
ಅಹಮದಾಬಾದ್: ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಅನ್ನೋ ಖ್ಯಾತಿ ಇದ್ರೂ, ಪ್ಲೇ-ಆಫ್ ಪಂದ್ಯಗಳಲ್ಲಿ ಮಾತ್ರ ವಿರಾಟ್ ಕೊಹ್ಲಿಗೆ ನಿರಾಸೆ ತಪ್ಪಿಲ್ಲ. ಈ ಬಾರಿಯೂ ಅದೇ ಕಥೆ ಮುಂದುವರೆದಿದೆ.
ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊಹ್ಲಿ ಅರ್ಧಶತಕಕ್ಕೆ ಕೇವಲ 7 ರನ್‌ಗಳಿರುವಾಗ ಔಟಾದರು. ಇದರೊಂದಿಗೆ, ಐಪಿಎಲ್ ಪ್ಲೇ-ಆಫ್‌ಗಳಲ್ಲಿ ಒಂದು ಫಿಫ್ಟಿ ಬಾರಿಸಲು ಕೊಹ್ಲಿ ಇನ್ನೂ ಕಾಯಬೇಕಾಗಿದೆ. ಕಳೆದ 10 ವರ್ಷಗಳಿಂದ ಪ್ಲೇ-ಆಫ್ ಹಂತದಲ್ಲಿ ಅವರಿಂದ ಒಂದೇ ಒಂದು ಅರ್ಧಶತಕ ಕೂಡ ಬಂದಿಲ್ಲ.
ಗುಜರಾತ್ ತಂಡದ ವೇಗದ ಬೌಲಿಂಗ್ ದಾಳಿಯನ್ನು ಎದುರಿಸಿದ ಕೊಹ್ಲಿ, 25 ಎಸೆತಗಳಲ್ಲಿ 172ರ ಸ್ಟ್ರೈಕ್ ರೇಟ್‌ನಲ್ಲಿ 43 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದರು. ಆದರೆ, 9ನೇ ಓವರ್‌ನಲ್ಲಿ ಜೇಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ಬೋಲ್ಡ್ ಆದರು. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊಹ್ಲಿ ಕೊನೆಯ ಬಾರಿಗೆ ಪ್ಲೇ-ಆಫ್‌ನಲ್ಲಿ ಅರ್ಧಶತಕ (54 ರನ್) ಬಾರಿಸಿದ್ದರು. ಅದರ ನಂತರ, ಪ್ಲೇ-ಆಫ್‌ನಲ್ಲಿ ಅವರು ಗಳಿಸಿದ ಅತಿ ಹೆಚ್ಚು ಸ್ಕೋರ್ ಅಂದ್ರೆ ಗುಜರಾತ್ ವಿರುದ್ಧ ಗಳಿಸಿದ ಈ 43 ರನ್‌ಗಳೇ ಆಗಿವೆ.
ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಇದುವರೆಗೆ 17 ಪ್ಲೇ-ಆಫ್ ಪಂದ್ಯಗಳನ್ನು ಆಡಿದ್ದು, ಒಟ್ಟು 396 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ ಎರಡು ಬಾರಿ ಮಾತ್ರ ಅವರಿಗೆ ಅರ್ಧಶತಕದ ಗಡಿ ದಾಟಲು ಸಾಧ್ಯವಾಗಿದೆ. 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗಳಿಸಿದ 70* ರನ್, ಪ್ಲೇ-ಆಫ್‌ನಲ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗಳಿಸಿದ 54 ರನ್‌ಗಳು ಇನ್ನೊಂದು ಅರ್ಧಶತಕ. ಲೀಗ್ ಹಂತದಲ್ಲಿ ರನ್ ಮಳೆ ಸುರಿಸುವ ಕೊಹ್ಲಿ, ನಿರ್ಣಾಯಕ ನಾಕೌಟ್ ಪಂದ್ಯಗಳಲ್ಲಿ ಅದೇ ಆಟವನ್ನು ಮುಂದುವರಿಸಲು ವಿಫಲವಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಕೊಹ್ಲಿ ನಿರಾಸೆ ಮೂಡಿಸಿದರೂ, ನಾಯಕ ರಜತ್ ಪಟಿದಾರ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಬೆಂಗಳೂರು ತಂಡ ಪ್ಲೇ-ಆಫ್ ಇತಿಹಾಸದಲ್ಲೇ ಅತಿ ಹೆಚ್ಚು ಸ್ಕೋರ್ ದಾಖಲಿಸಿತು. ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದ ಪಡಿಡಾರ್, ಆರ್‌ಸಿಬಿಯನ್ನು 254 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಕೊಹ್ಲಿಯ 43 ರನ್‌ಗಳ ಜೊತೆಗೆ, ದೇವದತ್ ಪಡಿಕ್ಕಲ್ (18 ಎಸೆತಗಳಲ್ಲಿ 30) ಮತ್ತು ಕೃನಾಲ್ ಪಾಂಡ್ಯ (28 ಎಸೆತಗಳಲ್ಲಿ 43) ಕೂಡ ಬ್ಯಾಟಿಂಗ್‌ನಲ್ಲಿ ಉತ್ತಮ ಬೆಂಬಲ ನೀಡಿದರು.
ಇನ್ನು ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಜೇಕಬ್ ಡಫಿ, ಭುವನೇಶ್ವರ್ ಕುಮಾರ್, ರಸಿಕ್ ಸಲಂ ಧರ್ ಹಾಗೂ ಕೃನಾಲ್ ಪಾಂಡ್ಯ ಮಾರಕ ದಾಳಿಗೆ ತತ್ತರಿಸಿ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 92 ರನ್ ಅಂತರದ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.