಗ್ ಸರಾಸರಿಯಲ್ಲಿ 6,361 ರನ್ ಬಾರಿಸಿದ್ದಾರೆ. ಇನ್ನು 29 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 308 ಪಂದ್ಯಗಳನ್ನಾಡಿ 34.90 ಬ್ಯಾಟಿಂಗ್ ಸರಾಸರಿಯಲ್ಲಿ 9284 ರನ್ ಬಾರಿಸಿದ್ದರು. ಇದರ ಜತೆಗೆ 106 ವಿಕೆಟ್ ಕಬಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.