ವಿಜಯ್ ಹಜಾರೆ ಟ್ರೋಫಿ: ಎರಡನೇ ಪಂದ್ಯದಲ್ಲೂ ಅಬ್ಬರಿಸಿದ ಕೊಹ್ಲಿ! ಗುಜರಾತ್ ಎದುರು ವಿರಾಟ್ ಗಳಿಸಿದ ಸ್ಕೋರ್ ಎಷ್ಟು?

Published : Dec 26, 2025, 12:16 PM IST
Virat Kohli

ಸಾರಾಂಶ

2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ, 15 ವರ್ಷಗಳ ಬಳಿಕ ಆಡುತ್ತಿರುವ ವಿರಾಟ್ ಕೊಹ್ಲಿ ಗುಜರಾತ್ ವಿರುದ್ಧ 77 ರನ್ ಗಳಿಸಿ ಶತಕ ವಂಚಿತರಾದರು. ಕೊಹ್ಲಿ ಔಟಾದ ನಂತರ, ನಾಯಕ ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು.

ಬೆಂಗಳೂರು: 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಬರೋಬ್ಬರಿ 15 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ವಿರಾಟ್ ಕೊಹ್ಲಿ, ತಾವಾಡಿದ ಮೊದಲ ಪಂದ್ಯದಲ್ಲಿ ಆಂಧ್ರ ಪ್ರದೇಶ ಎದುರು ಆಕರ್ಷಕ ಶತಕ ಸಿಡಿಸಿದ್ದರು. ಇದೀಗ ಗುಜರಾತ್ ಎದುರಿನ ಎರಡನೇ ಪಂದ್ಯದಲ್ಲೂ ಕಿಂಗ್ ಕೊಹ್ಲಿ ಮತ್ತೊಮ್ಮೆ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದ್ದಾರೆ.

ಹೌದು, ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ ಮೈದಾನದಲ್ಲಿ ಗುಜರಾತ್ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಶತಕದತ್ತ ದಾಪುಗಾಲಿಟ್ಟಿದ್ದರು. ಆದರೆ ಶತಕದ ಹೊಸ್ತಿಲಲ್ಲಿ ವಿಶಾಲ್ ಜೈಸ್ವಾಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಶತಕದ ಹೊಸ್ತಿಲಲ್ಲಿ ಎಡವಿದ ಕೊಹ್ಲಿ:

ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಡೆಲ್ಲಿ ತಂಡವು ಆರಂಭದಲ್ಲೇ ಪ್ರಿಯಾನ್ಶ್‌ ಆರ್ಯಾ ಅವರ ವಿಕೆಟ್ ಕಳೆದುಕೊಂಡಿತು. ಪ್ರಿಯಾನ್ಶ್‌ ಆರ್ಯಾ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್‌ ಮೊರೆ ಹೋದರು. ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಕೊಹ್ಲಿ ಕೇವಲ 29 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಅರ್ಪಿತ್ ರಾಣಾ 72 ಎಸೆತಗಳಲ್ಲಿ 72 ರನ್‌ಗಳ ಜತೆಯಾಟವಾಡಿದರು. ಇದರಲ್ಲಿ ವಿರಾಟ್ ಕೊಹ್ಲಿಯೊಬ್ಬರೇ 61 ರನ್‌ಗಳ ಕಾಣಿಕೆ ನೀಡಿದರು. ಗುಜರಾತ್ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಕೊಹ್ಲಿ ಕೇವಲ 61 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 77 ರನ್ ಸಿಡಿಸಿ ವಿಕೆಟ್ ಕೀಪರ್ ಊರ್ವಿಲ್ ಪಟೇಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಶತಕದತ್ತ ರಿಷಭ್ ಪಂತ್ ದಾಪುಗಾಲು:

ಇನ್ನು ವಿರಾಟ್ ಕೊಹ್ಲಿ ವಿಕೆಟ್ ಪತನವಾದಾಗ ಡೆಲ್ಲಿ ಸ್ಕೋರ್ 21.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಆಗಿತ್ತು. ಈ ವೇಳೆ ಬ್ಯಾಟಿಂಗ್ ಮಾಡಲಿಳಿದ ಡೆಲ್ಲಿ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದು, ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಗುಜರಾತ್ ಎದುರು ರಿಷಭ್ ಪಂತ್ 78 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 70 ರನ್ ಬಾರಿಸಿದ್ದು, ಶತಕದತ್ತ ಮುನ್ನುಗ್ಗುತ್ತಿದ್ದಾರೆ.

ಸದ್ಯ ಡೆಲ್ಲಿ ತಂಡವು 43 ಓವರ್ ಅಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 213 ರನ್ ಬಾರಿಸಿದ್ದು, ಸ್ಪರ್ಧಾತ್ಮಕ ಮೊತ್ತದತ್ತ ದಾಪುಗಾಲಿಡುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳಾ ಟಿ20: ಸರಣಿ ಜಯದ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!
ವಿಜಯ್‌ ಹಜಾರೆ ಟೂರ್ನಿ: ಕೇರಳ ಎದುರು ಕರ್ನಾಟಕಕ್ಕೆ 2ನೇ ಜಯದ ಗುರಿ!