
ಅಹಮದಾಬಾದ್(ಮಾ.12): ಮಾಜಿ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ಹಾಗೂ ಅಕ್ಷರ್ ಪಟೇಲ್ ಮಿಂಚಿನ ಅರ್ಧಶತಕದ ನೆರವಿನಿಂದ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ 571 ರನ್ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಪಡೆ 91 ರನ್‌ಗಳ ಇನಿಂಗ್ಸ್ ಮುನ್ನಡೆ ಗಳಿಸಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ 191 ರನ್‌ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ, ಆರಂಭದಲ್ಲೇ ರವೀಂದ್ರ ಜಡೇಜಾ ವಿಕೆಟ್ ಕಳೆದುಕೊಂಡಿತು. ನಾಲ್ಕನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಜೋಡಿ 64 ರನ್‌ಗಳ ಜತೆಯಾಟವಾಡಿತು. ಜಡೇಜಾ 28 ರನ್ ಬಾರಿಸಿ ಟೋಡ್ ಮರ್ಫಿಗೆ ವಿಕೆಟ್ ಒಪ್ಪಿಸಿದರು.
ಇನ್ನು ಇದಾದ ಬಳಿಕ 5ನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಕೆ ಎಸ್ ಭರತ್ 180 ಎಸೆತಗಳನ್ನು ಎದುರಿಸಿ 84 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 390ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 88 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಬಾರಿಸಿ ಚೊಚ್ಚಲ ಅರ್ಧಶತಕದ ಕನವರಿಕೆಯಲ್ಲಿದ್ದ ಭರತ್‌ಗೆ ನೇಥನ್ ಲಯನ್ ಶಾಕ್ ನೀಡಿದರು. ನೇಥನ್ ಲಯನ್ ಬೌಲಿಂಗ್‌ನಲ್ಲಿ ರಕ್ಷಣಾತ್ಮಕ ಆಡುವ ಯತ್ನದಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ವಿರಾಟ್ ಕೊಹ್ಲಿ 75ನೇ ಶತಕ, 'ಮಹಾಕಾಲ ಶಿವ' ಯಾರನ್ನೂ ಕೈಬಿಡೋದಿಲ್ಲ ಎಂದ ಫ್ಯಾನ್ಸ್!
ಕಿಂಗ್ ಕೊಹ್ಲಿ ಆಕರ್ಷಕ ಶತಕ: ಮಾಜಿ ನಾಯಕ ವಿರಾಟ್ ಕೊಹ್ಲಿ ಬರೋಬ್ಬರಿ 40 ತಿಂಗಳುಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. 2019ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಎದುರು ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು. ಇದೀಗ ಬರೋಬ್ಬರಿ 1205 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಲು ಯಶಸ್ವಿಯಾದರು. ಅಂತಿಮವಾಗಿ ವಿರಾಟ್ ಕೊಹ್ಲಿ 364 ಎಸೆತಗಳನ್ನು ಎದುರಿಸಿ 15 ಬೌಂಡರಿ ಸಹಿತ 186 ರನ್ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸಿದರು.
ಅಕ್ಷರ್-ಕೊಹ್ಲಿ ಜುಗಲ್ಬಂದಿ: ವಿಕೆಟ್ ಕೀಪರ್ ಕೆ ಎಸ್ ಭರತ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಅಕ್ಷರ್ ಪಟೇಲ್, ವಿರಾಟ್ ಕೊಹ್ಲಿ ಜತೆಗೂಡಿ ಆರನೇ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸರಣಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಅಕ್ಷರ್ ಪಟೇಲ್ ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸಿದರು. 6ನೇ ವಿಕೆಟ್‌ಗೆ ಕೊಹ್ಲಿ-ಅಕ್ಷರ್ ಜೋಡಿ 215 ಎಸೆತಗಳನ್ನು ಎದುರಿಸಿ 162 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾಗೆ ಇನಿಂಗ್ಸ್ ಮುನ್ನಡೆ ಒದಗಿಸಿಕೊಡುವಲ್ಲಿ ಯಶಸ್ವಿಯಾದರು. ಅಕ್ಷರ್ ಪಟೇಲ್ 113 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 79 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಆಸ್ಟ್ರೇಲಿಯಾ ಎಚ್ಚರಿಕೆ ಆರಂಭ:
ಇನ್ನು 91 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು ಎಚ್ಚರಿಕೆಯ ಆರಂಭ ಪಡೆದಿದೆ. ಟ್ರಾವಿಸ್ ಹೆಡ್ ಜತೆ ನೈಟ್ ವಾಚ್‌ಮನ್ ರೂಪದಲ್ಲಿ ಮೈದಾನಕ್ಕಿಳಿದ ಮ್ಯಾಥ್ಯೂ ಕುಹ್ನೆಮನ್ ವಿಕೆಟ್ ಬೀಳದಂತೆ ನೋಡಿಕೊಂಡರು. ನಾಲ್ಕನೇ ದಿನದಾಟದಂತ್ಯದ ವೇಳೆಗೆ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 3 ರನ್ ಗಳಿಸಿದ್ದು, ಇನ್ನೂ 88 ರನ್‌ಗಳ ಹಿನ್ನಡೆಯಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.