ಏಕದಿನ ರ‍್ಯಾಂಕಿಂಗ್ ಅಗ್ರ ಸ್ಥಾನ ಉಳಿಸಿಕೊಂಡ ಕೊಹ್ಲಿ-ರೋಹಿತ್

By Suvarna NewsFirst Published Aug 6, 2020, 10:39 AM IST
Highlights

ಇಂಗ್ಲೆಂಡ್-ಐರ್ಲೆಂಡ್ ನಡುವಿನ ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮೊದಲೆರಡು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದುಬೈ(ಆ.06): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪ​ನಾ​ಯಕ ರೋಹಿತ್‌ ಶರ್ಮಾ, ಐಸಿಸಿ ಏಕ​ದಿನ ರ‍್ಯಾಂಕಿಂಗ್ ಪಟ್ಟಿ​ಯಲ್ಲಿ ಅಗ್ರ 2 ಸ್ಥಾನ​ಗ​ಳಲ್ಲೇ ಮುಂದು​ವ​ರಿ​ದಿದ್ದಾರೆ. 

ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಿನ ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಬುಧ​ವಾರ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿ​ಯನ್ನು ಬಿಡು​ಗಡೆಗೊಳಿ​ಸಿತು. 871 ರೇಟಿಂಗ್ ಅಂಕಗಳೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲೇ ಭದ್ರವಾಗಿದ್ದರೆ, 855 ರೇಟಿಂಗ್ ಅಂಕ ಹೊಂದಿರುವ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಪಾಕಿಸ್ತಾನದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಬಾಬರ್ ಅಜಂ 829 ಅಂಕಗಳೊಂದಿಗೆ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ ಪ್ರಮುಖ ಬದಲಾವಣೆ: ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ 113 ರನ್ ಬಾರಿಸಿದ್ದ ಐರ್ಲೆಂಡ್ ನಾಯಕ ಆಂಡ್ರ್ಯೂ ಬಲ್ಬಿರ್ನ್ ನಾಲ್ಕು ಸ್ಥಾನ ಮೇಲೇರಿ 42ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಅದೇ ಪಂದ್ಯದಲ್ಲಿ ಸ್ಫೋಟಕ ಶತಕ ಚಚ್ಚಿದ ಪೌಲ್ ಸ್ಟೆರ್ಲಿಂಗ್ ಒಂದು ಸ್ಥಾನ ಮೇಲೇರಿ 26ನೇ ಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂಗ್ಲೆಂಡ್ ಪರ ಶತಕ ಸಿಡಿಸಿದ್ದ ಇಯಾನ್ ಮಾರ್ಗನ್ 22ನೇ ಸ್ಥಾನದಲ್ಲಿದ್ದರೆ, ಜಾನಿ ಬೇರ್‌ಸ್ಟೋವ್ 13ನೇ ಸ್ಥಾನಕ್ಕೆ ಮುಂಬಡ್ತಿ ಪಡೆದಿದ್ದಾರೆ.

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಬ್ರಾಡ್‌ಗೆ ಜಾಕ್‌ಪಾಟ್, 8ನೇ ಸ್ಥಾನಕ್ಕೆ ಕುಸಿದ ಬುಮ್ರಾ 
ಇನ್ನು ಏಕದಿನ ಬೌಲರ್‌ಗಳ ಪಟ್ಟಿ​ಯಲ್ಲಿ ಜಸ್‌ಪ್ರೀತ್‌ ಬುಮ್ರಾ 2ನೇ ಸ್ಥಾನ ಕಾಯ್ದು​ಕೊಂಡಿ​ದ್ದಾರೆ. ನ್ಯೂಜಿ​ಲೆಂಡ್‌ನ ಟ್ರೆಂಟ್‌ ಬೌಲ್ಟ್‌ ಮೊದಲ ಸ್ಥಾನ​ದ​ಲ್ಲಿ​ದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ 5 ವಿಕೆಟ್ ಕಬಳಿಸಿದ ಆದಿಲ್ ರಶೀದ್ 4  ಸ್ಥಾನ ಮೇಲೇರಿ 25ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಸರಣಿಯಲ್ಲಿ 8 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದ ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲಿ 6 ಸ್ಥಾನ ಮೇಲೇರಿ 51ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಇಂಗ್ಲೆಂಡ್ ಸರಣಿ ಗೆಲುವಿನೊಂದಿಗೆ ಐಸಿಸಿ ಪುರುಷರ ವಿಶ್ವಕಪ್ ಸೂಪರ್‌ ಲೀಗ್‌ನಲ್ಲಿ 20 ಅಂಕ ಕಲೆ ಹಾಕಿದೆ. ಇನ್ನು ಐರ್ಲೆಂಡ್ ತಂಡ 10 ಅಂಕಗಳಿಸಿದೆ. ಐಸಿಸಿ ಪುರುಷರ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಗರಿಷ್ಠ ಅಂಕಗಳಿಸಿದ 13 ತಂಡಗಳು 2023ರಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ  ಏಕದಿನ ವಿಶ್ವಕಪ್‌ನಲ್ಲಿ ನೇರ ಪ್ರವೇಶ ಪಡೆಯಲಿವೆ.

click me!