ಕೊಹ್ಲಿ-ಪಾಟೀದಾರ್ ಭರ್ಜರಿ ಫಿಫ್ಟಿ: ಆರೆಂಜ್ ಆರ್ಮಿಗೆ RCB ಸವಾಲಿನ ಗುರಿ

By Naveen Kodase  |  First Published Apr 25, 2024, 9:16 PM IST

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರ್‌ಸಿಬಿ ತಂಡಕ್ಕೆ ನಾಯಕ ಫಾಫ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು.


ಹೈದರಾಬಾದ್(ಏ.25): ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಭರ್ಜರಿ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 206 ರನ್ ಬಾರಿಸಿದ್ದು, ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರ್‌ಸಿಬಿ ತಂಡಕ್ಕೆ ನಾಯಕ ಫಾಫ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. 3.5 ಓವರ್‌ಗಳಲ್ಲಿ ಈ ಜೋಡಿ 48 ರನ್‌ಗಳ ಜತೆಯಾಟವಾಡಿತು. ಫಾಫ್ ಡು ಪ್ಲೆಸಿಸ್ 12 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 25 ರನ್ ಬಾರಿಸಿ ನಟರಾಜನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ವಿಲ್ ಜ್ಯಾಕ್ಸ್ ಕೇವಲ 6 ರನ್ ಗಳಿಸಿ ಮಯಾಂಕ್ ಮಾರ್ಕಂಡೆಗೆ ವಿಕೆಟ್ ಒಪ್ಪಿಸಿದರು.

Tap to resize

Latest Videos

ಸೇಡು ತೀರಿಸಲು ಸಜ್ಜಾದ ಆರ್‌ಸಿಬಿ, ಹೈದರಾಬಾದ್ ವಿರುದ್ದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ!

ಅಬ್ಬರಿಸಿದ ಪಾಟೀದಾರ್, ಕೊಹ್ಲಿ ಸೈಲೆಂಟ್ ಫಿಫ್ಟಿ: ಕೇವಲ 65 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಆರ್‌ಸಿಬಿ ತಂಡಕ್ಕೆ ಮೂರನೇ ವಿಕೆಟ್‌ಗೆ ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ ಆಸರೆಯಾದರು. ಒಂದು ಕಡೆ ರಜತ್ ಪಾಟೀದಾರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರೆ, ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಮಯಾಂಕ್ ಮಾರ್ಕಂಡೆ ಒಂದೇ ಓವರ್‌ನಲ್ಲಿ ಪಾಟೀದಾರ್ ಬರೋಬ್ಬರಿ 4 ಸಿಕ್ಸರ್ ಚಚ್ಚಿದರು. ಮೂರನೇ ವಿಕೆಟ್‌ಗೆ ಈ ಜೋಡಿ ಸ್ಪೋಟಕ 65 ರನ್‌ಗಳ ಜತೆಯಾಟವಾಡಿತು. ಪಾಟೀದಾರ್ ಕೇವಲ 20 ಎಸೆತಗಳನ್ನು ಎದುರಿಸಿ 2 ಬೌಂಡರಿ 5 ಸಿಕ್ಸರ್ ಸಹಿತ 50 ರನ್ ಸಿಡಿಸಿ ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 51 ರನ್ ಬಾರಿಸಿ ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿದರು.

100ನೇ ಪಂದ್ಯವಾಡಿದ ಉನಾದ್ಕತ್‌ಗೆ 3 ವಿಕೆಟ್‌: ಇನ್ನು ಐಪಿಎಲ್‌ನಲ್ಲಿ 100ನೇ ಪಂದ್ಯವನ್ನಾಡಿದ ಎಡಗೈ ವೇಗಿ ಜಯದೇವ್ ಉನಾದ್ಕತ್ ಆರ್‌ಸಿಬಿ ತಂಡದ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಸ್ಮರಣೀಯವಾಗಿಸಿಕೊಂಡರು. ಮೊದಲಿಗೆ ಅಪಾಯಕಾರಿ ಬ್ಯಾಟರ್ ಪಾಟೀದಾರ್ ಅವರನ್ನು ಪೆವಿಲಿಯನ್ನಿಗಟ್ಟಿದ ಉನಾದ್ಕತ್ ಆ ಬಳಿಕ ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಲೋಮ್ರಾರ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು.

ಇನ್ನು ಕೊನೆಯಲ್ಲಿ ಕ್ಯಾಮರೋನ್ ಗ್ರೀನ್ 20 ಎಸೆತಗಳನ್ನು ಎದುರಿಸಿ ಅಜೇಯ 37 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಉನಾದ್ಕತ್ 30 ರನ್ ನೀಡಿ 3 ವಿಕೆಟ್ ಪಡೆದರೆ, ಟಿ ನಟರಾಜನ್ 2 ಹಾಗೂ ಪ್ಯಾಟ್ ಕಮಿನ್ಸ್, ಮಯಾಂಕ್ ಮಾರ್ಕಂಡೆ ತಲಾ ಒಂದೊಂದು ವಿಕೆಟ್ ಪಡೆದರು.

click me!