ಅಂತಾರಾಷ್ಟ್ರೀಯ ಟಿ20ಯಿಂದ ದೂರ ಉಳಿದಿರುವ ರೋಹಿತ್ ಶರ್ಮಾ ಅವರನ್ನು, ಡಿ.10ರಿಂದ ನಡೆಯಲಿರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ನಾಯಕತ್ವ ವಹಿಸುವಂತೆ ಶಾ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ(ನ.30): ದಕ್ಷಿಣ ಆಫ್ರಿಕಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ತಲಾ 3 ಪಂದ್ಯಗಳ ಟಿ20, ಏಕದಿನ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಗೆ ಗುರುವಾರ ಭಾರತ ತಂಡದ ಆಯ್ಕೆ ನಡೆಯಲಿದೆ. ಇಲ್ಲಿ ನಡೆಯಲಿರುವ ಸಭೆಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಜೊತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸುದೀರ್ಘ ಚರ್ಚೆ ನಡೆಸಲಿದ್ದು, ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟಲು ನೀಲನಕ್ಷೆ ಸಿದ್ಧಪಡಿಸಲಿದ್ದಾರೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಟಿ20ಯಿಂದ ದೂರ ಉಳಿದಿರುವ ರೋಹಿತ್ ಶರ್ಮಾ ಅವರನ್ನು, ಡಿ.10ರಿಂದ ನಡೆಯಲಿರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ನಾಯಕತ್ವ ವಹಿಸುವಂತೆ ಶಾ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ವಿರಾಟ್ ಕೊಹ್ಲಿ, ದ.ಆಫ್ರಿಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಿಂದ ತಮಗೆ ವಿಶ್ರಾಂತಿ ನೀಡುವಂತೆ ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
undefined
ಭಾರತದ ಕೋಚ್ ಆಗಿ ದ್ರಾವಿಡ್ ಮುಂದುವರಿಕೆ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಮುಂದುವರಿಯಲು ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದು, ಅವರ ಗುತ್ತಿಗೆಯನ್ನು ನವೀಕರಿಸಲಾಗಿದೆ ಎಂದು ಬಿಸಿಸಿಐ ಬುಧವಾರ ಪ್ರಕಟಣೆ ಮೂಲಕ ತಿಳಿಸಿದೆ. ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಆಟವಾಡಿದ ತಂಡವು ತನ್ನ ಪ್ರದರ್ಶನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದ್ದರೆ, ಇದೇ ಕೋಚಿಂಗ್ ಸಿಬ್ಬಂದಿ ಮುಂದುವರಿಯಬೇಕು ಎಂದು ನಿರ್ಧರಿಸಿದ ಬಿಸಿಸಿಐ, ದ್ರಾವಿಡ್‌ರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
2ನೇ ಅವಧಿಯಲ್ಲಿ ದ್ರಾವಿಡ್ ಕೋಚ್ ಆಗಿ ಎಷ್ಟು ಕಾಲ ಇರಲಿದ್ದಾರೆ ಎನ್ನುವುದರ ಬಗ್ಗೆ ಬಿಸಿಸಿಐ ಮಾಹಿತಿ ಹಂಚಿಕೊಂಡಿಲ್ಲವಾದರೂ, 2024ರ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವರೆಗಂತೂ ಅವರು ಹುದ್ದೆಯಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ.
2021ರ ನವೆಂಬರ್‌ನಲ್ಲಿ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್‌ರ ಗುತ್ತಿಗೆಯು ಏಕದಿನ ವಿಶ್ವಕಪ್ ಬಳಿಕ ಮುಕ್ತಾಯಗೊಂಡಿತ್ತು. ಅವರ ಕೋಚಿಂಗ್ ಅವಧಿಯಲ್ಲಿ ಭಾರತ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿತ್ತು. ಇನ್ನು ಏಕದಿನ, ಟೆಸ್ಟ್ ಹಾಗೂ ಟಿ20 ಮೂರೂ ಮಾದರಿಯಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದರೂ, ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಏಕದಿನ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ದ್ರಾವಿಡ್‌ರ ಜೊತೆ ಕಳೆದ 2 ವರ್ಷಗಳಿಂದ ಕೆಲಸ ಮಾಡುತ್ತಿರುವ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಬೌಲಿಂಗ್ ಕೋಚ್ ಪರಾಸ್ ಮ್ಹಾಂಬ್ರೆ, ಫೀಲ್ಡಿಂಗ್ ಕೋಚ್ ಟಿ.ದಿಲೀಪ್‌ರ ಗುತ್ತಿಗೆಗಳನ್ನು ನವೀಕರಿಸಲಾಗಿದೆ. ಕೋಚಿಂಗ್ ಸಿಬ್ಬಂದಿಯ ಮೊದಲ ಸವಾಲು ಡಿ.10ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಆರಂಭಗೊಳ್ಳಲಿದೆ.
ಎನ್‌ಸಿಎ ನಿರ್ದೇಶಕರಾಗಿ ಲಕ್ಷ್ಮಣ್ ಮುಂದುವರಿಕೆ
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ನಿರ್ದೇಶಕರಾಗಿ ಹಾಗೂ ಭಾರತ ತಂಡದ ಮೀಸಲು ಪ್ರಧಾನ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.